More

    21ನೇ ದಿನಕ್ಕೆ ಇರುಳಿಗರ ಪ್ರತಿಭಟನೆ: ಒಕ್ಕಲೆಬ್ಬಿಸಿದ ಜಮೀನು ನೀಡಲು ಮೀನಮೇಷ

    ಕೈಲಾಂಚ : ಹೋಬಳಿಯ ಕೈಲಾಂಚ ಗ್ರಾಪಂ ವ್ಯಾಪ್ತಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಪ್ರತಿಭಟನೆ 21ನೇ ದಿನಕ್ಕೆ ಕಾಲಿಟ್ಟಿದೆ.
    ಕರ್ನಾಟಕ ರಾಜ್ಯ ವನವಾಸಿ ಕಲ್ಯಾಣ ಸಂಸ್ಥೆ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಭಾನುವಾರ ಪ್ರತಿಭಟನಾ ನಿರತರೊಡನೆ ಸಮಾಲೋಚಿಸಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
    ಅರಣ್ಯ ಇಲಾಖೆ ಇಲ್ಲಿನ ಇರುಳಿಗ ಜನಾಂಗದವರಿಗೆ ಒಕ್ಕಲೆಬ್ಬಿಸಿದ ಜಮೀನು ನೀಡಲು ಮೀನಮೇಷ ಏಣಿಸುತ್ತಿದೆ. ಸರ್ಕಾರದ ಕಾನೂನಿನಲ್ಲಿ ಅವಕಾಶವಿದ್ದರೂ ಅವರಿಗೆ ಜಮೀನು ನೀಡಲು ನಿರಾಕರಿಸುತ್ತಿದೆ. ಈಗಾಗಲೇ ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕಣ್ಣೊರೆಸುವ ತಂತ್ರವನ್ನೇ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಒತ್ತು ನೀಡಬೇಕಾದ ಇಲಾಖೆಗಳು ಕಣ್ಮುಚ್ಚಿ ಕುಳಿತಂತಿದೆ. ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಸಮುದಾಯದ ಹೋರಾಟಕ್ಕೆ ವನವಾಸಿ ಕಲ್ಯಾಣ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತದೆ. ಕೂಡಲೇ ಸರ್ಕಾರ ಮನವಿಗೆ ಸ್ಪಂಧಿಸಲು ಮುಂದಾಗಬೇಕು ಒಕ್ಕಲೆಬ್ಬಿಸಿದ ಜಾಗದಲ್ಲಿ ಜಮೀನು ನೀಡಲು ಮುಂದಾಗಬೇಕು ಎಂದರು.

    ಇರುಳಿಗ ಸಮುದಾಯದ ಮುಖಂಡ ಮಹದೇವಯ್ಯ ಮಾತನಾಡಿ 2006 ಅರಣ್ಯಹಕ್ಕು ಕಾಯ್ದೆ ಅನ್ವಯ ಅರಣ್ಯದಲ್ಲಿ ನಾವು ಕೃಷಿ ಮಾಡುತ್ತಿದ್ದ ವಾಸವಿದ್ದ ಜಾಗವನ್ನು ನಮಗೆ ನೀಡಬೇಕು ಎಂದು ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಜತೆಗೆ ಹಲವಾರು ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ನ್ಯಾಯುತವಾಗಿ ಸಿಗಬೇಕಾದ ಹಕ್ಕುಪತ್ರ ಅರಣ್ಯ ಮತ್ತಿತರ ಇಲಾಖೆಗಳ ಅಧಿಕಾರಿಗಳ ದ್ವಂದ್ವದಿಂದ ಸಿಗುತ್ತಿಲ್ಲ ನಮಗೆ ಪದೇ ಪದೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ವನವಾಸಿ ಸಂಘಟನಾ ಕಾರ್ಯದರ್ಶಿ ಬಮ್ಮೂ ಪಾಟೀಲ್, ಬೆಂಗಳೂರು ನಗರ ಸಮಿತಿ ಮುಖಂಡ ಕೃಷ್ಣಮೂರ್ತಿ, ರಾಜು, ಗ್ರಾಮಸ್ಥರಾದ ಜೆ.ಎನ್. ಶಿವರಾಜು, ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಮಹದೇವಮ್ಮ, ಶಿವಮಾದಮ್ಮ, ಈರಮ್ಮ, ಮಾದಮ್ಮ ಮತ್ತಿತರರಿದ್ದರು.

     

    20 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಉಪವಿಭಾಗಾಧಿಕಾರಿಗಳು, ಡಿಎಫ್‌ಒ, ಎಸಿಎಫ್, ಆರ್‌ಎಫ್‌ಒ. ಇಒ, ರಾಜಸ್ವ ನಿರೀಕ್ಷಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋಗುತ್ತಿದ್ದಾರೇ ಹೊರತು ಒಕ್ಕಲೆಬ್ಬಿಸಿದ ಜಮೀನು ನೀಡುವ ಭರವಸೆ ಮಾತ್ರ ಸಿಕ್ಕಿಲ್ಲ. ಜಮೀನು ನೀಡುವವರೆಗೂ ಅರಣ್ಯ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ.
    ಕೃಷ್ಣಮೂರ್ತಿ ಇರುಳಿಗ ಸಮಾಜದ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts