More

    28 ದಿನದ ಅಂತರದಲ್ಲಿ 2ನೇ ಡೋಸ್

    ಭಟ್ಕಳ: ವಿದೇಶಕ್ಕೆ ತೆರಳುವ ಭಾರತೀಯರಿಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ಅಂತರವನ್ನು 84 ದಿನಗಳಿಂದ 28 ದಿನಗಳಿಗೆ ಇಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರ ಪ್ರಯತ್ನದ ಫಲವಾಗಿ ಸರ್ಕಾರ ಈ ಹೊಸ ಆದೇಶ ಹೊರಡಿಸಿದ್ದು ಗಮನಾರ್ಹ.

    ಸರ್ಕಾರದ ಈ ಹೊಸ ಆದೇಶದಿಂದ ವಿದೇಶಕ್ಕೆ ತೆರಳುವ ಭಾರತೀಯರಿಗೆ ಕೊಂಚ ಸಮಾಧಾನ ಸಿಕ್ಕಿದೆ. ಈ ಹಿಂದೆ ಕೋವಿಶೀಲ್ಡ್ ಲಸಿಕೆಗೆ 84 ದಿನಗಳ ಅಂತರ ನಿಗದಿ ಮಾಡಿ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಇದರಿಂದ ಅನಿವಾಸಿ ಭಾರತೀಯರೆ ಹೆಚ್ಚಿರುವ ಭಟ್ಕಳದಲ್ಲಿ ಸಮಸ್ಯೆ ತಲೆದೂರಿತ್ತು. ಹೀಗಾಗಿ ವಿದೇಶಕ್ಕೆ ತೆರಳುವವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳು ಅದನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗ ಹೊಸ ಆದೇಶ ಹೊರಡಿಸಿದೆ.

    ಜಿಲ್ಲಾಧಿಕಾರಿಗಳಿಗೆ ಅಧಿಕಾರ: ಅನಿವಾಸಿ ಭಾರತೀಯರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಆಯಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ಧಾರ ಅಧಿಕಾರ ನೀಡಿದೆ. ವಿದೇಶಕ್ಕೆ ತೆರಳುವವರ ಅಗತ್ಯತೆ ಪರಿಶೀಲಿಸಿ ಅವರಿಗೆ 28 ದಿನಗಳಲ್ಲಿ ಲಸಿಕೆ ನೀಡಲು ಸೂಚಿಸಿದೆ. ಆದರೆ, ಈ ಲಸಿಕೆಯನ್ನು ಜಿಲ್ಲಾಧಿಕಾರಿಗಳ ಪರಿಶೀಲನೆ ಬಳಿಕ ಜಿಲ್ಲಾ ಕೇಂದ್ರದಲ್ಲೇ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಕಾರ್ಯಾಚರಣೆಗಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ಆಯುಕ್ತರನ್ನು ಸಮರ್ಥ ಅಧಿಕಾರಿಗಳು ಎಂದು ಗುರುತಿಸಿದೆ. ಸಮರ್ಥ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಲಸಿಕಾಕರಣಕ್ಕೆ ಅನುಮತಿ ನೀಡುತ್ತಾರೆ. ವಿದ್ಯಾಭ್ಯಾಸ , ನೌಕರಿ ಹಾಗೂ ಒಲಿಂಪಿಕ್​ಗೆ ತೆರಳುವವರಿಗೆ ಅನುಮತಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಭಟ್ಕಳದಲ್ಲೆ ಲಸಿಕೆಗೆ ಮನವಿ

    ಭಟ್ಕಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಇದ್ದು, ಅವರು ಪ್ರತಿದಿನ ಕಾರವಾರಕ್ಕೆ ತೆರಳಿ ಲಸಿಕೆ ಪಡೆಯುವುದು ಕಷ್ಟ. ಅಲ್ಲದೆ, ಅಲ್ಲಿ ಎಲ್ಲ ತಾಲೂಕುಗಳಿಂದಲೂ ಜನರು ಬರುವುದರಿಂದ ತೊಂದರೆಯಾಗಬಹುದು. ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುವವರಿಗೆ ಇದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಆದ್ದರಿಂದ ಭಟ್ಕಳದಲ್ಲಿಯೇ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಿ ಎಂದು ಭಟ್ಕಳದ ಅನಿವಾಸಿ ಭಾರತೀಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ವಿದೇಶಕ್ಕೆ ತೆರಳುವ ಭಾರತೀಯರಿಗಾಗಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ಅಂತರವನ್ನು 84 ದಿನಗಳಿಂದ 28 ದಿನಗಳಿಗೆ ಪರಿಷ್ಕರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಆದರೆ, ಇದನ್ನು ಸಮರ್ಥ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿದ ಬಳಿಕವಷ್ಟೆ ನೀಡಬಹುದು. ಭಟ್ಕಳದಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಕ್ಕೆ ತೆರಳುವ ಫಲಾನುಭವಿಗಳು ಇದ್ದು, ಮುಂದಿನ ದಿನಗಳಲ್ಲಿ ಭಟ್ಕಳದಲ್ಲೇ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು.

    | ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts