

ಬೆಂಗಳೂರು : ಅಕ್ರಮ ಗೋವುಗಳ ಸಾಗಾಟ ಹೆಚ್ಚಾಗಿದ್ದು, ಕಸಾಯಿಖಾನೆಗೆ ಕಳ್ಳಸಾಗಣೆ ಆಗುತ್ತಿದ್ದ 15 ಕ್ಕೂ ಹೆಚ್ಚು ಗೋವುಗಳನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸರು ರಕ್ಷಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಾಸನದಿಂದ ತಮಿಳುನಾಡಿಗೆ ಸಾಗಣೆಯಾಗುತ್ತಿದ್ದ 13 ಗೋವುಗಳನ್ನು ನೆಲಮಂಗಲ ನಗರ ಪೊಲೀಸರು ರಕ್ಷಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಗೋವುಗಳನ್ನು ಬೆಂಗಳೂರು ನಗರಕ್ಕೆ ಸಾಗಾಟ ಮಾಡಲಾಗುತ್ತಿದ್ದ ಬಗ್ಗೆ ಸುಳಿವು ಸಿಕ್ಕ ಡಿಜೆ ಹಳ್ಳಿ ಪೊಲೀಸರು ಭಾನುವಾರದಂದು ಕಾರ್ಯಾಚರಣೆ ನಡೆಸಿದರು. ಡಿಜೆಹಳ್ಳಿಯ ಶಾಂಪುರ ಬಳಿ 15 ಗೋವುಗಳ ರಕ್ಷಣೆ ಮಾಡಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆಲಮಂಗಲದಲ್ಲಿ ಕ್ಯಾಂಟರ್ ವಾಹನದಲ್ಲಿ ಕಸಾಯಿ ಖಾನೆಗೆ ಸಾಗಾಟವಾಗುತ್ತಿದ್ದ 13 ಗೋವುಗಳ ರಕ್ಷಣೆಗೆ ನೆಲಮಂಗಲ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನೆಲಮಂಗಲದ ತುಮಕೂರು ರಸ್ತೆ ಎಸ್ಎಲ್ಆರ್ ಭವನದ ಬಳಿ ಹಸುಗಳ ರಕ್ಷಿಸಿದ್ದಾರೆ. ಈ ಹಸುಗಳನ್ನು ಹಾಸನದಿಂದ ತಮಿಳುನಾಡಿಗೆ ಕಳ್ಳಸಾಗಾಟ ಮಾಡಲಾಗುತ್ತಿತ್ತು.
ಈ ಪ್ರಕರಣದಲ್ಲಿ ಕೋಲಾರ ಮೂಲದ ಸುಲ್ತಾನ್ (26) ಮತ್ತು ರಾಮನಗರದ ಸಾಧಿಕ್ (25) ಎಂಬುವರನ್ನು ಬಂಧಿಸಲಾಗಿದೆ. ಸದ್ಯ, ರಕ್ಷಿಸಿದ 13 ಗೋವುಗಳಿಗೆ ಹಂಚೀಪುರದ ಶ್ರೀ ಪ್ರಭುಪಾದ ಗೋಶಾಲೆಯಲ್ಲಿ ಆರೈಕೆ ನೀಡಲಾಗುತ್ತಿದೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.