More

    2.03 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ

    ನಂಜನಗೂಡು: 2023-24ನೇ ಸಾಲಿನ 75.35 ಕೋಟಿ ರೂ.ವೆಚ್ಚದ ಆಯವ್ಯಯ ಕ್ರಿಯಾ ಯೋಜನೆ ಸಿದ್ಧಪಡಿಸಿ, 2.03 ಕೋಟಿ ರೂ.ಉಳಿತಾಯದ ಬಜೆಟ್ ಮಂಡಿಸಲಾಗುತ್ತಿದೆ ಎಂದು ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ತಿಳಿಸಿದರು.

    ನಗರಸಭೆ ಸಭಾಂಗಣದಲ್ಲಿ ಗುರುವಾರ ಬಜೆಟ್ ಮಂಡಿಸಿದ ಅವರು, ಮುಂದಿನ ಆರ್ಥಿಕ ವರ್ಷದಲ್ಲಿ 77.38 ಕೋಟಿ ರೂ. ಅನುದಾನದಲ್ಲಿ 75.38 ಕೋಟಿ ರೂ.ಗಳನ್ನು ಆರ್ಥಿಕ ಬಳಕೆಗೆ ವಿನಿಯೋಗಿಸಿ 2.03 ಕೋಟಿ ರೂ.ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದರು.

    ನಗರಸಭೆಯ ಎಲ್ಲ ವಾರ್ಡ್‌ಗಳಲ್ಲೂ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ಅಭಿವೃದ್ಧಿಗಾಗಿ 10 ಕೋಟಿ ರೂ. ಮೀಸಲಿಡಲಾಗಿದೆ. ವಿಶೇಷವಾಗಿ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ದೇವೀರಮ್ಮನಹಳ್ಳಿ ಹಾಗೂ ದೇಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ 6 ಕೋಟಿ ರೂ.ವ್ಯಯಿಸಲಾಗುತ್ತಿದೆ. ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ 4 ಕೋಟಿ ರೂ.ಹಾಗೂ ಭೂಮಿ ಖರೀದಿಗಾಗಿ 80 ಲಕ್ಷ ರೂ. ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

    ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ 50 ಲಕ್ಷ ರೂ., ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ 3 ಕೋಟಿ ರೂ., ಉದ್ಯಾನವನಗಳ ಅಭಿವೃದ್ಧಿಗಾಗಿ 2 ಕೋಟಿ ರೂ., ಮಾಂಸ ಮಾರುಕಟ್ಟೆ ನಿರ್ಮಾಣಕ್ಕಾಗಿ 25 ಲಕ್ಷ ರೂ., ನಗರಸಭೆ ಕಚೇರಿ ನವೀಕರಣಕ್ಕಾಗಿ 50 ಲಕ್ಷ ರೂ., ಮಳೆ ನೀರಿನ ಚರಂಡಿ ನಿರ್ಮಾಣಕ್ಕಾಗಿ 2 ಕೋಟಿ ರೂ., ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕಾಗಿ 1 ಕೋಟಿ ರೂ., ಸ್ಮಶಾನಗಳ ಅಭಿವೃದ್ಧಿಗಾಗಿ 50 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆ ಘಟಕದ ಅಭಿವೃದ್ಧಿಗಾಗಿ 50 ಲಕ್ಷ ರೂ., ಕುಡಿಯುವ ನೀರು ಸರಬರಾಜು ಮಾಡಲು 2 ಕೋಟಿ ರೂ., ಒಳಚರಂಡಿ ಅಭಿವೃದ್ಧಿಗಾಗಿ 1 ಕೋಟಿ ರೂ., ನಗರಸಭೆ ಸಿಬ್ಬಂದಿ ವೇತನಕ್ಕಾಗಿ 10 ಕೋಟಿ ರೂ., ಬೀದಿದೀಪ ಹಾಗೂ ಕುಡಿಯುವ ನೀರಿನ ವಿದ್ಯುತ್ ಶುಲ್ಕ ಪಾವತಿಸಲು 10 ಕೋಟಿ ರೂ., ಪೌರಕಾರ್ಮಿಕರ ಗೃಹಭಾಗ್ಯ ವೆಚ್ಚಕ್ಕಾಗಿ 30 ಲಕ್ಷ ರೂ., ನೈರ್ಮಲ್ಯ ಹೊರಗುತ್ತಿಗೆ ನಿರ್ವಹಣೆಗಾಗಿ 2 ಕೋಟಿ ರೂ., ಬೀದಿದೀಪ ಹೊರಗುತ್ತಿಗೆ ನಿರ್ವಹಣೆಗಾಗಿ 1 ಕೋಟಿ ರೂ., ನೀರು ಸರಬರಾಜು ಹೊರ ಗುತ್ತಿಗೆಗಾಗಿ 1 ಕೋಟಿ ರೂ., ನಲ್ಮ್ ತರಬೇತಿ ಹಾಗೂ ಸಹಾಯ ಧನಕ್ಕಾಗಿ 2 ಕೋಟಿ ರೂ.ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

    ಸಮುದಾಯ ಭವನಗಳಿಗೆ ಒತ್ತು: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಭವನಗಳ ನಿರ್ಮಾಣಕ್ಕೆ ಈ ಬಾರಿ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪೌರಕಾರ್ಮಿಕ ಸಮುದಾಯ ಭವನಕ್ಕೆ 2 ಕೋಟಿ ರೂ., ಉಪ್ಪಾರ ಸಮುದಾಯಕ್ಕೆ 50 ಲಕ್ಷ ರೂ., ಬಸವ ಭವನಕ್ಕೆ ಅಗತ್ಯ ಪರಿಕರಕ್ಕಾಗಿ 50 ಲಕ್ಷ ರೂ., ಅಶೋಕಪುರಂ ಸಮುದಾಯ ಭವನಕ್ಕೆ 50 ಲಕ್ಷ ರೂ., ಒಕ್ಕಲಿಗರ ಭವನಕ್ಕೆ 25 ಲಕ್ಷ ರೂ., ಮುಸ್ಲಿಂ ಭವನಕ್ಕೆ 25 ಲಕ್ಷ ರೂ., ಮಡಿವಾಳ ಭವನಕ್ಕೆ 10 ಲಕ್ಷರೂ., ಕೋರೆಹುಂಡಿ ಕುರುಬರ ಭವನಕ್ಕೆ 15 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ ಎಂದು ಮಹದೇವಸ್ವಾಮಿ ತಿಳಿಸಿದರು.

    ಆಸ್ತಿ ತೆರಿಗೆಯಿಂದ 13.25 ಕೋಟಿ ರೂ.ಆದಾಯ: ನರಗಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಹಾಗೂ ತೆರಿಗೆ ದಂಡದಿಂದಲೇ 13.25 ಕೋಟಿ ರೂ. ಆದಾಯ ಬಂದಿದೆ. ಕಟ್ಟಡ ಪರವಾನಗಿಯಿಂದ 1.2 ಕೋಟಿ ರೂ., ಕುಡಿಯುವ ನೀರಿನ ಶುಲ್ಕದಿಂದ 2 ಕೋಟಿ ರೂ., ಒಳಚರಂಡಿ ಸಂಪರ್ಕ ಶುಲ್ಕದಿಂದ 1.2 ಕೋಟಿ ರೂ. ಆದಾಯ ಲಭಿಸಿದೆ ಎಂದು ಮಹದೇವಸ್ವಾಮಿ ತಿಳಿಸಿದರು.

    ಉಳಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ವೇತನ, ವಿದ್ಯುತ್ ಹಾಗೂ ವಿಶೇಷ ಅನುದಾನದಡಿ 25 ಕೋಟಿ ರೂ., ಸ್ವಚ್ಛ ಭಾರತ್ ಯೋಜನೆಯಡಿ 2 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 3 ಕೋಟಿ ರೂ. ಅನುದಾನ ಬಂದಿರುವುದಾಗಿ ತಿಳಿಸಿದರು.

    ಚರ್ಚೆಯಾಗದೇ ಅನುಮೋದನೆ: ಮುಂದಿನ ಆರ್ಥಿಕ ವರ್ಷದ ಬಜೆಟ್ ಅನ್ನು ಅಧ್ಯಕ್ಷ ಮಹದೇವಸ್ವಾಮಿ ಮಂಡಿಸುತ್ತಿದ್ದಂತೆ ಸದಸ್ಯರು ಯಾವುದೇ ಚರ್ಚೆ ಮಾಡದೆ ಅನುಮೋದಿಸುವ ಮೂಲಕ ಸಮ್ಮತಿಸಿದರು.
    ಇದೇ ಸಂದರ್ಭ ಎಲ್ಲ ಸದಸ್ಯರನ್ನು ಸನ್ಮಾನಿಸಿದ ಮಹದೇವಸ್ವಾಮಿ, ಕಳೆದ ಮೂರು ವರ್ಷದಿಂದ ಬಜೆಟ್ ಮಂಡಿಸುವ ಅವಕಾಶ ನನ್ನ ಪಾಲಿಗೆ ದೊರೆತಿದೆ. ಅದಕ್ಕೆ ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

    ನಗರಸಭಾ ಉಪಾಧ್ಯಕ್ಷೆ ನಾಗಮಣಿ ಶಂಕರ್, ಪೌರಾಯುಕ್ತ ರಾಜಣ್ಣ, ಎಇಇ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts