More

    200 ಟನ್ ಹೂವು ಮಾರಾಟ!

    ಬೆಳಗಾವಿ: ಕರೊನಾದಿಂದ ಉಂಟಾದ ದಿಢೀರ್ ಬದಲಾವಣೆ, ಆರ್ಥಿಕ ಹರಿವಿನ ಸಮಸ್ಯೆ, ಜನರ ಜೀವನಮಟ್ಟದ್ದಲ್ಲಾದ ಏರು-ಪೇರುಗಳ ಮಧ್ಯೆಯೂ ಈ ಬಾರಿ ದೀಪಾವಳಿ ಹಬ್ಬ ರಂಗೇರಿದೆ. ಹೂವು, ಹಣ್ಣು ಖರೀದಿಗಾಗಿ ಜನರು ಮುಗಿಬೀಳುತ್ತಿದ್ದು, ಸಗಟು ಮಾರಾಟ ಜೋರಾಗಿದೆ.

    ಇಲ್ಲಿನ ಅಶೋಕ ನಗರದ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಮೂರು ದಿನದಲ್ಲಿ ಬರೋಬ್ಬರಿ 200 ಟನ್ ದಾಖಲೆ ಪ್ರಮಾಣದ ಹೂವು ಮಾರಾಟವಾಗಿದೆ. ಅಂದಾಜು 2.5 ಕೋಟಿ ರೂ. ಮೌಲ್ಯದ ವಹಿವಾಟಾಗಿದೆ. ಕರೊನಾ ಭಯ ಮರೆತ ಜಿಲ್ಲೆಯ ಜನರು ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಪುಷ್ಪ ಹರಾಜು ಕೇಂದ್ರಕ್ಕೆ ಬಂದು ತಮಗಿಷ್ಟವಾದ ಹೂ ಖರೀದಿಸಿ, ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ.

    ಹೂಗಳ ರಾಶಿ: ಬಿಳಿ ಸೇವಂತಿಗೆ, ಹಳದಿ ಸೇವಂತಿಗೆ, ಚೆಂಡು, ಮ್ಯಾರಿಗೋಲ್ಡ್ ಸೇವಂತಿ, ಗುಲಾಬಿ, ಅಸ್ಟರ್, ಜರ್ಜೆರಾ, ಅಂತುರಿಯಂ, ಆರ್ಕೆಡ್ಸ್ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದಲ್ಲದೆ, ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ರೈತರು ಮಾರುಟ್ಟೆಗೆ ಹೂ ತಂದಿದ್ದರು. ಇದರಲ್ಲಿ ಪ್ರಮುಖವಾಗಿ ಸವದತ್ತಿ ತಾಲೂಕಿನ ಬೂದಿಗೊಪ್ಪದ ಹೂವುಗಳು ಗ್ರಾಹಕರ ಕೇಂದ್ರ ಬಿಂದುವಾಗಿದ್ದವು. ರಾಮದುರ್ಗ ತಾಲೂಕಿನ ಸೇವಂತಿ, ಸುಗಂಧರಾಜ ಪುಷ್ಟವಂತೂ ಜನಮನ ಸೆಳೆದವು. ಬೆಳಗಾವಿ ತಾಲೂಕಿನಿಂದ ಕಟ್ ಪ್ಲವರ್ಸ್‌, ಗುಲಾಬಿ, ಜರ್ಜೆರಾ, ಅಂತುರಿಯಂ ಹೂವುಗಳು ಪುಷ್ಪಪ್ರಿಯರನ್ನು ಆಕರ್ಷಿಸಿದವು.

    ದಾಖಲೆ ಮಾರಾಟ: ತೋಟಗಾರಿಕೆ ಇಲಾಖೆಯಿಂದ ಪುಷ್ಪ ಹರಾಜು ಕೇಂದ್ರದಲ್ಲಿ 16 ಮಳಿಗೆ ತೆರೆಯಲಾಗಿದ್ದು, ಶೇ. 75:25ರ ಅನುಪಾತದಲ್ಲಿ 55 ತಿಂಗಳ ಅವಧಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ ರೈತರಿಗೆ 4, ಪರಿಶಿಷ್ಟ ಜಾತಿ 2, ಪರಿಶಿಷ್ಟ ಪಂಗಡ-1 ಮತ್ತು ವ್ಯಾಪಾರಸ್ಥರಿಗೆ 9 ಮಳಿಗೆ ನೀಡಲಾಗಿದೆ. ಈ ಎಲ್ಲ ಮಳಿಗೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಹೂ ಮಾರಾಟವಾಗಿದೆ.

    ರೈತರಿಗೆ ತರಬೇತಿ, ವಸತಿ ವ್ಯವಸ್ಥೆ

    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಪುಷ್ಪ ಹರಾಜು ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಹೂವುಗಳ ಪರಿಶೀಲನೆ ಮಾಡುತ್ತಾರೆ. ರೈತರು ಮಾರುಕಟ್ಟೆಗೆ ತಂದ ಹೂಗಳಿಗೆ ರೋಗ ಬಂದಿದ್ದರೆ ಹಾಗೂ ಹೂವಿನ ಗಾತ್ರ ಸಣ್ಣದಿದ್ದರೆ ಅದಕ್ಕೆ ಪರಿಹಾರೊಪಾಯ ಕಲ್ಪಿಸಲು ತೋಟಗಾರಿಕೆ ಅಧಿಕಾರಿಗಳು ಸಲಹೆ, ಸೂಚನೆ ನೀಡುತ್ತಿದ್ದಾರೆ. ಜತೆಗೆ ಕೇಂದ್ರದಲ್ಲಿ ಹೂವು ಬೆಳೆಗಾರರಿಗೆ ಅಗತ್ಯ ತರಬೇತಿ ನೀಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ತಾಂತ್ರಿಕ ಮಾಹಿತಿ ನೀಡುತ್ತಾರೆ. ಪುಷ್ಪ ಹರಾಜು ಕೇಂದ್ರದಲ್ಲಿ ರೈತ ಉತ್ಪಾದಕರ ಸಂಸ್ಥೆಯೂ ಇದೆ. ಇದು ತೋಟಗಾರಿಕೆ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಿದ್ದು, ರೈತರಿಗೆ ಅಗತ್ಯ ಕ್ರಿಮಿನಾಶಕಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ದೂರ ಪ್ರದೇಶದಿಂದ ಬರುವ ರೈತರಿಗೆ ಪುಷ್ಪ ಹರಾಜು ಕೇಂದ್ರದಲ್ಲಿ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

    ರಾಜ್ಯದಲ್ಲಿರುವ ಸುಮಾರು 6 ಪುಷ್ಪ ಹರಾಜು ಕೇಂದ್ರಗಳ ಪೈಕಿ ಬೆಳಗಾವಿ ಪುಷ್ಪ ಹರಾಜು ಕೇಂದ್ರದಲ್ಲಿ ದೀಪಾವಳಿ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಹೂವುಗಳ ಮಾರಾಟವಾಗಿದೆ. ಪುಷ್ಪ ಹರಾಜು ಕೇಂದ್ರದಲ್ಲಿ ರೈತರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.
    | ಕಿರಣ ಉಪ್ಪಾಳೆ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts