More

    2 ಗುಂಟೆ ಜಾಗದಲ್ಲಿ ಹುಗ್ಗಿ ಉಂಡ ಬಸಪ್ಪ

    ಶಿಗ್ಲಿ: ಕರೊನಾ ಮಹಾಮಾರಿ ಬಹುತೇಕರ ಕೆಲಸ ಕಿತ್ತುಕೊಂಡಿದೆ. ಜೀವನ ನಿರ್ವಹಣೆಗಾಗಿ ಹೆಣಗಾಡುವಂತೆ ಮಾಡಿದೆ. ಅಂಥದ್ದರಲ್ಲಿ ಗ್ರಾಮದ ಶ್ರೀ ಗುರುಬಸಪ್ಪಜ್ಜ ನಗರದ ನಿವಾಸಿ, ಕೃಷಿ ಕೂಲಿಕಾರ ಬಸಪ್ಪ ಹುಗ್ಗಿ ಎಂಬುವವರು ಮನೆ ಮುಂದಿನ ಖಾಲಿ ಜಾಗದಲ್ಲಿ ಕೈತೋಟ ನಿರ್ವಿುಸಿಕೊಂಡು ಬದುಕಿಗೆ ದಾರಿಕಂಡು ಕೊಂಡಿದ್ದಾರೆ.

    ಬಸಪ್ಪ ಒಟ್ಟು ಮೂರು ಗುಂಟೆ ಜಾಗ ಹೊಂದಿದ್ದಾರೆ. ಇದರಲ್ಲಿ ಒಂದು ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇನ್ನುಳಿದ ಎರಡು ಗುಂಟೆಯಲ್ಲಿ ಹತ್ತಾರು ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಕಾಯಿಪಲ್ಯ ಮಾರಾಟ ಮಾಡಿ ದಿನಕ್ಕೆ 50ರಿಂದ 100 ರೂ. ಆದಾಯವನ್ನೂ ಗಳಿಸುತ್ತಿದ್ದಾರೆ.

    ಕರೊನಾ ಭೀತಿಯಿಂದಾಗಿ ಸರ್ಕಾರ ಲಾಕ್​ಡೌನ್ ಘೊಷಿಸಿತು. ಬಹುತೇಕರು ಮಾಡುತ್ತಿದ್ದ ಕೆಲಸಗಳೆಲ್ಲ ನಿಂತು ಹೋಗಿ ಮನೆಗಳಲ್ಲಿಯೇ ಬಂಧಿಯಾಗಬೇಕಾಯಿತು. ಬಸಪ್ಪನವರಿಗೆ ಮನೆಯಲ್ಲಿ ಕುಳಿತು ಬೇಸರವಾಗತೊಡಗಿತು. ಆಗ ಮನೆ ಮುಂದಿನ ಖಾಲಿ ಜಾಗದಲ್ಲಿ ಏನಾದರೂ ಮಾಡಬೇಕು ಎಂದುಕೊಂಡು ಖಾಲಿ ಜಾಗ ಸ್ವಚ್ಛಗೊಳಿಸಿ ನಾಟಿಗೆ ಹದಗೊಳಿಸಿದರು. ಅದರಲ್ಲಿ ಬೆಟಗೇರಿ ಬದನೆಕಾಯಿ, ಅಲಸಂದಿ, ಹೆಸರು ಕಾಳು, ಕರಿಬೇವು, ಕೊತ್ತಂಬರಿ, ಹೀರೆಕಾಯಿ, ಸವತೆಕಾಯಿ, ಹಾಗಲಕಾಯಿ, ಟೊಮ್ಯಾಟೊ, ಬೀನ್ಸ್, ತೊಂಡೆಕಾಯಿ ಮತ್ತು ವೀಳ್ಯದೆಲೆ ಬಳ್ಳಿ, ಗೋವಿನಜೋಳ, ಹೈಬ್ರೀಡ್ ಜೋಳವನ್ನು ಬಿತ್ತನೆ ಮಾಡಿದರು. ತರಕಾರಿ ಬೆಳೆಗಳೆಲ್ಲವೂ ಫಲ ನೀಡಲಾರಂಭಿಸಿವೆ. ಮನೆಗೆ ಸಾಕಾಗುವಷ್ಟು ತರಕಾರಿ ಇಟ್ಟುಕೊಂಡು ಹೆಚ್ಚವರಿಯಾದದ್ದನ್ನು ಮಾರಾಟ ಮಾಡುತ್ತಾರೆ. ಇದರಿಂದ ಒಂದಿಷ್ಟು ಆದಾಯವೂ ಕೈ ಸೇರುತ್ತಿದೆ. ವೀಳ್ಯದೆಲೆ ಬಳ್ಳಿ, ಗೋವಿನಜೋಳ ಮತ್ತು ಹೈಬ್ರೀಡ್ ಜೋಳವಷ್ಟೇ ಫಸಲು ಕೊಡಬೇಕಿದೆ.

    ನಾಲ್ಕೈದು ತಿಂಗಳಿನಿಂದ ಲಾಕ್​ಡೌನ್​ನಿಂದಾಗಿ ಯಾವುದೇ ಕೂಲಿ ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವ ಬದಲು ಮನೆ ಸುತ್ತಮುತ್ತಲಿನ ಎರಡು ಗುಂಟೆ ಜಾಗವನ್ನು ಸ್ವಚ್ಛಗೊಳಿಸಿ ಹದ ಮಾಡಿ ಅದರಲ್ಲಿ ಕೈಲಾದಮಟ್ಟಿಗೆ ತರಕಾರಿ ಬೆಳೆಯುತ್ತಿದ್ದೇನೆ. ಇದಕ್ಕೆ ಮಗ, ಸೊಸೆ ಮತ್ತು ಮೊಮ್ಮಕ್ಕಳು ಅಲ್ಪಸ್ವಲ್ವ ಸಹಾಯ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಒಂದಿಷ್ಟು ಕೆಲಸ ಮತ್ತು ಆದಾಯ ಸಿಗುತ್ತಿದೆ.

    | ಬಸಪ್ಪ ಹುಗ್ಗಿ, ರೈತ

    ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಖಾಲಿ ಉಳಿದಿರುವ ಎಲ್ಲರೂ ಈ ರೀತಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು.

    | ಡಿ.ವೈ. ಹುನಗುಂದ ಗ್ರಾಪಂ ಮಾಜಿ ಅಧ್ಯಕ್ಷ, ಶಿಗ್ಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts