More

    2ನೇ ಹಂತದ ಮತದಾನ ಮುಕ್ತಾಯ ; ಎಲ್ಲರ ಚಿತ್ತ ಮತಎಣಿಕೆ ಕೇಂದ್ರಗಳತ್ತ

    ತುಮಕೂರು : ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯ ಕಂಡಿದ್ದು, ಜನರ ಚಿತ್ತ ಡಿ.30ರಂದು ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿರುವ ಮತಎಣಿಕೆ ಕೇಂದ್ರಗಳನ್ನು ವರ್ಗಾವಣೆಗೊಂಡಿದೆ.

    2ನೇ ಹಂತದ ಚುನಾವಣೆಯಲ್ಲಿ ಕರೊನಾ ಆತಂಕದ ನಡುವೆಯೂ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಲ್ಲಿ ಸರತಿಸಾಲಿನಲ್ಲಿ ನಿಂತು ತಮ್ಮ ಜವಾಬ್ದಾರಿ ಮೆರೆದರು. ಮತದಾನಕ್ಕೂ ಮುನ್ನಾ ಮತದಾರರನ್ನು ಸೆಳೆಯಲು ಎಲ್ಲ ಗ್ರಾಮಗಳಲ್ಲಿ ಹಣ, ಮದ್ಯ, ಮಾಂಸದ ಹೊಳೆಯೇ ಹರಿದಿದ್ದು ಗುಟ್ಟಾಗಿ ಉಳಿದಿಲ್ಲ.

    ಭಾನುವಾರ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಕರೊನಾ ಮಾರ್ಗಸೂಚಿಗಳನ್ನು ಮತದಾರರು ಅನುಸರಿಸಿದರಾದರೂ ಬಹುತೇಕ ಕಡೆಗಳಲ್ಲಿ ಕರೊನಾ ಭೀತಿಯಿಲ್ಲದೆ ಜನರು ಕಾಣಿಸಿಕೊಂಡರು. ಮದ್ಯ ಮಾರಾಟಕ್ಕೆ ನಿರ್ಬಂಧವಿದ್ದರೂ ಎಗ್ಗಿಲ್ಲದೆ ಮದ್ಯ ವಿತರಣೆಯಾಯಿತು.

    ಮಧುಗಿರಿ, ಶಿರಾ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿಗಳ 2400 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಿರುವ 7029 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ದಾಖಲಿಸಿದರು.

    ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ 1321 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 131 ಅತೀ ಸೂಕ್ಷ್ಮ, 198 ಸೂಕ್ಷ್ಮ ಹಾಗೂ 992 ಸಾಮಾನ್ಯ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಎಲ್ಲೆಡೆಯೂ ಮತಪತ್ರಗಳ ಬಳಕೆ ಮಾಡಿದ್ದರಿಂದ ದೋಷಗಳು ಎಲ್ಲಿಯೂ ಕಾಣಿಸಲಿಲ್ಲ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕೊರತೆ, ಅನುಭವದ ಅಭಾವದಿಂದ ಮತಗಟ್ಟೆ ಅಧಿಕಾರಿಗಳು ಪರದಾಡಿದರು. ಜಿಲ್ಲೆಯ ಐದು ತಾಲೂಕುಗಳಲ್ಲಿ ಡಿ.22ರಂದು ಮತದಾನ ಪೂರ್ಣವಾಗಿತ್ತು, ಭಾನುವಾರ ಐದು ತಾಲೂಕುಗಳಲ್ಲಿಯೂ ನಡೆದಿದ್ದು ಎಲ್ಲೆಡೆಯೂ ಪೂರ್ಣವಾಯಿತು.

    ಬೆಳಗ್ಗೆ 7ರಿಂದಲೇ ಮತಗಟ್ಟೆಗಳಲ್ಲಿ ಉದ್ದುದ್ದ ಸಾಲುಗಳು ಕಂಡಬಂದವು. ಜನಸಂದಣಿ ಕಡಿಮೆ ಮಾಡಲು 600 ಮತದಾರರಿಗೆ ಒಂದು ಮತಗಟ್ಟೆಯಂತೆ ಸ್ಥಾಪಿಸಲಾಗಿತ್ತು. ದಿನಪೂರ್ತಿ ಮತಗಟ್ಟೆಗಳಲ್ಲಿ ನಿರಂತರವಾಗಿ ಮತದಾನ ನಡೆಯಿತು. ಸಂಜೆ 5ರ ನಂತರ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು.

    ಕರೊನಾ ಸೋಂಕಿತರ ಮತದಾನ: ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಕರೊನಾ ಸೋಂಕಿತರು, ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗಿತ್ತು, ಶಿರಾ ತಾಲೂಕಿನ 21, ತಿಪಟೂರು 4, ಮಧುಗಿರಿ 16, ತುರುವೇಕೆರೆ 14, ಚಿಕ್ಕನಾಯಕನಹಳ್ಳಿ 17 ಸೇರಿ ಒಟ್ಟು 72 ಮಂದಿ ಸೋಂಕಿತರು ಹಕ್ಕು ಚಲಾಯಿಸಲು ಇಚ್ಚೆ ವ್ಯಕ್ತಪಡಿಸಿದ್ದರು. ಆರೋಗ್ಯ ಇಲಾಖೆ ಸೋಂಕಿತ ಮತದಾರರಿಗೆ ಮತದಾನ ವಾಡಲು ವ್ಯವಸ್ಥೆ ಕಲ್ಪಿಸಿತ್ತು. ಶಾಂತಿಯುತ ಮತದಾನಕ್ಕಾಗಿ ಮತ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. 5 ಡಿವೈಎಸ್‌ಪಿ, 15 ಮಂದಿ ಇನ್ಸ್‌ಪೆಕ್ಟರ್, 49 ಪಿಎಸ್‌ಐ, 73 ಎಎಸ್‌ಐ, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 1792ಕ್ಕೂ ಹೆಚ್ಚು ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಿದರು.

    30ರಂದು ಮತ ಎಣಿಕೆ : ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಶೇ.88.60 ಮತದಾನ ದಾಖಲಾಗಿದೆ. ತುರುವೇಕೆರೆಯಲ್ಲಿ ಶೇ.90.25 ದಾಖಲೆ ಮತದಾನವಾಗಿದೆ. ತಿಪಟೂರು- ಶೇ.88.95, ಶಿರಾ- ಶೇ.86.08, ಚಿಕ್ಕನಾಯಕನಹಳ್ಳಿ-ಶೇ.88.54 ಹಾಗೂ ಮಧುಗಿರಿ ತಾಲೂಕಿನಲ್ಲಿ ಶೇ.84.70 ಮತದಾನವಾಗಿದೆ. ಐದು ತಾಲೂಕುಗಳ 161 ಗ್ರಾಪಂಗಳ 2400 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. 7029 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿತು. ಚುನಾವಣಾ ಮತದಾನ ಮುಗಿದ ನಂತರ ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ಸರ್ಕಾರಿ ಬಾಲಕರ ಪಿಯು ಕಾಲೇಜು, ಚಿಕ್ಕನಾಯಕನಹಳ್ಳಿಯ ಸರ್ಕಾರಿ ಪಿಯು ಕಾಲೇಜು ಹಾಗೂ ತುರುವೇಕೆರೆಯ ಸರ್ಕಾರಿ ಜೂನಿಯರ್ ಕಾಲೇಜು ಕೇಂದ್ರಗಳಲ್ಲಿ ಭಾನುವಾರ ರಾತ್ರಿ ಡಿಮಸ್ಟರಿಂಗ್ ಕಾರ್ಯ ನಡೆಯಿತು. 30ರಂದು ಮತ ಎಣಿಕೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts