ಗೌಹಾಟಿ : ಕೇವಲ 90 ಮತದಾರರ ಹೆಸರುಳ್ಳ ಮತಗಟ್ಟೆಯೊಂದರಲ್ಲಿ 171 ಮತ ಚಲಾವಣೆ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ರೀತಿ ಬೃಹತ್ ಗೋಲ್ಮಾಲ್ ನಡೆದಿರುವುದು ವಿಧಾನಸಭಾ ಚುನಾವಣೆ ನಡೆಯುತ್ತಿರುವ ಅಸ್ಸಾಂನ ದೀಮ ಹಸಾವೊ ಎಂಬ ಜಿಲ್ಲೆಯಲ್ಲಿ.
ಏಪ್ರಿಲ್ 1 ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಹಫ್ಲಾಂಗ್ ವಿಧಾನಸಭಾ ಕ್ಷೇತ್ರದಲ್ಲಿ ಶೇ. 74 ರಷ್ಟು ಮತದಾನ ವರದಿಯಾಗಿತ್ತು. ಈ ಕ್ಷೇತ್ರದಡಿ ಬರುವ 107 (ಎ) ಸಂಖ್ಯೆ ಹೊಂದಿದ ಖೊತ್ಲಿರ್ ಎಲ್ಪಿ ಸ್ಕೂಲ್ ಮತಗಟ್ಟೆಯಲ್ಲಿ ಈ ಪ್ರಸಂಗ ನಡೆದಿದೆ. ಸದರಿ ಮತಗಟ್ಟೆಯನ್ನು ಮೌಲ್ಡಮ್ ಎಲ್ಪಿ ಸ್ಕೂಲ್ನ ಮುಖ್ಯ ಮತದಾನ ಕೇಂದ್ರದ ಹೆಚ್ಚುವರಿ ಮತಗಟ್ಟೆಯಾಗಿ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ
ಈ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ 90 ಹೆಸರುಗಳಿದ್ದವು. ಆದರೆ ಇವಿಎಂನಲ್ಲಿ 171 ಮತಗಳು ಚಲಾಯಿಸಲ್ಪಟ್ಟಿದ್ದವು. “ಒಂದು ಹಳ್ಳಿಯ ಮುಖ್ಯಸ್ಥ ಅಧಿಕೃತ ಮತದಾರರ ಪಟ್ಟಿಯನ್ನು ಒಪ್ಪಲು ನಿರಾಕರಿಸಿದ್ದು, ತನ್ನದೇ ಪಟ್ಟಿಯನ್ನು ತಂದಿದ್ದ. ಆ ಪ್ರಕಾರ ಹಳ್ಳಿಯ ಜನರು ಮತ ಚಲಾಯಿಸಿದರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳು ಗ್ರಾಮ ಮುಖಂಡನ ಮಾತನ್ನು ಏಕೆ ಒಪ್ಪಿದರು ಮತ್ತು ಅಲ್ಲಿ ಭದ್ರತಾ ಸಿಬ್ಬಂದಿ ಕರ್ತವ್ಯನಿರತರಾಗಿದ್ದರೋ ಇಲ್ಲವೋ ಇನ್ನೂ ಸರಿಯಾಗಿ ತಿಳಿದಿಲ್ಲ.
ಈ ಪ್ರಸಂಗವು ಬೆಳಕಿಗೆ ಬಂದ ನಂತರ, ಸಂಬಂಧಿಸಿದ ಐವರು ಚುನಾವಣಾ ಅಧಿಕಾರಿಗಳನ್ನು ದೀಮ ಹಸಾವೊ ಜಿಲ್ಲಾ ಚುನಾವಣಾಧಿಕಾರಿಯು ಏಪ್ರಿಲ್ 2 ರಂದು ಅಮಾನತುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮತಗಟ್ಟೆಯಲ್ಲಿ ಮರುಮತದಾನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಅಧಿಕೃತ ಆದೇಶವನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಬ್ಯಾಲೆಟ್‌ನಲ್ಲಿ ಕಾಂಗ್ರೆಸ್, ಇವಿಎಂನಲ್ಲಿ ಬಿಜೆಪಿ ; ಸಾಸಲು ಸತೀಶ್ ಭಾವಚಿತ್ರಕ್ಕೆ ಕೊಕ್
ಕರ್ತವ್ಯ ಲೋಪದ ಮೇಲೆ ಅಮಾನತುಗೊಂಡ ಅಧಿಕಾರಿಗಳೆಂದರೆ ಸೆಕ್ಟರ್ ಆಫಿಸರ್ ಸೀಖೋಸೀಮ್ ಲಾಂಗುಮ್, ಪ್ರಿಸೈಡಿಂಗ್ ಆಫಿಸರ್ ಪ್ರಹ್ಲಾದ್ ರಾಯ್, ಪೋಲಿಂಗ್ ಆಫಿಸರ್ಗಳಾದ ಪರಮೇಶ್ವರ್ ಚರಂಗ್ಸ, ಸ್ವರಾಜ್ ಕಾಂತಿ ದಾಸ್ ಮತ್ತು ಲಾಲ್ಜಮ್ಲೊ ಥೀಕ್. (ಏಜೆನ್ಸೀಸ್)
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್ನ ಆರ್ಚ್ ರೆಡಿ
ಟಿಎಂಸಿ ಪರ ನಟಿ-ಸಂಸದೆ ಜಯಾ ಬಚ್ಚನ್ ಪ್ರಚಾರ
ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ