More

    224 ಗರ್ಭಿಣಿಯರಿಗೆ ಅಂಟಿದ ಕರೊನಾ

    ಬೆಳಗಾವಿ: ಮಾರಣಾಂತಿಕ ಕರೊನಾ ವೈರಸ್ ಸಮುದಾಯಕ್ಕೆ ಹರಡುತ್ತಿದ್ದು, ಜಿಲ್ಲೆಯಲ್ಲಿ 224 ಗರ್ಭಿಣಿಯರು ಮತ್ತು 8 ಬಾಣಂತಿಯರಿಗೆ ಕೋವಿಡ್-19 ದೃಢಪಟ್ಟಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 76 ಕರೊನಾ ಸೋಂಕಿತ ಗರ್ಭಿಣಿಯರಿಗೆ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ನಿರಂತರ ಮಳೆಯಾಗುತ್ತಿರುವ ಕಾರಣ ವಾತಾವರಣದಲ್ಲೂ ಏರುಪೇರು ಆಗುತ್ತಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಗರ್ಭಿಣಿಯರನ್ನು ಕೋವಿಡ್-19 ಟೆಸ್ಟ್‌ಗೆ ಒಳಪಡಿಸಿತ್ತು. ಜಿಲ್ಲೆಯ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1,012 ಗರ್ಭಿಣಿಯರ ತಪಾಸಣೆ ನಡೆಸಲಾಗಿದ್ದು, 224 ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, 308 ಬಾಣಂತಿಯರಲ್ಲಿ 8 ಬಾಣಂತಿಯರಿಗೂ ಸೋಂಕು ತಗುಲಿದೆ. ಇವರಿಗೂ ವಿಶೇಷ ನಿಗಾ ಇಡಲಾಗಿದೆ.

    ವಿಶೇಷ ಆರೈಕೆ: ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೆರಿಗೆ ವಾರ್ಡ್‌ಗೆ ದಾಖಲಾಗಿರುವ ಮತ್ತು ಮನೆಗಳಲ್ಲಿಯೇ ಇರುವ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಮೇಲಿಂದ ಮೇಲೆ ಮಾಡಲಾಗುತ್ತಿದೆ. ಅಲ್ಲದೆ, ಆಶಾ ಕಾರ್ಯಕರ್ತೆಯರು ಗರ್ಭಿಣಿಯರು ಅಥವಾ ಬಾಣಂತಿಯರಿಗೆ ಜ್ವರ, ಕೆಮ್ಮು ಬಂದರೆ ತಕ್ಷಣ ಚಿಕಿತ್ಸೆ ಕೊಡಿಸಿ ವಾಸಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯ ಕಾಪಾಡಲು ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಿದ್ದು, ಧೈರ್ಯ ತುಂಬುತ್ತಿದ್ದಾರೆ.

    ನವಜಾತ ಎಲ್ಲ ಶಿಶುಗಳಿಗೆ ನೆಗೆಟಿವ್

    ಈಗಾಗಲೇ ಬೆಳಗಾವಿ ಜಿಲ್ಲಾಸ್ಪತ್ರೆ (ಬಿಮ್ಸ್)ಯಲ್ಲಿ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ 100ಕ್ಕೂ ಅಧಿಕ ಗರ್ಭಿಣಿಯರ ಪೈಕಿ 76 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದರಲ್ಲಿ 34 ಸಿಜೇರಿಯನ್, 36 ಸಾಮಾನ್ಯ ಹೆರಿಗೆಯಾಗಿದೆ. ಜಿಲ್ಲಾಸ್ಪತ್ರೆ ಹೊರತು ಪಡಿಸಿ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಲ್ಲ. ಹೆರಿಗೆಯಾದ 5 ಅಥವಾ 7ನೇ ದಿನಕ್ಕೆ ನವಜಾತ ಶಿಶುಗಳ ಸ್ವಾೃಬ್ ಟೆಸ್ಟ್ ಮಾಡಲಾಗಿದ್ದು, ಎಲ್ಲ ಶಿಶುಗಳ ವರದಿ ನೆಗೆಟಿವ್ ಬಂದಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

    ಕರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಗರ್ಭಿಣಿ-ಬಾಣಂತಿಯರು ಹಾಗೂ ಶಿಶುವಿನ ಆರೈಕೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅಲ್ಲದೆ, ಸೋಂಕು ದೃಢಪಟ್ಟಿರುವ ಬಾಣಂತಿಯರ ಆರೋಗ್ಯದ ಮೇಲೆಯೂ ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕು ಪರೀಕ್ಷೆ ಹೆಚ್ಚಿಸುತ್ತಿರುವುದರಿಂದ ಹೆಚ್ಚು ಪ್ರಕರಣ ಬೆಳಕಿಗೆ ಬರುತ್ತಿವೆ.
    | ಡಾ. ಬಿ.ತುಕ್ಕಾರ, ಸಾಂಕ್ರಾಮಿಕ ರೋಗಗಳ ಜಿಲ್ಲಾ ಸರ್ವೇಕ್ಷಣಾಧಿಕಾರಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts