More

    16 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಚುರುಕು

    ಧಾರವಾಡ: ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ವ್ಯಾಜ್ಯ ಇಂದು ನಿನ್ನೆಯದಲ್ಲ. ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ವಿಸ್ತೀರ್ಣ ಅಳೆದು ಹಕ್ಕುಪತ್ರ ನೀಡುವ ‘ಸ್ವಾಮಿತ್ವ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ. ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಹಾಗೂ ಭಾರತೀಯ ಸರ್ವೆಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ತಂತ್ರಜ್ಞಾನ ಆಧಾರಿತ ಭೂಮಾಪನ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 16,600 ಗ್ರಾಮಗಳ ಆಸ್ತಿಗಳಿಗೆ ಚೆಕ್​ಬಂದಿ ಮಾಡಲು ಡ್ರೋನ್ ಸರ್ವೆ ಕಾರ್ಯ ಚುರುಕಿನಿಂದ ಸಾಗಿದೆ.

    * ಏನಿದು ಯೋಜನೆ?: ಸರ್ಕಾರಿ, ಸಾರ್ವಜನಿಕ ಆಸ್ತಿಯ ಸರ್ವೆ ಕಾರ್ಯ ಯೋಜನೆಯ ಉದ್ದೇಶ. ಆಸ್ತಿಗಳ ಸರ್ವೆ ಕಾರ್ಯವನ್ನು ಡ್ರೋನ್ ಕ್ಯಾಮರಾ ಬಳಸಿ ಭೂಮಾಪನ ಕಾರ್ಯ ಮಾಡುತ್ತಿರುವುದು ಇದೇ ಮೊದಲು. ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಡಿ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಹಾಗೂ ಭಾರತೀಯ ಸರ್ವೆಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. 2020- 21ನೇ ಸಾಲಿನಲ್ಲಿ ಬೆಳಗಾವಿ, ಹಾಸನ, ರಾಮನಗರ, ತುಮಕೂರು, ಉತ್ತರ ಕನ್ನಡ, ವಿಜಯಪುರ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಕೊಡಗು, ಮೈಸೂರು, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸ್ವಾಮಿತ್ವ ಅನುಷ್ಠಾನಗೊಳ್ಳುತ್ತಿದೆ.

    * ಅನುಷ್ಠಾನ ಪ್ರಕ್ರಿಯೆ:

    ಸ್ವಾಮಿತ್ವ ಬಗ್ಗೆ ಆಯಾ ಗ್ರಾ.ಪಂ.ಗಳಿಂದ ಆಸ್ತಿ ಗುರುತು ಮಾಡಲು, ಅರಿವು ಮೂಡಿಸಲು ಗ್ರಾಮಸಭೆ ಜರುಗಿಸಲಾಗುತ್ತಿದೆ. ಡ್ರೋನ್ ಆಧಾರಿತ ಸರ್ವೆ ಕೈಗೊಳ್ಳಲು ಗ್ರಾಮಠಾಣಾ ಆಸ್ತಿಗಳನ್ನು ಬಿಳಿ ಪುಡಿಯಿಂದ ಮಾರ್ಕ್ ಮಾಡಲಾಗುತ್ತದೆ. ಗ್ರಾ.ಪಂ.ಗಳಲ್ಲಿ ಆಸ್ತಿ ನೋಂದಣಿ ಮಾಡಿ ಮಾಲೀಕರಿಗೆ ಆಸ್ತಿ ಪ್ರಮಾಣಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕೈಗೊಂಡು ಸುರಕ್ಷತಾ ಕ್ರಮ ಕೈಗೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

    ಧಾರವಾಡ ಜಿಲ್ಲೆಯ ಗ್ರಾಮಗಳು

    * ಧಾರವಾಡ ತಾಲೂಕಿನ ನಿಗದಿ, ಬೆನಕನಕಟ್ಟಿ, ಕಲಕೇರಿ, ದೇವಗಿರಿ, ಕೋಟೂರ, ಗರಗ.

    * ಅಳ್ನಾವರ ತಾಲೂಕಿನ ಅರವಟಗಿ, ಕುಂಬಾರಕೊಪ್ಪ, ಹೊನ್ನಾಪುರ, ಕಂಬಾರಗಣವಿ, ಕಡಬಗಟ್ಟಿ, ಕಾಶಿನಟ್ಟಿ.

    * ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ, ಕುರಡಿಕೇರಿ, ಬೆಳಗಲಿ, ಬೊಮ್ಮಸಂದ್ರ, ವರೂರ, ಕಂಪ್ಲಿಕೊಪ್ಪ, ಅದರಗುಂಚಿ, ಮುರಾರಹಳ್ಳಿ, ಅಗಡಿ, ತಿರುಮಲಕೊಪ್ಪ, ಚನ್ನಾಪುರ, ರಾಮಾಪುರ, ದೇವರಗುಡಿಹಾಳ, ರೇವಡಿಹಾಳ, ಮಂಟೂರ, ನಾಗರಹಳ್ಳಿ.

    * ಕಲಘಟಗಿ ತಾಲೂಕಿನ ತಂಬೂರ, ಸಿಂಗನಹಳ್ಳಿ, ದಾಸ್ತಿಕೊಪ್ಪ, ರಾಮನಾಳ, ಜಿನ್ನೂರ, ದ್ಯಾವನಕೊಂಡ, ಬೇಗೂರ, ಬಿಸರಳ್ಳಿ, ಧುಮ್ಮವಾಡ, ಬಿ. ಶೀಗಿಗಟ್ಟಿ, ಗಂಬ್ಯಾಪುರ, ಎಮ್ಮೆಟ್ಟಿ, ದೇವಲಿಂಗಿಕೊಪ್ಪ, ದಾಸನೂರು, ಕುರುವಿನಕೊಪ್ಪ, ಬಿ. ಗುಡಿಹಾಳ.

    * ಕುಂದಗೋಳ ತಾಲೂಕಿನ ಬೆಟದೂರ, ಇನಾಂಕೊಪ್ಪ, ಹರ್ಲಾಪುರ, ಸುಲ್ತಾನಪುರ, ಗೌಡಗೇರಿ, ಹಿರೇನರ್ತಿ, ಬಸಾಪುರ, ಗುಡೇನಕಟ್ಟಿ, ಯರಿನಾರಾಯಣಪುರ, ಹಿರೇಗುಂಜಾಳ, ಚಿಕ್ಕಗುಂಜಾಳ, ಯರಗುಪ್ಪಿ, ಮುಳ್ಳೊಳ್ಳಿ, ರೊಟ್ಟಿಗವಾಡ, ಕೊಡ್ಲಿವಾಡ.

    * ನವಲಗುಂದ ತಾಲೂಕಿನ ಜಾವೂರ, ಬಳ್ಳೂರ, ಗುಮ್ಮಗೋಳ, ಬ್ಯಾಲ್ಯಾಳ, ಶಿರೂರ, ಆಯೆಟ್ಟಿ, ನಾಯಕನೂರ, ಖನ್ನೂರ, ತಡಹಾಳ, ಕೊಂಗವಾಡ.

    * ಅಣ್ಣಿಗೇರಿ ತಾಲೂಕಿನ ಶಿಶುವಿನಹಳ್ಳಿ, ದುಂದೂರ, ನಲವಡಿ, ಮಣಕವಾಡ, ಭದ್ರಾಪುರ, ಮಜ್ಜಿಗುಡ್ಡ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

    ಈ ಗ್ರಾಮಗಳಲ್ಲಿ ಸೆ. 5ರಿಂದ ಗ್ರಾಮ ಸಭೆಗಳು ಆರಂಭಗೊಂಡಿದ್ದು, 12ರವರೆಗೆ ಜರುಗಲಿವೆ.

    ಸರ್ಕಾರಿ, ಸಾರ್ವಜನಿಕರ ನಿರ್ದಿಷ್ಟ ಆಸ್ತಿ ಗುರುತಿಸಲು ಸ್ವಾಮಿತ್ವ ಯೋಜನೆ ಸಹಕಾರಿ. ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 75 ಗ್ರಾಮಗಳ ಆಸ್ತಿಗಳ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆಸ್ತಿಯ ನಿರ್ದಿಷ್ಟತೆಯನ್ನು ಗುರುತಿಸಲು ಡ್ರೋನ್ ಆಧಾರಿತ ಸರ್ವೆ ಕಾರ್ಯ ನೆರವಾಗುತ್ತಿದೆ. ಗ್ರಾ.ಪಂ. ಸರ್ವೆ ಇಲಾಖೆಯ ಹಾಲಿ ಸಿಬ್ಬಂದಿಯೇ ದೈನಂದಿನ ಕೆಲಸಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳೂ ಸ್ವಾಮಿತ್ವಕ್ಕೆ ಒಳಪಡಲಿವೆ.

    – ಡಾ. ಬಿ.ಸಿ. ಸತೀಶ, ಧಾರವಾಡ ಜಿ.ಪಂ. ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts