More

    15 ಜಿಲ್ಲೆಗೆ ಡಿಎಲ್‌ಎಎಸ್ ವಿಸ್ತರಣೆ

    ಜಗದೀಶ ಹೊಂಬಳಿ ಬೆಳಗಾವಿ: ವಿವಿಧ ಅಪರಾಧ ಕೃತ್ಯಗಳಲ್ಲಿ ಕಾರಾಗೃಹವಾಸ ಅನುಭವಿಸುತ್ತಿರುವ ಜೈಲುವಾಸಿಗಳು, ತೀವ್ರ ಸ್ವರೂಪದ ಸತ್ರ (ಸೆಷನ್ಸ್) ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ಪರ ಉಚಿತವಾಗಿ ವಕಾಲತು ವಹಿಸುವ ವಿಶಿಷ್ಟ ಪರಿಕಲ್ಪನೆಯ ‘ಡಿಫೆನ್ಸ್ ಲೀಗಲ್ ಏಯ್ಡ ಸಿಸ್ಟಮ್’ ಬೆಳಗಾವಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದು, ರಾಜ್ಯದ 15 ಜಿಲ್ಲೆಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸುವುದಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮುಂದಾಗಿದೆ.

    ‘ಡಿಫೆನ್ಸ್ ಲೀಗಲ್ ಏಯ್ಡ ಸಿಸ್ಟಮ್’ ಅನುಷ್ಠಾನಕ್ಕೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿತ್ತು. ಬೆಳಗಾವಿಯಲ್ಲಿ ಈವರೆಗೆ 249 ಅರ್ಜಿಗಳು ಬಂದಿದ್ದು, 92 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಗತಿ ಪರಿಗಣಿಸಿ ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ, ಶಿವಮೊಗ್ಗ, ಧಾರವಾಡ, ವಿಜಯಪುರ, ಬೀದರ, ಕೊಪ್ಪಳ ಸೇರಿ ರಾಜ್ಯದ 15 ಜಿಲ್ಲೆಗಳಿಗೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ವಕೀಲರ ನೇಮಕದ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

    ಡಿಎಲ್‌ಎಎಸ್ ವಿಶೇಷವೇನು? ಅನಕ್ಷರಸ್ಥರು, ದೌರ್ಜನ್ಯಕ್ಕೊಳಗಾದವರು, ಬಡ ಕೈದಿಗಳು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಪರವಾಗಿ ವಾದಿಸುವುದಕ್ಕೆ ಅನುಭವಿ ವಕೀಲರಿಲ್ಲ ಎಂದು ಕೊರಗುತ್ತಾರೆ. ಈ ಸಮಸ್ಯೆ ನೀಗಿಸಲೆಂದೇ ಕಾನೂನು ಸೇವಾ ಪ್ರಾಧಿಕಾರವು ‘ಡಿಫೆನ್ಸ್ ಲೀಗಲ್ ಏಯ್ಡ್ ಸಿಸ್ಟಮ್’ ಜಾರಿಗೆ ತಂದಿದೆ. ಕೇಂದ್ರ ಕಾನೂನು ಸೇವಾ ಪ್ರಾಧಿಕಾರದಿಂದ ದೇಶದ 32 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಪ್ರತಿ ರಾಜ್ಯದ ಒಂದೊಂದು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ರಾಜ್ಯದ ವಿವಿಧೆಡೆಯ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಗಲ್ಲು ಶಿಕ್ಷೆ ವಿಧಿಸಲು ಇರುವ ವ್ಯವಸ್ಥೆ ಹೊಂದಿದ ಏಕೈಕ ಕಾರಾಗೃಹ ಇದಾಗಿದೆ. ಈ ಎಲ್ಲ ಮಾನದಂಡಗಳ ಆಧಾರದಲ್ಲಿ ಬೆಳಗಾವಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿತ್ತು. ಈ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಾರಂಭವಾಗಿರುವುದರಿಂದ ರಾಜ್ಯದ 15 ಜಿಲ್ಲೆಗಳಿಗೆ ಇದನ್ನು ವಿಸ್ತರಣೆ ಮಾಡಲಾಗಿದೆ.

    92 ಜೈಲುವಾಸಿಗಳು ಕಾರಾಗೃಹ ಮುಕ್ತ: ಬೆಳಗಾವಿ ಜಿಲ್ಲೆಯಲ್ಲಿ ಕೈದಿಗಳಿಂದ 249 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ತೀವ್ರ ಸ್ವರೂಪದ ಸತ್ರ (ಸೆಷನ್ಸ್) ಪ್ರಕರಣಗಳ 110 ಅರ್ಜಿಗಳ ಪೈಕಿ 13 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 54 ಜಾಮೀನು ಅರ್ಜಿಗಳ ಪೈಕಿ 50, ಕೆಳ ನ್ಯಾಯಾಲಯ ಆದೇಶದ ವಿರುದ್ಧ ಮೇಲ್ಮನಿಯ 15 ಅರ್ಜಿಗಳಲ್ಲಿ 10, ಪ್ರಥಮ ದರ್ಜೆ ನ್ಯಾಯಾಲಯಗಳ 48 ಅರ್ಜಿಗಳಲ್ಲಿ 07, ಬಾಲಾಪರಾಧಿಗಳ ಪ್ರಕರಣಗಳ 28 ಅರ್ಜಿಯಲ್ಲಿ 10 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಪುನರ್‌ಪರಿಶೀಲನೆ 1 ಅರ್ಜಿ ಮತ್ತು ಆರೋಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ 1 ಅರ್ಜಿಯನ್ನು ಇತ್ಯರ್ಥ ಪಡಿಸಲಾಗಿದೆ. ಇನ್ನೂ 159 ಪ್ರಕರಣಗಳು ಬಾಕಿ ಇದ್ದು, ವಿಚಾರಣೆ ಹಂತದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts