More

    ಸಿರಿಧಾನ್ಯ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭವಿಷ್ಯದ ಆಹಾರ ಬೆಳೆಯೆಂದು ಪರಿಗಣಿಸಲಾಗಿರುವ ಸಿರಿಧಾನ್ಯಗಳು ಕೃಷಿ ಪರಂಪರೆಯೊಂದಿಗೆ ಸಾಗಿಬಂದಿವೆ. ಅಪಾರ ಪೋಷಕಾಂಶಗಳಿಂದ ಕೂಡಿರುವ ಸಿರಿಧಾನ್ಯಗಳನ್ನು ಪ್ರತಿಯೊಬ್ಬರು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಇಲ್ಲಿಯ ಮೂರುಸಾವಿರ ಮಠದ ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

    ಸಹಜ ಸಮೃದ್ಧ ಸಂಸ್ಥೆಯು ದೇವಧಾನ್ಯ ರೈತ ಉತ್ಪಾದಕ ಕಂಪನಿ ಹಾಗೂ ಜರ್ಮನಿಯ ಜಿಐಝುಡ್ ಸಹಯೋಗದೊಂದಿಗೆ ಮೂರುಸಾವಿರ ಮಠದ ಡಾ. ಮೂಜಗಂ ಸಭಾಂಗಣದಲ್ಲಿ ಶನಿವಾರದಿಂದ ಆಯೋಜಿಸಿದ್ದ ಸಿರಿಧಾನ್ಯ ಮೇಳದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಾವಿರಾರು ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಸಿರಿಧಾನ್ಯಗಳತ್ತ ರೈತರು ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.

    ಮೇಳ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಿರಿಧಾನ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿರಿಧಾನ್ಯಗಳಿಗೆ ಅಧಿಕ ಮಹತ್ವ ಕೊಡುತ್ತಿದ್ದು, ರೈತರಿಗೆಂದೇ ಹಲವಾರು ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.

    ಕೃಷಿ ಚಿಂತಕ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿದರು. ಸಹಜ ಸಮೃದ್ಧ ಸಂಸ್ಥೆಯ ಸಂಯೋಜಕ ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಮಹಿಳೆ ಭಾಗ್ಯಶ್ರೀ ಮಾಡಿಕ್ನವರ್ ಸಿರಿಧಾನ್ಯ ಕೃಷಿ ಕುರಿತು ಮಾಹಿತಿ ನೀಡಿದರು. ಕಮಲಮ್ಮ ಕೋಣನವರ ಅಧ್ಯಕ್ಷತೆ ವಹಿಸಿದ್ದರು. ಮೇಳದ ಸಂಚಾಲಕ ಸಿ. ಶಾಂತಕುಮಾರ ನಿರೂಪಿಸಿದರು. ಈಶ್ವರ ಸ್ವಾಗತಿಸಿದರು. ಶ್ರೀದೇವಿ ಬಿ. ವಂದಿಸಿದರು.

    ರಾಗಿ ತೆನೆಗಳಿಂದ ಮಾಡಿದ ಆಕರ್ಷಕ ತೋರಣ, ಸಿರಿಧಾನ್ಯ ತೆನೆಗಳ ಗುಚ್ಛ, ಪೌಷ್ಟಿಕ ಆಹಾರದ ಪಾಕ ವಿಧಾನ ಕೈಪಿಡಿಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಬಿಡುಗಡೆ ಮಾಡಿದರು.

    ಹಲವು ವೈಶಿಷ್ಟ್ಯಗಳು

    ನಾಡಿನ ವಿವಿಧ ಭಾಗಗಳಿಂದ ಸಿರಿಧಾನ್ಯ ಬೆಳೆಗಾರರು ಹಾಗೂ ರೈತ ಗುಂಪುಗಳು ಮೇಳದಲ್ಲಿ ಪಾಲ್ಗೊಂಡಿದ್ದು, ಕುಂದಗೋಳ ತಾಲೂಕಿನ ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯಗಳ ಅಕ್ಕಿ ಮಾರಾಟ ಮಾಡುತ್ತಿದೆ.

    ರಾಗಿ ಸಂಡಿಗೆ ಹಾಗೂ ಬಿಸ್ಕಿಟ್, ಊದಲು ಉಂಡೆ, ರಾಗಿ ರೊಟ್ಟಿ, ಸಾಮೆ, ನವಣೆ ಚಕ್ಕುಲಿ, ಸಿರಿಧಾನ್ಯ ಪಡ್ಡು, ಮಕ್ಕಳಿಗೆ ಬೆಳಗಿನ ಪೇಯವಾಗಿ ಬಳಸುವ ಹುರುಳಿ ಮಾಲ್ಟ್ ಹಾಗೂ ಮಲ್ಟಿ ಮಿಲೆಟ್ ಪೇಯ, ದೋಸೆ ಹಿಟ್ಟು, ಸಿರಿಧಾನ್ಯ ಹೋಳಿಗೆ, ನವಣೆ ಲಡ್ಡು, ಕೊರಲೆ ಲಡ್ಡು, ಸಿರಿಧಾನ್ಯ ಥಾಲಿಪೆಟ್ಟು, ಪಡ್ಡು ಮಿಕ್ಸ್, ನವಣೆ ಬರ್ಫಿ, ಸಾಮೆ ನಿಪ್ಪಟ್ಟು, ಜೇನುತುಪ್ಪ, ನೈಸರ್ಗಿಕ ಸಾಬೂನು, ಕೋಕಂ ಜ್ಯೂಸ್, ಸಿರಿಧಾನ್ಯಗಳ ಬಿತ್ತನೆ ಬೀಜ, ತೆನೆಗಳು, ಇತ್ಯಾದಿಗಳು ಮೇಳದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts