More

    ಯುವನಿಧಿಗಾಗಿ 1,526 ಮಂದಿ ನೋಂದಣಿ

    ಕಡೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ರಾಜ್ಯಾದ್ಯಂತ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲೂ ಕಳೆದ 16 ದಿನಗಳಿಂದ ಭರದಿಂದ ಸಾಗಿದ್ದು, ಜ.10ರವರೆಗೆ 1,526 ನಿರುದ್ಯೋಗಿಗಳು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ.

    2023ರಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿ ಇನ್ನೂ ಕೆಲಸಕ್ಕೆ ಸೇರದ, ಸ್ವಯಂ ಉದ್ಯೋಗವಿಲ್ಲದ ಅಥವಾ ಬೇರೆ ಕೋರ್ಸ್‌ಗಳಿಗೆ ದಾಖಲಾಗದ ನಿರುದ್ಯೋಗಿಗಳು ಯೋಜನೆಯ ಸೌಲಭ್ಯ ಪಡೆಯಬಹುದು. ಪದವಿ ಮುಗಿಸಿದವರಿಗೆ ಮಾಸಿಕ ಮೂರು ಸಾವಿರ, ಡಿಪ್ಲೊಮಾ ಮಾಡಿದವರಿಗೆ ಮಾಸಿಕ ಒಂದೂವರೆ ಸಾವಿರ ರೂ. ನೀಡಲಾಗುತ್ತದೆ. ಆದರೆ ಯೋಜನೆಯಡಿ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿಯಾಗಿಲ್ಲ. ನೋಂದಣಿಗೆ ಇನ್ನೂ ಅವಕಾಶ ಇರುವುದರಿಂದ ಹೆಚ್ಚಿನ ಪ್ರಗತಿ ಸಾಧಿಸಬಹುದು.
    ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿವೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರಬರುತ್ತಾರೆ. 2022-23ರಲ್ಲೂ ಪದವಿ ಮತ್ತು ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದ 4,024 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಅನೇಕರಿಗೆ ಯುವನಿಧಿ ಯೋಜನೆ ಸೌಲಭ್ಯ ಪಡೆಯಲು ಅವಕಾಶವಿದೆ.
    ಯುವನಿಧಿ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ನಿರೀಕ್ಷೆಯಷ್ಟು ನೋಂದಣಿಯಾಗದ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ. ಈಗಾಗಲೇ ಜಿಲ್ಲಾಡಳಿತ ಯುವನಿಧಿ ಯೋಜನೆಯ ನೋಂದಣಿ, ಉಪಯೋಗದ ಬಗ್ಗೆ ಮಾಹಿತಿ ನೀಡಲು ಸರಣಿ ಸಭೆಗಳನ್ನು ನಡೆಸಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಯ ಪ್ರಚಾರಕ್ಕೆ ವೇಗ ದೊರಕಬೇಕಿದೆ.
    2022-23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಲಭಿಸದಿದ್ದರೆ ಅಥವಾ ಬೇರ‌್ಯಾವುದೇ ಕೋರ್ಸ್‌ಗೆ ಸೇರದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಹಾಗೆಯೇ ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಹಾಗೂ ಬೇರೆ ರಾಜ್ಯದವರು ಯುವನಿಧಿಗೆ ಅರ್ಹರಾಗಿರುವುದಿಲ್ಲ.
    ಶಿವಮೊಗ್ಗದಲ್ಲಿ ನಾಳೆ ವಿಧ್ಯುಕ್ತ ಚಾಲನೆ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶಿವಮೊಗ್ಗದಲ್ಲಿ ಜ.12ರಂದು ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಯುವನಿಧಿ ಯೋಜನೆಗೆ ಚಾಲನೆ ಸಿಗಲಿದೆ. ಸಾಂಕೇತಿಕವಾಗಿ ನಿರುದ್ಯೋಗಿಗಳಿಗೆ ಮಾಸಿಕ ವೇತನ ವಿತರಿಸಲಾಗುತ್ತಿದೆ. ಪದವಿ ಪಡೆದು ಆರು ತಿಂಗಳವರೆಗೆ ಉದ್ಯೋಗ ಲಭಿಸದಿದ್ದರೆ ಈ ಮಾಸಿಕ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗ ಲಭಿಸದಿದ್ದರೆ 2 ವರ್ಷಗಳ ತನಕ ಈ ಭತ್ಯೆ ಪಡೆಯಬಹುದು. ಒಂದು ವೇಳೆ ಮುಂಚಿತವಾಗಿ ಉದ್ಯೋಗ ಲಭಿಸಿದರೆ ಮಾಸಿಕ ಭತ್ಯೆ ನಿಂತುಹೋಗುತ್ತದೆ.
    ಪ್ರಾಚಾರ್ಯರಿಗೆ ಜವಾಬ್ದಾರಿ: ಯುವನಿಧಿ ಯೋಜನೆಯ ಸೌಲಭ್ಯವನ್ನು ಅರ್ಹ ಅಭ್ಯರ್ಥಿಗಳು ಪಡೆಯುವ ಉದ್ದೇಶದಿಂದ ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯ ಕಾಲೇಜುಗಳ ಪ್ರಾಚಾರ್ಯರ ಸಭೆಗಳನ್ನು ನಡೆಸಿ ವಿದ್ಯಾರ್ಥಿಗಳ ಮಾಹಿತಿ ಪಡೆದುಕೊಂಡಿದೆ. ಆಯಾ ಕಾಲೇಜಿನಲ್ಲಿ 2023ರಲ್ಲಿ ಪದವಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲು ಸೂಚಿಸಲಾಗಿದೆ. ಈ ದಿಸೆಯಲ್ಲಿ ಪ್ರಾಚಾರ್ಯರು ತಮ್ಮ ಕಾಲೇಜಿನ ಅರ್ಹ ಅಭ್ಯರ್ಥಿಗಳ ಪಟ್ಟಿ ಮಾಡಿ ನೋಂದಣಿ ಪ್ರಕ್ರಿಯೆ ಮಾಡಿಸಲು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಜತೆಗೆ ಜ.12ರಂದು ಶಿವಮೊಗದಲ್ಲಿ ನಡೆಯುವ ಯುವನಿಧಿ ಸಮಾವೇಶಕ್ಕೆ ಜಿಲ್ಲೆಯಿಂದ 80 ಬಸ್‌ಗಳಲ್ಲಿ ಸುಮಾರು ನಾಲ್ಕು ಸಾವಿರ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವ್ಯವಸ್ಥೆಯನ್ನು ಪ್ರಾಚಾರ್ಯರು ಮಾಡಿದ್ದಾರೆ.
    ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಮಸ್ಯೆ: ಯುವನಿಧಿ ಸೌಲಭ್ಯ ಪಡೆಯಲು ಸೇವಾಸಿಂಧು, ಗ್ರಾಮ ಒನ್ ಸೇರಿ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಲು ಕೆಲವೊಮ್ಮೆ ಸರ್ವರ್ ಸಮಸ್ಯೆ, ತಾಂತ್ರಿಕ ದೋಷಗಳು ಎದುರಾಗುತ್ತಲೇ ಇವೆ. ಪದವಿ ಮುಗಿಸಿದ ಅಭ್ಯರ್ಥಿ ಅರ್ಜಿ ಸಲ್ಲಿಸುವಾಗ ಪೋರ್ಟಲ್‌ನಲ್ಲಿ ರಿಜಿಸ್ಟರ್ ನಂಬರ್ ಎಂಟ್ರಿ ಮಾಡಿಸುತ್ತಿದ್ದಂತೆ ಅಭ್ಯರ್ಥಿಯ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಆ ಬಳಿಕವೇ ಸ್ವಯಂಚಾಲಿತವಾಗಿ ಅಂಕಪಟ್ಟಿ ಅಪಲೋಡ್ ಆಗುತ್ತದೆ. ಪದವಿ ಶಿಕ್ಷಣ ಮುಗಿಸಿದ ಪದವಿ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಆದರೆ ಕೆಲ ಖಾಸಗಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳು ನೋಂದಣಿ ಮಾಡಿಸುವಾಗ ದಾಖಲೆಗಳು ಸ್ವಯಂಚಾಲಿತವಾಗಿ ಅಪ್‌ಲೋಡ್ ಆಗುತ್ತಿಲ್ಲ. ಆದರೆ ಅಂಕಪಟ್ಟಿಯನ್ನು ಮ್ಯಾನುಯೆಲ್ ಆಗಿ ದಾಖಲಿಸಲು ಅವಕಾಶವಿದೆ. ಆದರೆ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಸಯಬೇಕಾದರೆ ರಿಜಿಸ್ಟರ್ ಸಂಖ್ಯೆ ದಾಖಲಿಸುತ್ತಿದ್ದಂತೆ ದಾಖಲೆಗಳು ಅಪ್‌ಲೋಡ್ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.
    ಜಿಲ್ಲೆಯಲ್ಲಿ ಯುವನಿಧಿ ಯೋಜನೆಗೆ ಈವರೆಗೆ 1526 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಪ್ರಚಾರ ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯ ಕಾಲೇಜು ಪ್ರಾಚಾರ್ಯರೊಂದಿಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆಗಳನ್ನು ನಡೆಸಲಾಗಿದೆ. ಕೆಲವೆಡೆ ಡಿಪ್ಲೊಮಾ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ನೋಂದಣಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎನ್ನುತ್ತಾರೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಸಿ.ಪ್ರಶಾಂತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts