ಕೇಶವಮೂರ್ತಿ ವಿ.ಬಿ. ಹಾವೇರಿ
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲು ನೇರ ನಗದು ವರ್ಗಾವಣೆ ಮಾಡುವ ಯೋಜನೆಯಿಂದ ಹಾವೇರಿ ಜಿಲ್ಲೆಗೆ ಪ್ರತಿ ತಿಂಗಳು 21 ಕೋಟಿ ರೂ. ಪಾವತಿಯಾಗಲಿದೆ. ಯೋಜನೆ ಆರಂಭಗೊಂಡ ಮೊದಲ ತಿಂಗಳಲ್ಲೇ 21 ಕೋಟಿ ರೂ. ಮಂಜೂರಾಗಿದ್ದು, ಸದ್ಯ 2,99,812 ಫಲಾನುಭವಿಗಳಿಗೆ 17 ಕೋಟಿ ರೂ. ಬಿಡುಗಡೆಯಾಗಿದೆ. ಒಂದೆರೆಡು ದಿನಗಳಲ್ಲಿ ಅರ್ಹರ ಖಾತೆಗಳಿಗೆ ನೇರವಾಗಿ ಜಮೆಯಾಗುವ ನಿರೀಕ್ಷೆ ಇದೆ.
ಜುಲೈ 10ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣ 170 ರೂ.ಗಳನ್ನು ಲಾನುಭವಿಗಳಿಗೆ ನೇರ ಪಾವತಿ ಮಾಡುವ ಯೋಜನೆಗೆ ಚಾಲನೆ ನೀಡಿದ್ದರು. ಪ್ರತಿದಿನ ಒಂದು ಅಥವಾ ಎರಡು ಜಿಲ್ಲೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯ್ಕೆ ಮಾಡಿಕೊಂಡಿದೆ. ಜು. 15ರಂದು ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಅರ್ಹರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ. ಸದ್ಯಕ್ಕೆ ಒಬ್ಬರಿಗೆ 5 ಕೆಜಿ ಅಕ್ಕಿ ಮಾತ್ರ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿದೆ. ಉಳಿದ 5 ಕೆಜಿ ಬದಲು ಪ್ರತಿ ಕಿಲೋಕ್ಕೆ 34 ರೂ.ನಂತೆ ಒಟ್ಟು 170 ರೂ. ಕೊಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 4,43,236 ಪಡಿತರ ಚೀಟಿದಾರ ಕುಟುಂಬಗಳಿವೆ. 46,948 ಅಂತ್ಯೋದಯ ಹಾಗೂ 3,46,174 ಬಿಪಿಎಲ್ ಕಾರ್ಡದಾರರು ಸೇರಿ ಒಟ್ಟು 3,93,122 ಪಡಿತರ ಚೀಟಿದಾರ ಕುಟುಂಬಗಳು ಯೋಜನೆಯ ಫಲಾನುಭವಿಗಳಿದ್ದಾರೆ. ಆದರೆ, ಈ ಪೈಕಿ 28,472 ಅಂತ್ಯೋದಯ ಚೀಟಿದಾರರು ಹಾಗೂ 2,71,340 ಬಿಪಿಎಲ್ ಚೀಟಿದಾರರು ಸೇರಿ ಒಟ್ಟು 2,99,812 ಕುಟುಂಬಗಳು ಜುಲೈ ತಿಂಗಳ ಅನ್ನಭಾಗ್ಯ ಯೋಜನೆಯ ತಲಾ ಐದು ಕೆಜಿ ಅಕ್ಕಿಯ ಮೌಲ್ಯ 170 ರೂ. ಪಡೆಯಲು ಅರ್ಹರಾಗಿದ್ದಾರೆ.
55,881 ಎಪಿಎಲ್ ಕಾರ್ಡ್ದಾರರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಅಂತ್ಯೋದಯ ಹಾಗೂ ಹಾಗೂ ಬಿಪಿಎಲ್ ಕಾರ್ಡ ಹೊಂದಿದವರಲ್ಲಿ ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆ ಲಿಂಕ್ ಆಗದಿರುವುದು, ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಸೇರಿದಂತೆ ಇತರ ಸಮಸ್ಯೆ ಇರುವ 43,297 ಕಾರ್ಡದಾರರಿಗೆ ಸದ್ಯಕ್ಕೆ ಯೋಜನೆಯ ಲಾಭ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿಕೊಂಡರೆ ಮುಂದಿನ ತಿಂಗಳು ಲಾಭ ಪಡೆಯಲಿದ್ದಾರೆ.
ಅನ್ನಭಾಗ್ಯ ಯೋಜನೆಯ ಹಣಕ್ಕಾಗಿ ಫಲಾನುಭವಿಗಳು ಕಾದು ಕುಳಿತಿದ್ದು, ದಿನವೂ ಎಸ್ಎಂಎಸ್ಗಾಗಿ ಎದುರು ನೋಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಹಣ ಖಾತೆಗಳಿಗೆ ವರ್ಗಾವಣೆಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ಎಷ್ಟು ಹಣ ?
ಬಿಪಿಎಲ್ ಕಾರ್ಡ ಹೊಂದಿದ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿಯ ಹಣ ತಲಾ 170 ರೂ. ಹಣ ಜಮೆಯಾಗಲಿದೆ. ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬದಲ್ಲಿ ಮೂವರು ಇದ್ದರೆ ಅವರಿಗೆ ಹಣ ಸಂದಾಯವಾಗುವುದಿಲ್ಲ. ನಾಲ್ವರು ಹಾಗೂ ಅದಕ್ಕಿಂತ ಹೆಚ್ಚು ಜನ ಇದ್ದರೆ ತಲಾ 170 ರೂ. ಜಮೆಯಾಗುತ್ತದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಜಿಲ್ಲೆಯ 2,99,812 ಫಲಾನುಭವಿಗಳಿಗೆ 17 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಖಜಾನೆ 2 ಹಾಗೂ ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ಪಡೆದು ಆರ್ಬಿಐಗೆ ರವಾನಿಸಲಾಗಿದೆ. ಶುಕ್ರವಾರ ಸಂಜೆ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಅಥವಾ ಪೋಸ್ಟ್ ಖಾತೆಗೆ ನೇರವಾಗಿ ವರ್ಗಾವಣೆಯಾಗುವ ನಿರೀಕ್ಷೆ ಇದೆ.
| ನಾಗರಾಜ ಎಲ್., ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ