More

    ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ 432 ಮರ ಕಡಿತಲೆಗೆ ಒಪ್ಪಿಗೆ

    ಮೂಡಿಗೆರೆ: ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗಿನ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ 173 ರಸ್ತೆ ಬದಿಯಲ್ಲಿರುವ 432 ಮರಗಳನ್ನು ಕಡಿತಲೆಗೊಳಿಸಲು ಸೋಮವಾರ ಅರಣ್ಯ ಇಲಾಖೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ನಿರ್ಧರಿಸಲಾಯಿತು.

    ಹೆದ್ದಾರಿ ಪ್ರಾಧಿಕಾರದ ಎಇಇ ಮುನಿರಾಜು ಮಾತನಾಡಿ, ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ಒಟ್ಟು 16 ಮೀಟರ್ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ರಸ್ತೆ 2018ರಲ್ಲೇ ನಿರ್ವಣವಾಗಬೇಕಿತ್ತು. ಶಿರಾಡಿ ಘಾಟ್ ಬಂದ್ ಆಗಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಕಾಮಗಾರಿ ತಡವಾಗಿದೆ. ರಸ್ತೆ ಅಗಲೀಕರಣಕ್ಕೆ ವಿವಿಧ ಜಾತಿಯ 432 ಮರಗಳನ್ನು ತೆರವುಗೊಳಿಸ ಬೇಕಾಗಿದೆ. ಮಳೆಗಾಲ ಮುಗಿದ ಮೇಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

    ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಕಡಿತಲೆ ಮಾಡಿದ ವಿವಿಧ ಜಾತಿಯ 432 ಮರಗಳ ಬದಲಿಗೆ ರಸ್ತೆ ಬದಿಯಲ್ಲಿ 10 ಪಟ್ಟು ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಇದಕ್ಕೆ ಸಾರ್ವಜನಿಕರು ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದರು.

    ರಸ್ತೆ ಅಗಲೀಕರಣವಾಗದೇ ಮೂಡಿಗೆರೆ ತಾಲೂಕು ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಮರ ಕಡಿತಲೆ ಮಾಡಿದ ಕೂಡಲೇ ಹೊಸ ಗಿಡಗಳನ್ನು ನೆಟ್ಟು ರಕ್ಷಿಸಬೇಕು. ಮಳೆಗಾಲ ಮುಕ್ತಾಯಗೊಂಡ ಕೂಡಲೇ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸ ಬೇಕು ಎಂದು ಮರ ಕಡಿತಲೆಗೆ ಒಕ್ಕೂರಲಿನಿಂದ ಒಪ್ಪಿಗೆ ಸೂಚಿಸಿದರು.

    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್, ಉಪ ವಲಯ ಅರಣ್ಯಾಧಿಕಾರಿ ಚಿದಾನಂದ, ರಮೇಶ್, ಪರಿಸರ ಪ್ರೇಮಿಗಳಾದ ಹೇಮಶೇಖರ್, ಪ್ರಶಾಂತ್, ಅರುಣ ಗುತ್ತಿ, ಶರತ್ ಹೆಸ್ಗೂಡು, ಮಜೀದ್, ಗೋಪಾಲ, ಮಂಜುನಾಥ್ ಭೈರಾಪುರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts