More

    25 ಲಕ್ಷ ರೂ. ಮೌಲ್ಯದ ವಡವೆ ಹಿಂದಿರುಗಿಸಿದ ಪಿಎಸ್​ಐ

    ಹೊಸನಗರ /ಆಯನೂರು: ಇದು ಇಡೀ ಪೊಲೀಸ್ ಇಲಾಖೆಯೇ ಹೆಮ್ಮೆ ಪಡುವ ವಿಚಾರ ಇದು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆಗೆ ಈ ಘಟನೆ ಒಂದು ಗರಿ ಮೂಡಿಸಿದೆ.

    ಅಪಘಾತ ಪ್ರಕರಣವೊಂದರಲ್ಲಿ ಕಾರಿನಲ್ಲಿದ್ದ ಬ್ಯಾಗ್​ನಲ್ಲಿ ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಅಪಘಾತಕ್ಕೀಡಾಗಿದ್ದ ಕುಟುಂಬದ ಸದಸ್ಯರಿಗೂ ಕಾರಿನಲ್ಲಿ ಚಿನ್ನಾಭರಣ ಇತ್ತು ಎಂಬ ಮಾಹಿತಿ ಇರಲಿಲ್ಲ. ಈ ದೊಡ್ಡ ಮೊತ್ತದ ಚಿನ್ನಾಭರಗಳನ್ನು ಕುಂಸಿ ಪೊಲೀಸ್ ಠಾಣೆ ಪಿಎಸ್​ವೈ ನವೀನ್ ಮಠಪತಿ ಅವರು ವಾರಸುದಾರರಿಗೆ ಮರಳಿಸಿದ್ದಾರೆ.

    ಏನಿದು ಘಟನೆ: ಮೇ 23ರಂದು ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತವಾಗಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಾವನಪ್ಪಿದ್ದರು. ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ಕೂಡ ದಾಖಲಾಗಿತ್ತು. ಕಡೂರು ನಿವಾಸಿ, ಮೆಸ್ಕಾಂ ನೌಕರ ಸುಬ್ಬಯ್ಯ ಮತ್ತು ಪತ್ನಿ ಭಾರತಿ ಚೋರಡಿ ಬಳಿ ತುಪ್ಪೂರಿನಿಂದ ಕಡೂರಿಗೆ ತೆರಳುವಾಗ ದುರ್ಘಟನೆ ನಡೆದಿತ್ತು.

    ಪತ್ನಿಯನ್ನು ಕಳೆದುಕೊಂಡ ಸುಬ್ಬಯ್ಯ ಅವರ ಮನೆಯಲ್ಲಿ ಸೂತಕ ನಿರ್ವಣವಾಗಿತ್ತು. ಸೋಮವಾರ ಮೂರನೇ ದಿನ ಕಾರ್ಯ. ಈ ಸಮಯದಲ್ಲಿ ಕುಂಸಿ ಠಾಣೆಯಿಂದ ಅವರಿಗೆ ಫೋನ್ ಬಂದಿದೆ. ಸ್ವಲ್ಪ ಠಾಣೆಗೆ ಬಂದು ಹೋಗಿ ಎಂದು ವಿನಂತಿಸಿಕೊಂಡಿದ್ದಾರೆ. ಏನಿರಬಹುದು ಎಂದು ಸುಬ್ಬಯ್ಯ ಅವರ ಮನೆ ಕಡೆಯಿಂದ ಐವರು ಠಾಣೆಗೆ ಧಾವಿಸಿದ್ದಾರೆ. ಪಿಎಸ್​ಐ ನವೀನ್ ಮಠಪತಿ ಅಂದಾಜು 20 ರಿಂದ 25 ಲಕ್ಷ ರೂ. ಬೆಲೆಬಾಳುವ ವಿವಿಧ ಬಂಗಾರದ ಆಭರಣವನ್ನು ಕೈಗಿತ್ತು ಇದು ನಿಮಗೆ ಸೇರಿದ್ದು ಎಂದು ಹೇಳಿದ್ದಾರೆ.

    ಕುಟುಂಬದವರಿಗೆ ಮಾಹಿತಿ ಇರಲಿಲ್ಲ: ಭಾರತಿ ಅವರನ್ನು ಕಳೆದುಕೊಂಡ ಸುಬ್ಬಯ್ಯ ಕುಟುಂಬದವರು ಅದೇ ಶೋಕದಲ್ಲಿ ಮುಳುಗಿದ್ದರು. ಬಂಗಾರದ ಬಗ್ಗೆ ಯಾವುದೇ ಮಾಹಿತಿಗಳು ಕೂಡ ಇರಲಿಲ್ಲ.

    ಸಿಕ್ಕಿದ್ದು ಹೇಗೆ? ಕುಂಸಿ ಪಿಎಸ್​ಐ ನವೀನ್ ಮಠಪತಿ ಊಟಕ್ಕಾಗಿ ಆಯನೂರಿಗೆ ತೆರಳುತ್ತಿದ್ದ ವೇಳೆ ಅದಾಗಲೇ ಅಪಘಾತಕ್ಕೀಡಾಗಿದ್ದ ಕಾರನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಗೆ ತೆರಳಿದ ಕಾರಣ ಕುಟುಂಬದವರು ಯಾರೂ ಇರಲಿಲ್ಲ. ಜನರು ಮಾತ್ರ ನೋಡಿ ಹೋಗುತ್ತಿದ್ದರು. ಕಾರನ್ನು ಪರಿಶೀಲಿಸುವಾಗ ಒಂದು ಬ್ಯಾಗ್ ಕಾರಿನಲ್ಲಿ ಇರುವುದು ಕಂಡು ಬಂದಿದೆ. ಅವರು ಆ ಬ್ಯಾಗನ್ನು ಸ್ಟೇಷನ್​ಗೆ ಕೊಂಡೊಯ್ದು ಪರಿಶೀಲಿಸಿದಾಗ ಬಂಗಾರದ ಆಭರಣಗಳು ಅದರಲ್ಲಿತ್ತು.

    ದೂರು ನೀಡಿರಲಿಲ್ಲ: ಮನೆಯಿಂದ ಬಂಗಾರ ನಾಪತ್ತೆಯಾದ ಬಗ್ಗೆ ಸುಬ್ಬಯ್ಯ ದೂರನ್ನು ನೀಡಿರಲಿಲ್ಲ. ಭಾರತಿ ತಮ್ಮೊಂದಿಗೆ ಚಿನ್ನಾಭರಣ ತಂದ ವಿಷಯವನ್ನು ಪತಿಗೆ ತಿಳಿಸಿರಲಿಲ್ಲ. ಡೈಮಂಡ್ ನೆಕ್ಲೇಸ್, ಚಿನ್ನದ ಸರಗಳು ಹಾಗೂ 8 ಉಂಗುರ ಇದ್ದವು. ಭಾರತಿ ಅವರ ಪತಿ ಸುಬ್ಬಯ್ಯ ಅವರು ಕಡೂರಿನ ಮೆಸ್ಕಾಂನಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts