More

    179 ಟನ್ ಕೋವಿಡ್ ತ್ಯಾಜ್ಯ ವಿಲೇವಾರಿ

    ಸಂತೋಷ ವೈದ್ಯ ಹುಬ್ಬಳ್ಳಿ

    ಧಾರವಾಡ ಜಿಲ್ಲೆಯಲ್ಲಿ ಮೊದಲ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ದಿನದಿಂದ ಅಕ್ಟೋಬರ್ 15ರವರೆಗೆ ಒಟ್ಟು 179 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ (ಕೋವಿಡ್ ತ್ಯಾಜ್ಯ) ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ.

    ಧಾರವಾಡದ ಹೊಸಯಲ್ಲಾಪುರ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಮಾರ್ಚ್ 22ರಂದು ಕರೊನಾ ದೃಢಪಟ್ಟಿದ್ದು ಜಿಲ್ಲೆಯ ಮೊದಲ ಪ್ರಕರಣವಾಗಿತ್ತು. ಅಲ್ಲಿಂದ ಅಕ್ಟೋಬರ್ 30ರ ವರೆಗೆ 20717 ಜನರು ಕರೊನಾ ಪೀಡಿತರಾಗಿದ್ದಾರೆ. 1,51,325 ಜನ ಪ್ರತ್ಯೇಕ ವಾಸ (ಮನೆ, ಆಸ್ಪತ್ರೆ, ವಸತಿಗೃಹ, ಹೋಟೆಲ್ ಕ್ವಾರಂಟೈನ್) ಪೂರ್ಣಗೊಳಿಸಿದ್ದಾರೆ. ಈಗಲೂ 7531 ಜನ ಪ್ರತ್ಯೇಕ ವಾಸದಲ್ಲಿದ್ದಾರೆ.

    ‘ಜಿಲ್ಲೆಯಲ್ಲಿ ಅಕ್ಟೋಬರ್ 15ರ ವರೆಗೆ 1,79,277 ಕೆಜಿ ಕೋವಿಡ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಅತಿ ಕಡಿಮೆ 5495 ಕೆ.ಜಿ. ಹಾಗೂ ಆಗಸ್ಟ್​ನಲ್ಲಿ ಅತಿ ಹೆಚ್ಚು 49,329 ಕೆ.ಜಿ. ಕೋವಿಡ್ ತ್ಯಾಜ್ಯ ಸಂಗ್ರಹಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಧಾರವಾಡ ಜಿಲ್ಲಾ ಪರಿಸರ ಅಧಿಕಾರಿ ಶೋಭಾ ಪೋಳ ವಿಜಯವಾಣಿಗೆ ತಿಳಿಸಿದ್ದಾರೆ.

    ಆಸ್ಪತ್ರೆ, ಮನೆ, ವಸತಿ ಗೃಹ, ಹೋಟೆಲ್​ನಲ್ಲಿ ವಾಸ್ತವ್ಯ (ಕ್ವಾರಂಟೈನ್) ಇದ್ದ ಕರೊನಾ ಪೀಡಿತರು ಬಳಸಿ ಬಿಸಾಡಿದ ತ್ಯಾಜ್ಯವನ್ನು ಜೈವಿಕ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿದೆ. ಪಿಪಿಇ ಕಿಟ್, ಮಾಸ್ಕ್, ಸೂಜಿ, ರಕ್ತಸಿಕ್ತ ಬಟ್ಟೆಗಳು, ಹ್ಯಾಂಡ್ ಗ್ಲೌಸ್, ಕಾಟನ್, ಸಿರಿಂಜ್, ಡ್ರೆಸ್ಸಿಂಗ್, ಇತ್ಯಾದಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ನಿತ್ಯ ಮನೆ ಮನೆಗೆ ಬಂದು ಪೌರ ಕಾರ್ವಿುಕರು ತ್ಯಾಜ್ಯ ಸಂಗ್ರಹಿಸುವ ರೀತಿಯಲ್ಲಿ ಅಲ್ಲ. ಕೋವಿಡ್ ಕೇರ್ ಸೆಂಟರ್, ಕರೊನಾ ಪರೀಕ್ಷೆ ನಡೆಸುವ ಪ್ರಯೋಗಾಲಯ, ಸಂಚಾರಿ ಪರೀಕ್ಷಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವು ಸಹ ಕೋವಿಡ್ ತ್ಯಾಜ್ಯವೇ ಆಗಿವೆ. ಜಿಲ್ಲೆಯಲ್ಲಿ ರಿಯೋ ಗ್ರೀನ್ ಎನ್ವಿರಾನ್ ಇಂಡಿಯಾ ಎಂಬ ಸಂಸ್ಥೆ ಈ ಕೆಲಸವನ್ನು ನಿರ್ವಹಿಸುತ್ತಿದೆ. ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಈ ಸಂಸ್ಥೆ ಕಾಮನ್ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್​ವೆುಂಟ್ ಘಟಕ ಹೊಂದಿದೆ. ಇದಕ್ಕಾಗಿಯೇ ತರಬೇತಿ ಹೊಂದಿದ ಸಂಸ್ಥೆಯ ಸಿಬ್ಬಂದಿ ನಿಯಮಿತವಾಗಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಪ್ರದೇಶದಿಂದ ಕೋವಿಡ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಸಿಬ್ಬಂದಿ ಪಿಪಿಇ ಕಿಟ್ ಹಾಗೂ ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಕೋವಿಡ್ ತ್ಯಾಜ್ಯವನ್ನು ಸಂಗ್ರಹಿಸಿ ವಾಹನದಲ್ಲಿ ಕೊಂಡೊಯ್ಯುತ್ತಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಮಾರ್ಗಸೂಚಿಯಂತೆ ದಹಿಸಲಾಗುತ್ತದೆ.

    ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ರಿಯೋ ಗ್ರೀನ್ ಎನ್ವಿರಾನ್ ಇಂಡಿಯಾ ಸಂಸ್ಥೆಗೆ ಕೆಎಸ್​ಪಿಸಿಬಿಯೇ ಪರವಾನಿಗೆ ನೀಡಿದೆ. ಹು-ಧಾ ಅವಳಿ ನಗರದಲ್ಲಿರುವ ಆಸ್ಪತ್ರೆ, ಕೋವಿಡ್ ಕೇಂದ್ರ, ಕ್ವಾರಂಟೈನ್ ಸ್ಥಳಗಳ ಮಾಹಿತಿಯನ್ನು ಮಹಾನಗರ ಪಾಲಿಕೆ ನಿಯಮಿತವಾಗಿ ರಿಯೋ ಗ್ರೀನ್ ಎನ್ವಿರಾನ್ ಜತೆ ವಿನಿಮಯ ಮಾಡಿಕೊಳ್ಳುತ್ತದೆ. ಒಂದು ನಿರ್ದಿಷ್ಟ ವೇಳಾಪಟ್ಟಿಯಂತೆ ಕೋವಿಡ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.

    ಕೋವಿಡ್ ತ್ಯಾಜ್ಯದಲ್ಲಿ ವೈರಸ್ ಜೀವಂತ ಇರುವ ಸಾಧ್ಯತೆಗಳು ಇರುವುದರಿಂದ ಪಾಲಿಕೆ ಪೌರ ಕಾರ್ವಿುಕರು ಈ ಕೆಲಸವನ್ನು ನಿರ್ವಹಿಸುವುದಿಲ್ಲ. ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಪರಿಸರ ಇಂಜಿನಿಯರ್, ರಿಯೋ ಗ್ರೀನ್ ಎನ್ವಿರಾನ್ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts