More

    2ನೇ ಡೋಸ್‌ಗೆ ನೂಕುನುಗ್ಗಲು, 3ನೇ ಅಲೆ ಆತಂಕದಲ್ಲಿ ಜನ ಪ್ರಕರಣಗಳ ಸಂಖ್ಯೆ ಏರಿಕೆ

    ಬೆಂಗಳೂರು ಗ್ರಾಮಾಂತರ: ನೆರೆ ರಾಜ್ಯಗಳಲ್ಲಿ ಕರೊನಾ ಮೂರನೇ ಅಲೆ ಹೆಚ್ಚುತ್ತಿದ್ದಂತೆ ಜಿಲ್ಲೆಯಲ್ಲಿಯೂ ಆಗಸ್ಟ್ ಆರಂಭದಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದ ಆತಂಕಗೊಂಡಿರುವ ಜನ ವ್ಯಾಕ್ಸಿನ್‌ಗೆ ಮುಗಿಬೀಳುತ್ತಿದ್ದಾರೆ. ಇದರ ನಡುವೆ ಎರಡನೇ ಡೋಸ್ ಪಡೆಯಲು ಹಾತೊರೆಯುತ್ತಿರುವುದರಿಂದ ಲಸಿಕಾ ಕೇಂದ್ರಗಳಲ್ಲಿ ನೂಕುನುಗ್ಗಲು ಕಂಡುಬರುತ್ತಿದೆ.

    ತಜ್ಞರ ಎಚ್ಚರಿಕೆಯಿಂದ ಆತಂಕ: ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ ಇದೇ ತಿಂಗಳಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎಂಬ ತಜ್ಞರ ಎಚ್ಚರಿಕೆ ಆತಂಕಕ್ಕೆ ಕಾರಣವಾಗಿದೆ. ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಮೂರನೇ ಅಲೆ ಆರ್ಭಟ ಶುರುವಾಗಿದೆ ಎಂದು ಜನ ಭೀತಿಗೊಳಗಾಗಿದ್ದಾರೆ. ಇದರಿಂದ ಲಸಿಕೆಗೂ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ವ್ಯಾಕ್ಸಿನ್ ಕೊರತೆಯಿಂದ ನೋ ಸ್ಟಾಕ್ ಬೋರ್ಡ್ ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಲಾಕ್‌ಡೌನ್ ಭೀತಿ: ಆಗಸ್ಟ್‌ನಲ್ಲಿ ಕರೊನಾ ಮೂರನೇ ಅಲೆ ಅಪ್ಪಳಿಸಲಿದ್ದು, ಅಕ್ಟೋಬರ್‌ನಲ್ಲಿ ಇದರ ತೀವ್ರತೆ ಹೆಚ್ಚಾಗಿರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದು, ಈಗಾಗಲೇ ಕೇರಳ ತಮಿಳುನಾಡಿನಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್‌ಕರ್ಫ್ಯೂ ಜಾರಿಯಾಗಿರುವುದರಿಂದ ಜಿಲ್ಲೆಯಲ್ಲೂ ಲಾಕ್‌ಡೌನ್ ಭೀತಿ ಶುರುವಾಗಿದೆ. ಎರಡು ಬಾರಿ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕಂಗೆಟ್ಟಿರುವ ಜನರಿಗೆ ಮೂರನೇ ಅಲೆ ನಿಯಂತ್ರಣಕ್ಕೆ ಮತ್ತೊಮ್ಮೆ ಲಾಕ್‌ಡೌನ್ ಹೊರೆಯಾಗಲಿದೆ ಎಂಬ ದುಗುಡ ಆರಂಭವಾಗಿದೆ.

    ಗಲಾಟೆ ಗದ್ದಲ: ಪ್ರತಿನಿತ್ಯ ಲಸಿಕಾ ಕೇಂದ್ರಗಳಿಗೆ ನೂರಾರು ಮಂದಿ ಬರುತ್ತಿದ್ದಾರೆ. ಆದರೆ ಹತ್ತಿಪ್ಪತ್ತು ಮಂದಿಗಷ್ಟೇ ಲಸಿಕೆ ಸಿಗುತ್ತಿದೆ. ಹಲವು ಬಾರಿ ಅಲೆದಾಡಿದರೂ ಲಸಿಕೆ ಸಿಗುತ್ತಿಲ್ಲ ಎಂದು ಜನರು ಅಸಹನೆ ವ್ಯಕ್ತಪಡಿಸಿದ್ದಾರೆ. ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾದ ಅರ್ಧ ಗಂಟೆಯಲ್ಲೇ ನೋ ಸ್ಟಾಕ್ ಬೋರ್ಡ್ ಪ್ರದರ್ಶಿಸಲಾಗುತ್ತಿದೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾದು ವಾಪಸ್ ಹೋಗುವಂತಾಗಿದೆ ಎಂದು ಜನರು ಅಲವತ್ತಗೊಂಡಿದ್ದಾರೆ. ವ್ಯಾಕ್ಸಿನ್‌ಗಾಗಿ ಬಂದ ಜನರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳಕ್ಕೆ ಮುಂದಾಗುತ್ತಿದ್ದಾರೆ. ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸುವ ಹಂತಕ್ಕೂ ಹೋಗಿದೆ. ದೊಡ್ಡಬಳ್ಳಾಪುರ ಆಯುರ್ವೇದ ಲಸಿಕಾ ಕೇಂದ್ರದ ಎದುರು ಸಾರ್ವಜನಿಕರು ಲಸಿಕೆ ಬರುವವರೆಗೂ ರಸ್ತೆಯಲ್ಲೇ ಕೂರುವುದಾಗಿ ಹೇಳಿ ಕೆಲಕಾಲ ರಸ್ತೆ ತಡೆ ನಡೆಸಿದ ಘಟನೆಯೂ ನಡೆದಿದೆ.

    449 ಸಕ್ರಿಯ ಪ್ರಕರಣ: ಜಿಲ್ಲೆಗೆ ಸಂಬಂಧಿಸಿದಂತೆ ಇದುವೆರೆಗೆ 60,973 ಪ್ರಕರಣ ದೃಢಪಟ್ಟಿದೆ. ಇದರಲ್ಲಿ ನೆರೆ ಜಿಲ್ಲೆ ಹಾಗೂ ಹೊರರಾಜ್ಯದ 1,997 ಪ್ರಕರಣಗಳಾಗಿದ್ದು, 58,976 ಪ್ರಕರಣಗಳು ಜಿಲ್ಲೆಯ ನಿವಾಸಿಗಳದ್ದಾಗಿದೆ. ಪ್ರಕರಣಗಳಲ್ಲಿ 59,669 ಗುಣಮುಖರಾಗಿದ್ದಾರೆ . 449 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 855 ಮಂದಿ ಬಲಿಯಾಗಿದ್ದಾರೆ.

    ನೆರೆ ರಾಜ್ಯಗಳಲ್ಲಿ ಕರೊನಾ ಮೂರನೇ ಅಲೆ ಆರಂಭವಾಗಿದ್ದು ಸಹಜವಾಗಿ ಜನ ಆತಂಕಗೊಂಡಿದ್ದಾರೆ. ಜಿಲ್ಲೆಯಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನ ಆತಂಕಕ್ಕೊಳಗಾಗಬಾರದು. ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ವಾಕ್ಸಿನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ.
    ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts