More

    ನವೆಂಬರ್​ ಮಾಸದ ಜಿಎಸ್​ಟಿ ಸಂಗ್ರಹ; ಕರ್ನಾಟಕಕ್ಕೆ ಮತ್ತೆ ಎರಡನೇ ಸ್ಥಾನ

    ನವದೆಹಲಿ: ಕಳೆದ ನವೆಂಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರವು ಎಂದಿನಂತೆ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಿಗಿಂತಲೂ ಹೆಚ್ಚಿನ ತೆರಿಗೆಯನ್ನು ಕರ್ನಾಟಕ ಈ ಮಾಸದಲ್ಲಿ ಸಂಗ್ರಹಿಸಿದೆ.

    ಮಹಾರಾಷ್ಟ್ರ ರಾಜ್ಯವು 25,585 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹದೊಂದಿಗೆ ಮುಂಚೂಣಿ ಸ್ಥಾನದಲ್ಲಿ ಮುಂದುವರಿದಿದೆ. 2022ರ ನವೆಂಬರ್​ನಲ್ಲಿ ಈ ರಾಜ್ಯವು 21,611 ಕೋಟಿ ರೂಪಾಯಿ ಸಂಗ್ರಹಿಸಿತ್ತು.

    11,970 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹಿಸುವ ಮೂಲಕ ಕರ್ನಾಟಕವು ಎರಡನೇ ಸ್ಥಾನದಲ್ಲಿ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೊದಲು ಕೂಡ ರಾಜ್ಯವು ಮಾಸಿಕ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿತ್ತು. 2022ರ ನವೆಂಬರ್​ನಲ್ಲಿ 10,238 ಕೋಟಿ ರೂಪಾಯಿಗಳನ್ನು ಕರ್ನಾಟಕ ಸಂಗ್ರಹಿಸಿತ್ತು.

    ಪ್ರಮುಖ ರಾಜ್ಯಗಳ ಪೈಕಿ ಗುಜರಾತ್ 10,853 ಕೋಟಿ ರೂಪಾಯಿ, ತಮಿಳುನಾಡು 10,255 ಕೋಟಿ ರೂಪಾಯಿ, ಹರಿಯಾಣ 9,732 ಕೋಟಿ ರೂಪಾಯಿ, ಉತ್ತರ ಪ್ರದೇಶ 8,973 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹಿಸಿವೆ.

    ಕಳೆದ ನವೆಂಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,67,929 ಕೋಟಿ ಸಂಗ್ರಹವಾಗಿದೆ, ಇದರಲ್ಲಿ ಸಿಜಿಎಸ್‌ಟಿ 30,420 ಕೋಟಿ, ಎಸ್‌ಜಿಎಸ್‌ಟಿ 38,226 ಕೋಟಿ, ಐಜಿಎಸ್‌ಟಿ 87,009 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 39,198 ಕೋಟಿ ಸೇರಿ) ಮತ್ತು ಸೆಸ್ 12,274 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,036 ಕೋಟಿ ಸೇರಿ) ರೂಪಾಯಿ ಇದೆ.

    ನವೆಂಬರ್ ತಿಂಗಳ ಜಿಎಸ್​ಟಿಯಲ್ಲಿ ಕೇಂದ್ರದ ಪಾಲು 68,297 ಕೋಟಿ ರೂಪಾಯಿ ಹಾಗೂ ರಾಜ್ಯಗಳ ಪಾಲು 69,783 ಕೋಟಿ ರೂಪಾಯಿ ಇರಲಿದೆ.

    2023 ರ ತಿಂಗಳ ನವೆಂಬರ್ ಜಿಎಸ್​​ಟಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಆದಾಯಕ್ಕಿಂತ ಶೇಕಡಾ 15ರಷ್ಟು ಹೆಚ್ಚಾಗಿದೆ. ಅಲ್ಲದೆ, 2023-24 ರ ಹಣಕಾಸು ವರ್ಷದಲ್ಲಿ ನವೆಂಬರ್ 2023 ರವರೆಗಿನ ಯಾವುದೇ ತಿಂಗಳಿಗೆ ಹೋಲಿಸಿದರೂ ಇದು ಅತ್ಯಧಿಕವಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಆರನೇ ಬಾರಿಗೆ 1.60 ಲಕ್ಷ ಕೋಟಿ ರೂಪಾಯಿ ದಾಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts