More

    220 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

    ಹಾವೇರಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಶನಿವಾರವೂ ಮುಂದುವರಿದಿದ್ದು, ಇಲಾಖೆಯ ಕೆಲ ಕಟ್ಟುನಿಟ್ಟಿನ ಕ್ರಮಗಳಿಂದ ಈವರೆಗೆ ಒಟ್ಟು 220 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ಅನೇಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರಿಂದ ಬಸ್ ಸಂಚಾರ ಅಲ್ಪಮಟ್ಟಿಗೆ ಸಾಧ್ಯವಾಗಿದೆ. ಜಿಲ್ಲೆಯ ತಾಲೂಕು ಕೇಂದ್ರ, ಪ್ರಮುಖ ಸ್ಥಳಗಳಿಗೆ ಆಗೊಮ್ಮೆ, ಈಗೊಮ್ಮೆ ಬಸ್ ಓಡಾಟ ಶುರುವಾಗಿದೆ. ಆದರೂ ಖಾಸಗಿ ವಾಹನಗಳ ಭರಾಟೆ ಇನ್ನೂ ಹೆಚ್ಚಾಗಿದೆ.

    ಹಾವೇರಿ, ರಾಣೆಬೆನ್ನೂರ, ಹಾನಗಲ್ಲ, ಸವಣೂರ, ಹಿರೇಕೆರೂರು ಹಾಗೂ ಬ್ಯಾಡಗಿ ಡಿಪೋಗಳಿಗೆ ಸೇರಿದ ಬಸ್​ಗಳು ವಿವಿಧೆಡೆ ಸಂಚರಿಸಿದವು. ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್​ನಲ್ಲಿ ಸಂಚರಿಸಿದರು.

    ಕೆಲಸಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಹಲವರನ್ನು ವರ್ಗಾವಣೆ ಮಾಡಲಾಗಿದೆ. ಟ್ರೖೆನಿ ಸಿಬ್ಬಂದಿ ವಜಾಗೊಳಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಡ್ಡಿಪಡಿಸಿದ ಕಾರಣಕ್ಕೆ ಅನೇಕರ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ. ಮುಂದಿನ ಹಂತವಾಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಇದಲ್ಲದೇ ಪ್ರೊಬೆಶನರಿ ಅವಧಿಯಲ್ಲಿರುವ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರು ಭಾನುವಾರದೊಳಗೆ ಕೆಲಸಕ್ಕೆ ಬಾರದಿದ್ದರೆ ಅವರನ್ನೂ ವಜಾಗೊಳಿಸುವ ಚಿಂತನೆಯನ್ನು ಇಲಾಖೆ ನಡೆಸಿದೆ. ಹೀಗಾಗಿ ದಿನೇದಿನೆ ಕೆಲಸಕ್ಕೆ ಹಾಜರಾಗುವವರ ಸಂಖ್ಯೆ ಹೆಚ್ಚಿದೆ.

    ಗ್ರಾಮೀಣರಿಗೆ ಸಮಸ್ಯೆ…

    ನೂರಕ್ಕೂ ಹೆಚ್ಚು ಬಸ್​ಗಳು ರಸ್ತೆಗಿಳಿದರೂ ಗ್ರಾಮೀಣ ಭಾಗಕ್ಕೆ ಇನ್ನೂ ಸಾರಿಗೆ ಸಂಸ್ಥೆ ಬಸ್​ಗಳ ಓಡಾಟ ಶುರುವಾಗಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಕರೊನಾ ಎರಡನೇ ಅಲೆ ಅಬ್ಬರ ಶುರುವಾಗಿದ್ದು, ಆಸ್ಪತ್ರೆ ಇನ್ನಿತರ ತುರ್ತು ಕಾರ್ಯಕ್ಕೆ ನಗರಕ್ಕೆ ಬರಬೇಕೆಂದರೆ ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಶಾಲಾ, ಕಾಲೇಜ್​ಗಳಿಗೆ ಬರುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರ ಆರಂಭವಾದಾಗಿನಿಂದ ಖಾಸಗಿ ವಾಹನಗಳ ಓಡಾಟ ಹೆಚ್ಚಿದೆ. ಪ್ರಯಾಣಿಕರ ಬರ ಎದುರಿಸುತ್ತಿದ್ದ ಖಾಸಗಿ ವಾಹನಗಳು ಈಗ ಜನರನ್ನು ಭರ್ತಿ ಮಾಡಿಕೊಂಡು ಸಂಚರಿಸುತ್ತಿವೆ. ಟೆಂಪೋ, ಟ್ರ್ಯಾಕ್ಸ್, ಕ್ರೂಸರ್, ಟಂಟಂಗಳು ಗ್ರಾಮೀಣ ಭಾಗಕ್ಕೆ ಹೋಗುವವರಿಗೆ ಅನುಕೂಲ ಕಲ್ಪಿಸಿವೆ.

    ಸಂಸ್ಥೆಯ ನೌಕರರು ಮುಷ್ಕರ ನಡೆಯುತ್ತಿದ್ದರೂ ಶನಿವಾರ 105 ಬಸ್​ಗಳ ಸಂಚಾರ ಸಾಧ್ಯವಾಗಿದೆ. 200ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ಇನ್ನೂ ಹೆಚ್ಚಿನ ಬಸ್ ಓಡಿಸಲು ಸಾಧ್ಯವಾಗಲಿದೆ. ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರು ಈಗಾದರೂ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕೇಂದ್ರ ಕಚೇರಿ ನಿರ್ದೇಶನದಂತೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

    | ವಿ.ಎಸ್. ಜಗದೀಶ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ

    ಜನರನ್ನ ದನ ತುಂಬದ್ಹಂಗ್ ತುಂಬ್ತಾರ್ರಿ…

    ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

    ಸಾರಿಗೆ ಮುಷ್ಕರದ ನಡುವೆಯೂ ಆಗೊಮ್ಮೆ, ಈಗೊಮ್ಮೆ ಬಸ್​ಗಳ ಸಂಚಾರ ಆರಂಭಗೊಂಡಿದ್ದರಿಂದ ಬಸ್​ಗಳು ಬರುತ್ತಿವೆ ಎಂದು ಕೆಲ ಪ್ರಯಾಣಿಕರು ಶನಿವಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದು ಬಸ್​ಗಾಗಿ ಕಾಯುತ್ತಿದ್ದರು.

    ಆದರೆ, ಸರಿಯಾದ ಸಮಯಕ್ಕೆ ಬಸ್​ಗಳು ಬಾರದೇ ನಿಲ್ದಾಣದಲ್ಲಿಯೇ ಕಾಯ್ದು ಸುಸ್ತಾಗಿ ಖಾಸಗಿ ವಾಹನಗಳ ಮೂಲಕ ಪ್ರಯಾಣ ಬೆಳೆಸಿದರು. ಇದರಿಂದ ಪ್ರಯಾಣಿಕರ ಗೋಳು ಇನ್ನೂ ನಿವಾರಣೆಯಾಗಿಲ್ಲ. ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿಯ ಮೊಂಡಾಟಕ್ಕೆ ಪ್ರಯಾಣಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ದಿನನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಈಗ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಅಲ್ಲದೆ, ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ ಜೋರಾಗಿದ್ದು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ.

    ಈ ಕುರಿತು ಬೆಳಗಲಿ ಶಾಲೆ ಶಿಕ್ಷಕಿ ದೀಪಿಕಾ ಅನಿಲಕುಮಾರ ಪ್ರತಿಕ್ರಿಯಿಸಿ, ‘ಬಸ್ ಸಂಚಾರವಿಲ್ಲದೇ ಸಮಸ್ಯೆಯಾಗಿದೆ. ಖಾಸಗಿ ವಾಹನಗಳಿಗೆ ಜಾಸ್ತಿ ಹಣ ನೀಡಿ ಹಾವೇರಿಯಿಂದ ಶಿಗ್ಗಾಂವಿಗೆ ಬರಬೇಕು. ಖಾಸಗಿ ವಾಹನದಲ್ಲಿ ಜನರನ್ನು ದನ ತುಂಬಿದಂತೆ ತುಂಬ್ತಾರೆ. ಪರಸ್ಪರ ಅಂತರವಿಲ್ಲ. ಮಾಸ್ಕ್ ಸಹ ಧರಿಸುವುದಿಲ್ಲ. ಇದನ್ನಾ ಕೇಳೋರು ಯಾರ್ರಿ.’ ಎಂದು ಅಳಲು ತೋಡಿಕೊಂಡಿದ್ದಾರೆ.

    ಬಸ್ ಸಂಚಾರ…

    ಶನಿವಾರ ಶಿಗ್ಗಾಂವಿಯಿಂದ ಸವಣೂರಿಗೆ 2 ಬಸ್, ಸವಣೂರಿನಿಂದ ಬಂಕಾಪುರಕ್ಕೆ 2 ಬಸ್, ಹಾನಗಲ್ಲ ಡಿಪೋದಿಂದ ಶಿಗ್ಗಾಂವಿಗೆ 4 ಹಾಗೂ ಶಿಗ್ಗಾಂವಿಯಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ 1 ಬಸ್ ಹಾವೇರಿಗೆ ಸಂಚಾರ ನಡೆಸಿದವು. ಪ್ರಮುಖ ಮಾರ್ಗಗಳಲ್ಲಿ ಒಂದೆರಡು ಬಸ್​ಗಳು ಓಡಾಡಿದ್ದರಿಂದ ಪ್ರಯಾಣಿಕರಿಗೆ ಅಲ್ಪ ಪ್ರಮಾಣದಲ್ಲಿ ಅನುಕೂಲವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts