More

    3ನೇ ದಿನವೂ ಮುಂದುವರಿದ ಬಾಟಲಿಗಾಗಿ ತಳ್ಳಾಟ

    ಹುಬ್ಬಳ್ಳಿ: ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕು ಮೂರು ದಿನವಾದರೂ ಮದ್ಯಪ್ರಿಯರ ಖರೀದಿ ಭರಾಟೆ ಜೋರಾಗಿ ಸಾಗಿತ್ತು. ನಗರದ ಬಹುತೇಕ ಬಾರ್, ವೈನ್​ಶಾಪ್​ಗಳ ಎದುರು ಬುಧವಾರವೂ ಮದ್ಯಪ್ರಿಯರು ಸರತಿಯಲ್ಲಿ ನಿಂತು ತಳ್ಳಾಟ, ನೂಕಾಟದ ಮಧ್ಯೆ ಬಾಟಲಿ ಖರೀದಿಸಿದರು.

    ಕ್ಲಬ್ ರಸ್ತೆ, ಅಂಬೇಡ್ಕರ್ ವೃತ್ತ, ಜೆಸಿ ನಗರ, ನೆಹರು ಮೈದಾನ, ಸ್ಟೇಶನ್ ರಸ್ತೆ, ದೇಶಪಾಂಡೆ ನಗರ, ವಿದ್ಯಾನಗರ, ಶಿರೂರ ಪಾರ್ಕ್, ಸಿದ್ಧೇೕಶ್ವರ ಪಾರ್ಕ್, ಗೋಕುಲ ರಸ್ತೆ, ಉಣಕಲ್, ಭೈರಿದೇವರಕೊಪ್ಪ, ನವನಗರ, ಅಮರಗೋಳ ಸೇರಿ ವಿವಿಧ ಬಡಾವಣೆಗಳಲ್ಲಿ ಮದ್ಯಪ್ರಿಯರು ಬಾರ್ ಮುಂದೆ ಜಮಾಯಿಸಿದ್ದರು.

    ಮೊದಲ ದಿನಕ್ಕೆ ಹೋಲಿಸಿದರೆ ಮೂರನೇ ದಿನಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತಾದರೂ, ಬಾರ್​ಗಳು ತುಂಬಿ ತುಳುಕುತ್ತಿದ್ದವು. ಹೊಸ ದರ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಳಿಗೆಗಳಲ್ಲಿ ಗ್ರಾಹಕರಿಗೆ ಇಷ್ಟವಾದ ಬ್ರಾಂಡ್​ಗಳು ದಾಸ್ತಾನು ಇರಲಿಲ್ಲ. ಆದರೂ ಮದ್ಯಪ್ರಿಯರು ಸಿಕ್ಕ ಬ್ರಾಂಡ್​ಗಳನ್ನೇ ಖರೀದಿಸಿದರು. ದಾಸ್ತಾನು ಇಲ್ಲದ್ದರಿಂದ ಕೆಲ ಬಾರ್​ಗಳು ಬಂದ್ ಇದ್ದವು.

    ಸರ್ಕಾರ ಮದ್ಯದ ಸುಂಕ ಹೆಚ್ಚಿಸಿದೆ. ಜತೆಗೆ ಕರೊನಾ ಸೆಸ್ ಹೊರೆಯನ್ನೂ ಹಾಕಿದೆ. ಹಾಗಾಗಿ, ಕೆಲವರು ಹಳೆಯ ದರದ ಮದ್ಯ ಖರೀದಿಸುವ ಮೂಲಕ ಹಣ ಉಳಿತಾಯಕ್ಕೆ ಮುಂದಾಗಿದ್ದರು.

    ರಸ್ತೆ ಬದಿ ಮದ್ಯಪಾನ!: ಕರೊನಾ ಹರಡುವ ಭೀತಿಯಿಂದ ಬಾರ್ ಆಂಡ್ ರೆಸ್ಟೋರೆಂಟ್​ಗಳಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಿಲ್ಲ. ಎಂಎಸ್​ಐಎಲ್ ಮತ್ತು ಸಿಎಲ್2 ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಪಾರ್ಸಲ್ ತೆಗೆದುಕೊಂಡು ಹೋಗಬಹುದಾಗಿದೆ. ಹೀಗಿದ್ದರೂ ಇಲ್ಲಿನ ಸ್ಟೇಶನ್ ರಸ್ತೆಯ ವೈನ್ ಶಾಪ್​ವೊಂದರಲ್ಲಿ ಮದ್ಯ ಖರೀದಿಸಿದ ವ್ಯಕ್ತಿಯೊಬ್ಬ ರಸ್ತೆಬದಿಯಲ್ಲೇ ಮದ್ಯ ಸೇವಿಸಿದ್ದು ಕಂಡು ಬಂತು.

    ಕುಡುಕರಿಗೆ ಆಟ ಪೊಲೀಸರಿಗೆ ಸಂಕಟ: ಕೆಲವರು ಮದ್ಯದ ಅಮಲಿನಲ್ಲೇ ತೂರಾಡುತ್ತ ಬಂದು ಮದ್ಯ ಖರೀದಿಗಾಗಿ ಸಾಲಿನಲ್ಲಿ ನಿಂತಿದ್ದರು. ಪರಸ್ಪರ ಅಂತರ ಮರೆತು ನಶೆಯಲ್ಲಿ ತೇಲಾಡುತ್ತಿದ್ದರು. ಸರತಿಯನ್ನು ಕೈಬಿಟ್ಟು ಎಲ್ಲೆಲ್ಲೋ ಹೊರಟು ಮತ್ತೆ ಬಂದು ಸರತಿಯಲ್ಲಿ ನಿಲ್ಲುತ್ತಿದ್ದರು. ಇವರನ್ನು ಸರಿಯಾಗಿ ನಿಲ್ಲಿಸುವಷ್ಟರಲ್ಲಿ ಪೊಲೀಸರು ಸುಸ್ತು ಹೊಡೆದಿದ್ದರು. ಕುಡುಕರ ಆಟ ನೋಡಿ ಪೊಲೀಸರು ಬೇಸ್ತುಬಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts