More

    ಕಿಸಾನ್ ಸಮ್ಮಾನ್​ಗೆ 2,808 ರೈತರು ಅನರ್ಹ

    ಪರಶುರಾಮ ಕೆರಿ ಹಾವೇರಿ

    ಇದೊಂದು ವಿಚಿತ್ರ ಹಾಗೂ ವಿಶಿಷ್ಟ ಪ್ರಕರಣ. ತೆರಿಗೆ ಕಟ್ಟುವವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೇಂದ್ರ ಸರ್ಕಾರವೇ ಜಿಲ್ಲೆಯಲ್ಲಿ ಇಂತಹ 2,808 ರೈತರನ್ನು ಪತ್ತೆ ಮಾಡಿದೆ. ಇದೀಗ ಅವರಿಂದ ಈವರೆಗೆ ಪಡೆದ ಹಣವನ್ನು ಮರಳಿ ಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ.

    ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,92,846 ರೈತರು ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿಯಾಗಿದ್ದಾರೆ. ಈ ಯೋಜನೆಯಡಿ ನೋಂದಣಿಯಾದ ಪ್ರತಿ ರೈತರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳ ಸಹಾಯಧನ ಸಿಗಲಿದೆ. ಯೋಜನೆಯ ಅರ್ಹತೆ ಪಡೆಯಲು ಸರ್ಕಾರವು ನಿಯಮಗಳನ್ನು ಸಡಿಲಿಕೆ ಮಾಡಿ ಕನಿಷ್ಠ ಅರ್ಧ ಎಕರೆ ಕೃಷಿ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರೂ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿ, ಕೆಲವೊಂದು ಷರತ್ತುಗಳನ್ನು ರೂಪಿಸಿತ್ತು. ಅದರಲ್ಲಿ ಪ್ರಮುಖವಾಗಿ ಸಹಾಯಧನ ಪಡೆಯುವ ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು. 10 ಸಾವಿರ ರೂ.ಗಳ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರಬಾರದು ಎಂಬುದು ಪ್ರಮುಖವಾಗಿತ್ತು. ಆದರೂ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಪಡೆಯಲು ಅನರ್ಹತೆ ಹೊಂದಿದ್ದರೂ ಕೆಲವರು ಅರ್ಜಿ ಸಲ್ಲಿಸಿ ಹಣ ಪಡೆದಿದ್ದರು. ಅಂತಹ ತೆರಿಗೆದಾತ ರೈತರನ್ನು ಇದೀಗ ಕೇಂದ್ರ ಸರ್ಕಾರವೇ ಐಟಿ ಇಲಾಖೆಯ ಮೂಲಕ ಪತ್ತೆ ಮಾಡಿ ಕೃಷಿ ಇಲಾಖೆಗೆ ಕಳಿಸಿದೆ. ಜಿಲ್ಲೆಯಲ್ಲಿ ಅಂತಹ 2,808 ರೈತರ ಪಟ್ಟಿ ಈಗಾಗಲೇ ಜಿಲ್ಲೆಗೆ ಬಂದಿದೆ.

    5 ಜನರಿಂದ ಹಣ ವಾಪಸ್: ಸರ್ಕಾರ ಕ್ರಮ ಕೈಗೊಳ್ಳುವ ಭೀತಿಯಿಂದ ಜಿಲ್ಲೆಯಲ್ಲಿ ಈಗಾಗಲೇ 5 ಫಲಾನುಭವಿಗಳು ತಮ್ಮ ನೋಂದಣಿಯನ್ನು ರದ್ದುಗೊಳಿಸಲು ಕೋರಿ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. 5 ಫಲಾನುಭವಿಗಳು ರದ್ದತಿ ಕೋರಿಕೆಯ ಅರ್ಜಿಯ ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯಿಂದ ಈವರೆಗೆ ಪಡೆದ 48 ಸಾವಿರ ರೂ.ಗಳನ್ನು ಡಿಡಿ ಮೂಲಕ ಮರಳಿಸಿದ್ದಾರೆ.

    ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ: ಕೃಷಿ ಇಲಾಖೆಯು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿಯಾದ ರೈತರ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಿ, ಆದಾಯ ತೆರಿಗೆ ಇಲಾಖೆಯು ಅದರಲ್ಲಿ ತೆರಿಗೆ ಪಾವತಿಸುವ ರೈತರ ಪಟ್ಟಿಯನ್ನು ನೀಡುವಂತೆ ಕೇಳಿತ್ತು. ಆ ಪಟ್ಟಿ ಈಗಾಗಲೇ ಆದಾಯ ತೆರಿಗೆ ಇಲಾಖೆ ಕೃಷಿ ಇಲಾಖೆಗೆ ನೀಡಿದ್ದು, ಜಿಲ್ಲಾವಾರು ರೈತರ ಮಾಹಿತಿಯನ್ನು ಕೃಷಿ ಇಲಾಖೆ ಸಿದ್ಧಪಡಿಸಿದೆ. ಸರ್ಕಾರದಿಂದ ಇನ್ನೂ ಸ್ಪಷ್ಟ ಸೂಚನೆ ಬರದೇ ಇರುವುದರಿಂದ ಅನರ್ಹ ರೈತರಿಗೆ ನೋಟಿಸ್ ಹೋಗಿಲ್ಲ. ಸರ್ಕಾರದ ಸೂಚನೆ ಬಂದ ಕೂಡಲೆ ಅನರ್ಹರಿಗೆ ನೋಟಿಸ್ ಖಾತ್ರಿ. ಜೊತೆಗೆ ಈವರೆಗೆ ಪಡೆದ ಹಣವನ್ನು ಮರಳಿ ಪಾವತಿಸಬೇಕಾಗುತ್ತದೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

    ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿಯಾದ 5 ರೈತರು ತಾವು ಆದಾಯ ತೆರಿಗೆ ಪಾವತಿದಾರರಿದ್ದು, ಕಣ್ಣಪ್ತಿನಿಂದ ಸಹಾಯಧನ ಪಡೆಯಲು ನೋಂದಣಿಯಾಗಿದ್ದೇವೆ. ಅದನ್ನು ರದ್ದುಗೊಳಿಸಿ ಎಂದು ಈವರೆಗೆ ಪಡೆದ ಹಣವನ್ನು ಮರಳಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಇಲಾಖೆಯಿಂದ ಅನರ್ಹರನ್ನು ಪತ್ತೆ ಮಾಡಿಲ್ಲ. ಆದಾಯ ತೆರಿಗೆ ಇಲಾಖೆಯು ಜಿಲ್ಲೆಯಲ್ಲಿ 2,808 ಫಲಾನುಭವಿಗಳು ತೆರಿಗೆದಾತರಿದ್ದಾರೆ ಎಂಬ ಮಾಹಿತಿಯನ್ನು ನಮಗೆ ನೀಡಿದೆ. ಅದನ್ನು ತಾಲೂಕುವಾರು ಪಟ್ಟಿ ಮಾಡಿದ್ದೇವೆ.

    | ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts