More

    12 ತಿಂಗಳಲ್ಲಿ 24 ಹೆರಿಗೆ !

    ಶಶಿಧರ ಕುಲಕರ್ಣಿ ಮುಂಡಗೋಡ
    ಮಹಿಳೆಯರಿಗೆ ಜೀವನದಲ್ಲಿ ಹೆರಿಗೆ ಸಮಯ ಒಂದು ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ವೇಳೆ ಅವರು ಅನುಭವಿಸುವ ನೋವು ಅಪಾರ. ಇತ್ತೀಚೆಗೆ ಮುಂದುವರಿದ ತಂತ್ರಜ್ಞಾನದಿಂದ ಆಸ್ಪತ್ರೆಗಳಲ್ಲಿ ವೈದ್ಯರು ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದಾರೆ. ಕೆಲವು ಮಹಿಳೆಯರು ಹೆರಿಗೆಗೆಂದು ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯೆ ಆಂಬುಲೆನ್ಸ್​ನಲ್ಲಿ ಹೆರಿಗೆಯಾಗುತ್ತಿರುವುದು ಈಗ ಸಾಮಾನ್ಯವಾಗಿದೆ!
    ಆಂಬುಲೆನ್ಸ್​ನಲ್ಲಿ ಕ್ಲಿಷ್ಟಕರ ಹೆರಿಗೆಗಳು: 2009ರ ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ 108 ಆಂಬುಲೆನ್ಸ್ ಸೇವೆ ಆರಂಭವಾಯಿತು. 2021ರ ಜನವರಿ ತಿಂಗಳಿಂದ ಡಿಸೆಂಬರ್​ವರೆಗೆ ಆಂಬುಲೆನ್ಸ್​ನಲ್ಲಿ 24 ಹೆರಿಗೆಗಳಾಗಿವೆ. ಇದೇ ರೀತಿಯಾಗಿ ಪ್ರತಿ ವರ್ಷ ಸರಿ ಸುಮಾರು 20-25 ಹೆರಿಗೆಗಳು ಆಗುತ್ತವೆ. ತಾಯಿ ಮತ್ತು ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಕ್ಲಿಷ್ಟಕರ ಹೆರಿಗೆಗಳನ್ನು ಆಂಬುಲೆನ್ಸ್​ನನ ತುರ್ತು ವೈದ್ಯಕೀಯ ತಂತ್ರಜ್ಞರು ಮಾಡಿಸುತ್ತಿದ್ದಾರೆ.
    ರಸ್ತೆ ಪಕ್ಕದಲ್ಲಿಯೇ ಆಂಬುಲೆನ್ಸ್ ನಿಲ್ಲಿಸಿ ಹೆರಿಗೆ: ಹೆರಿಗೆ ನೋವು ಬಂದ ತಕ್ಷಣ ಒಂದು ಅಥವಾ ಎರಡು ತಾಸಿನಲ್ಲಿ ಹೆರಿಗೆಯಾಗುತ್ತವೆ. ಹಾಗಾಗಿ ಕೆಲವೊಮ್ಮೆ ಗರ್ಭಿಣಿಯರಿಗೆ ನೋವು ಕಾಣಿಸಿಕೊಂಡಿರುವುದಿಲ್ಲ. ಆಗ ಗರ್ಭಿಣಿ ಸ್ಥಿತಿ ನೋಡಿ ಬಹಳ ನೋವು ಕಾಣಿಸಿಕೊಂಡಾಗ ರಸ್ತೆ ಪಕ್ಕದಲ್ಲಿಯೇ ಆಂಬುಲೆನ್ಸ್ ನಿಲ್ಲಿಸಿ ಆಶಾ ಕಾರ್ಯಕರ್ತೆ, ಚಾಲಕ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಹಾಯದಿಂದ ಅಥವಾ ಇವರ್ಯಾರು ಇಲ್ಲದಿದ್ದರೂ ತುರ್ತು ವೈದ್ಯಕೀಯ ತಂತ್ರಜ್ಞರು ಗರ್ಭಿಣಿಗೆ ಧೈರ್ಯ ತುಂಬಿ ಮೊದಲಿನ ಚಿಕಿತ್ಸೆಯ ವರದಿಗಳನ್ನೆಲ್ಲಾ ಪರಿಶೀಲಿಸಿ ಆಂಬುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸುತ್ತಾರೆ.


    ಜನರಿಗೆ ಸರಿಯಾದ ವೇಳೆಗೆ ಆಸ್ಪತ್ರೆಗೆ ಹೋಗಬೇಕೆನ್ನುವ ತಿಳಿವಳಿಕೆ ಇರುವುದಿಲ್ಲ. ತುಂಬಾ ತೊಂದರೆ ಉಂಟಾದಾಗ 108 ಆಂಬುಲೆನ್ಸ್​ಗೆ ಕರೆ ಮಾಡುತ್ತಾರೆ. ಆಂಬುಲೆನ್ಸ್ ಹೆರಿಗೆ ಸತತವಾಗಿ ಆಗಬಾರದು. ಸಾಮಾನ್ಯವಾಗಿ ಗರ್ಭಿಣಿಯರು ಸುರಕ್ಷಿತ ಹೆರಿಗೆಗಾಗಿ ಅವಧಿಗಿಂತ 24ಗಂಟೆ ಮುಂಚೆ ಆಸ್ಪತ್ರೆಗೆ ಬಂದು ದಾಖಲಾಗಬೇಕು. ಆಶಾ ಕಾರ್ಯಕರ್ತೆಯರಿಗೆ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಈ ಬಗ್ಗೆ ಜನರಿಗೆ ಮಾಹಿತಿ ನೀಡಲು ತಿಳಿಸಲಾಗುವುದು.
    | ಎಚ್.ಎಫ್. ಇಂಗಳೆ
    ತಾಲೂಕು ಆಡಳಿತ ವೈದ್ಯಾಧಿಕಾರಿ, ಮುಂಡಗೋಡ


    2011ರಿಂದ ಕೆಲಸ ಮಾಡುತ್ತಿದ್ದೇನೆ. ಇಂದೂರ ಗ್ರಾಮದ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸುವ ವೇಳೆ ಮಗುವಿನ ತಲೆ ಮೊದಲು ಬಾರದೆ ಕಾಲುಗಳು ಮೊದಲು ಬಂದ ಕಷ್ಟಕರವಾದ (ಬ್ರೀಚ್ ಪ್ರೆಸೆಂಟೇಶನ್) ಹಾಗೂ ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಎಚ್​ಐವಿ ಸೋಂಕಿತೆಯೊಬ್ಬರ ಹೆರಿಗೆಯನ್ನು ಪಿಪಿಇ ಕಿಟ್, ಗ್ಲೌಸ್ ಮತ್ತು ಮಾಸ್ಕ್ ಧರಿಸಿ ಮಾಡಿಸಿದ್ದೇನೆ.
    | ಧನರಾಜ ಸಿ. ಬಳೂರು,
    108 ಆಂಬುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts