More

    ಹಕ್ಕಿ ಜ್ವರ ಭೀತಿಗೆ 156 ಚಿಕನ್ ಸೆಂಟರ್ ಬಂದ್!

    ತುಮಕೂರು: ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ನಗರದ 156 ಚಿಕನ್ ಸೆಂಟರ್‌ಗಳ ಬಾಗಿಲು ಮುಚ್ಚಿಸಿದೆ.
    ಮೈಸೂರು, ದಾವಣೆಗೆರೆಯಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.31ರವರೆಗೆ ಕೋಳಿ ಮಾಂಸ ಮಾರಾಟ ಸ್ಥಗಿತಗೊಳಿಸಲಾಗಿದೆ.

    ಕರೊನಾ ಮಹಾಮಾರಿ ಆಘಾತದ ಬೆನ್ನಲ್ಲೇ ನೆಲಕಚ್ಚಿದ್ದ ಕುಕ್ಕುಟೋದ್ಯಮಕ್ಕೆ ಈಗ ‘ಹಕ್ಕಿಜ್ವರ’ ಗಾಯದ ಮೇಲೆ ಬರೆ ಎಳೆದಿದೆ. ಇದರೊಂದಿಗೆ ಹಕ್ಕಿಜ್ವರ ಭೀತಿ ಆವರಿಸಿದ್ದು, ಜನ ಕೋಳಿ ಮಾಂಸ ತಿನ್ನುವುದ ನ್ನೇ ಬಿಟ್ಟಿದ್ದಾರೆ. ಕೋಳಿ ಮಾಂಸದ ಬೆಲೆ ಸಹ ಪಾತಾಳಕ್ಕೆ ಕುಸಿದಿತ್ತು. ಈಗ ಹಕ್ಕಿಜ್ವರದಿಂದ ಕೋಳಿ ಮಾಂಸದಂಗಡಿಗಳನ್ನೇ ಮುಚ್ಚುವ ನಿರ್ಧಾರವನ್ನು ಪಾಲಿಕೆ ತೆಗೆದುಕೊಂಡಿದೆ. ಕುರಿ, ಮೇಕೆ ಮಾಂಸ ಮಾರಾಟದ ಮೇಲೆಯೂ ‘ಹಕ್ಕಿಜ್ವರ’ ಪರಿಣಾಮ ಬೀರಿಲ್ಲ. ಹಾಗಾಗಿ, ಮಟನ್ ಸೆಂಟರ್‌ಗಳಲ್ಲಿ ಮಾಂಸ ಮಾರಾಟಕ್ಕೆ ಅಡ್ಡಿಯಿಲ್ಲ. ಆದರೆ, ಕರೊನಾ ಸಂಬಂಧಿಸಿದಂತೆ ಮಾಂಸದಂಗಡಿಗಳ ಸುತ್ತಮುತ್ತ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಪಾಲಿಕೆ ಎಚ್ಚರಿಕೆ ನೀಡಿದೆ.

    ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ನೋಟಿಸ್: ಕರೊನಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಟೇಬಲ್‌ಗಳನ್ನು ಬ್ಲೀಚಿಂಗ್ ಪೌಡರ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಿ ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ, ವೈನ್ ಸೆಂಟರ್‌ಗಳಿಗೆ ನೋಟಿಸ್ ಅನ್ನು ಪಾಲಿಕೆ ಜಾರಿ ಮಾಡಿದೆ.

    ಇಂದು ಮಸೀದಿ ಮುಖ್ಯಸ್ಥರ ಸಭೆ: ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎಲ್ಲ ಮಸೀದಿಗಳ ಮುಖ್ಯಸ್ಥರ ಸಭೆಯನ್ನು ಮಾ.19 ರಂದು ಬೆಳಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ಕರೆಯಲಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆ ವೇಳೆ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಈ ಸಭೆ ಮಹತ್ವಪಡೆದುಕೊಂಡಿದೆ.

    ಇನ್ಫ್ರಾರೆಡ್ ಥರ್ಮಾ ಮೀಟರ್ ಅಳವಡಿಸಿ: ಕರೊನಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಹೋಟೆಲ್, ರೆಸಾರ್ಟ್, ಸ್ಟೇ-ಹೋಮ್ ಹಾಗೂ ಲಾಡ್ಜ್‌ಗಳ ಮಾಲೀಕರು ವೈರಸ್ ಸೋಂಕು ಪತ್ತೆ ಹಚ್ಚುವ ನಾನ್ ಕಾಂಟ್ಯಾಕ್ಟ್ ಇನ್ಫ್ರಾರೆಡ್ ಥರ್ಮಾಮೀಟರ್ ಸಾಧನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಪಾರಂಪರಿಕ, ಧಾರ್ಮಿಕ ಹಾಗೂ ಪ್ರಾಕೃತಿಕ, ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರಾ ಮಹೋತ್ಸವ, ಧಾರ್ಮಿಕ ಆಚರಣೆಗಳನ್ನು ಹಾಗೂ ಪ್ರವಾಸಿ ತಾಣಗಳ ಚಿತ್ರೀಕರಣ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    100ಕ್ಕೂ ಹೆಚ್ಚು ಜನ ಸೇರುವ ಮಾಲ್‌ಗಳು ಬಂದ್: ನಗರದಲ್ಲಿ ನೂರಕ್ಕೂ ಹೆಚ್ಚು ಜನ ಸೇರುವ ಮಾಲ್‌ಗಳನ್ನು ಬಂದ್ ಮಾಡಲು ಪಾಲಿಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲ್‌ಗಳು, ಕೆಲ ಶೋರೂಂಗಳು ಬಾಗಿಲು ಮುಚ್ಚಿವೆ. ಬೀದಿಬದಿಯ ಎಲ್ಲ ರೀತಿಯ ವ್ಯಾಪಾರಕ್ಕೂ ಕಡಿವಾಣ ಹಾಕಲಾಗಿದೆ. ಫುಡ್ ಸ್ಟ್ರೀಟ್ ಬಂದ್ ಮಾಡಿಸಲಾಗಿದೆ.

    ಲಾಡ್ಜ್‌ಗಳಲ್ಲಿ ವಿದೇಶಿಗರ ವಾಸ್ತವ್ಯಕ್ಕೂ ಬ್ರೇಕ್: ಪ್ರವಾಸಿ ತಾಣಗಳಿಗೆ ಬಂದು ಹೋಗುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರು ಜಿಲ್ಲೆಯ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್ ಹಾಗೂ ಯಾತ್ರಿ ನಿವಾಸ, ಪ್ರವಾಸಿ ಮಂದಿರಗಳಲ್ಲಿ ವಾಸ್ತವ್ಯಕ್ಕೂ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts