More

    22ರೊಳಗೆ ಪಂಚಮಸಾಲಿ ಸಮಾಜಕ್ಕೆ ಒಬಿಸಿ ಮೀಸಲಾತಿ ನೀಡದಿದ್ದರೆ 25ರಿಂದ ಹೋರಾಟ: ಜಯಬಸವ ಮೃತ್ಯುಂಜಯ ಶ್ರೀ

    ಶಿಕಾರಿಪುರ: ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಸರ್ವತೋಮುಖವಾಗಿ ಸಧೃಢವಾಗಲು ಪಂಚಮಸಾಲಿ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕಾಗಿದೆ. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಪಂಚಮಸಾಲಿ ಪೀಠದಿಂದ ಹೋರಾಟ ನಡೆಯುತ್ತಿದೆ. ಈ ಸಂಬಂಧ ಸರ್ಕಾರ ಆ.22ರ ಗಡುವು ನೀಡಿದೆ. ಗಡುವಿನ ಒಳಗೆ ಮೀಸಲಾತಿ ನೀಡಿದರೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಇಲ್ಲದಿದ್ದರೆ ಆ.25ರಿಂದ ನಮ್ಮ ಪಾದಯಾತ್ರೆ ಪಾರಂಭವಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
    ಜೂ.27ರಂದು ನಾವು ಮುಖ್ಯಮಂತ್ರಿಗಳ ನಿವಾಸದ ಎದುರು ಧರಣಿ ಸತ್ಯಾಗ್ರಹ ಮಾಡುವ ಕಠಿಣ ನಿರ್ಧಾರ ಕೈಗೊಂಡಾಗ ಮುಖ್ಯಮಂತ್ರಿಗಳು ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ನಾವು ಅವರ ಮಾತಿಗೆ ಗೌರವ ಕೊಟ್ಟು ಧರಣಿ ಸತ್ಯಾಗ್ರಹವನ್ನು ಅವರ ನಿವಾಸದ ಎದುರು ಮಾಡಲಿಲ್ಲ. ಆ.22ಕ್ಕೆ ಅವರು ನೀಡಿದ ಅವಧಿ ಮುಗಿಯಲಿದೆ. ಅಷ್ಟರೊಳಗೆ ನಮಗೆ ನೀಡಿದ ಮಾತನ್ನು ಮುಖ್ಯಮಂತ್ರಿಗಳು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪೀಠದ ಮೂಲಕ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಈಗಾಗಲೇ ಪೀಠದ ವತಿಯಿಂದ ರಾಜ್ಯಾದ್ಯಂತ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಸುಮಾರು 10 ಲಕ್ಷ ಜನ ಸಮಾಜ ಬಾಂಧವರನ್ನು ಸೇರಿಸಿ ಶಕ್ತಿಪ್ರದರ್ಶನ ಮಾಡಲಾಗಿದೆ. ಸಾಕಷ್ಟು ಕಡೆಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಿ ಅರಿವು ಮೂಡಿಸಲಾಗಿದೆ. ಮುಖ್ಯಮಂತ್ರಿಗಳು ತಕ್ಷಣ ನಮ್ಮ ಮನವಿಗೆ ಸ್ಪಂದಿಸಬೇಕು ಎಂದರು.
    ಒಬಿಸಿ ಮೀಸಲಾತಿ ನಮ್ಮ ಹಕ್ಕೊತ್ತಾಯವಾಗಿದೆ. ಇಷ್ಟು ದಿನ ಸಮಾಜಕ್ಕೆ ಮೀಸಲಾತಿ ದೊರತಿಲ್ಲ ಎನ್ನುವುದೇ ನೋವಿನ ಸಂಗತಿಯಾಗಿದೆ. ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮಾಜವನ್ನು ಈ ನಿಟ್ಟಿನಲ್ಲಿ ಒಂದುಗೂಡಿಸಲಾಗುತ್ತಿದೆ. ಸರ್ಕಾರ ಯಾವ ಕಾರಣಕ್ಕೂ ಉಪೇಕ್ಷೆ ಮಾಡಬಾರದು. ಪಂಚಮಸಾಲಿ ಸಮಾಜ ಜಾಗೃತವಾಗಿದೆ. ಮೀಸಲಾತಿ ಸಿಗದೇ ಇದ್ದರೆ ಹೋರಾಟ ತೀವ್ರವಾಗುತ್ತದೆ ಎಂದು ಶ್ರೀ ಜಯಬಸವ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts