More

    243 ಅಪೌಷ್ಟಿಕ ಮಕ್ಕಳಿಗೆ ಆರೈಕೆ

    ಗದಗ: ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 243 ಗುರುತಿಸಲಾಗಿದ್ದು, ಅವರನ್ನು ಆಯಾ ತಾಲೂಕುಗಳಲ್ಲಿ ತೆರೆಯಲಾಗಿರುವ ಆರೈಕೆ ಕೇಂದ್ರಗಳಲ್ಲಿರಿಸಿ ಪೌಷ್ಟಿಕ ಆಹಾರ ಹಾಗೂ ಸೂಕ್ತ ಔಷಧೋಪಚಾರ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
    ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳೊಂದಿಗೆ ಪಾಲಕರು 14 ದಿನ ಜತೆಗಿರಬೇಕು. ಅವರಿಗೆ ಪೋಷಕಾಂಶಯುಕ್ತ ಪೌಷ್ಟಿಕ ಆಹಾರವನ್ನು ಜು. 1ರಿಂದಲೇ ನೀಡಲಾಗುತ್ತಿದೆ ಎಂದರು.
    ಜಿಲ್ಲೆಯಲ್ಲಿ ಕರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿದ್ದು 163 ಸಕ್ರಿಯ ಪ್ರಕರಣಗಳ ಪೈಕಿ 50 ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 350 ಬೆಡ್​ಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಲಭ್ಯವಿವೆ ಎಂದರು.
    ಇದೇ ವೇಳೆ 60 ಆಕ್ಸಿಜನ್ ಕಾನ್ಸನ್​ಟ್ರೇಟರ್ ಹಾಗೂ ಸಚಿವರ ಮೊಮ್ಮಗಳ ಜನ್ಮದಿನದ ಅಂಗವಾಗಿ 3 ಲಕ್ಷ ರೂ. ವೆಚ್ಚದಲ್ಲಿ ವೈಯಕ್ತಿಕವಾಗಿ ಖರೀದಿಸಲಾದ 300 ಇನ್​ಫ್ಲುಯೆಂಜಾ ವ್ಯಾಕ್ಸಿನ್​ಗಳನ್ನು ಸಚಿವರು ಜಿಲಾಡಳಿತಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ನಂತರ ಬೆಳೆ ವಿಮೆ ಹಾಗೂ ಬೆಳೆ ಸಮೀಕ್ಷೆ ಕುರಿತು ಕೃಷಿ ಇಲಾಖೆಯಿಂದ ಹೊರತರಲಾದ ಕರಪತ್ರಗಳನ್ನು ಸಚಿವರು ಅನಾವರಣಗೊಳಿಸಿದರು.
    ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್​ವರಿಷ್ಠಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.
    3ನೇ ಅಲೆ ಎದುರಿಸಲು ಸಿದ್ಧ
    ಕರೊನಾ ಸೋಂಕಿನ 3ನೇ ಅಲೆ ಎದುರಾದಲ್ಲಿ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಇದಕ್ಕಾಗಿ ಜಿಮ್್ಸ ಆಸ್ಪತ್ರೆಯಲ್ಲಿನ 450 ಹಾಸಿಗೆ ಸಾಮರ್ಥ್ಯನ್ನು 750 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ. ಇದರಲ್ಲಿ 600 ಆಕ್ಸಿಜನ್ ಸೌಲಭ್ಯವುಳ್ಳ ಬೆಡ್​ಗಳು, 120 ವೆಂಟಿಲೇಟರ್ ಬೆಡ್​ಗಳು, 150 ಸಾಮಾನ್ಯ ಬೆಡ್​ಗಳಿವೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
    ಜಿಮ್ಸ್​ನಲ್ಲಿರುವ 13 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣೆ ಘಟಕವನ್ನು 20 ಕೆಎಲ್​ಗೆ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
    96 ಕೋಟಿ ರೂ. ಪರಿಹಾರ
    ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020ರ ಮುಂಗಾರು ಬೆಳೆ ಇಳುವರಿ ಆಧಾರದ ಮೇಲೆ ಜಿಲ್ಲೆಯ 52,406 ರೈತರಿಗೆ 96.02 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts