More

    ದ.ಕ ಜಿಲ್ಲೆಯಲ್ಲಿ 533 ಮಂದಿ ಸೋಂಕುಮುಕ್ತ

    ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಸೋಮವಾರ 533 ಮಂದಿ ಕರೊನಾಮುಕ್ತರಾಗಿ ಮನೆಗೆ ತೆರಳಿದ್ದಾರೆ.
    ಇದುವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರಲ್ಲಿ ದೊಡ್ಡ ಸಂಖ್ಯೆ ಇದು. ಸೋಮವಾರದ ವರದಿಯಂತೆ 146 ಮಂದಿಗೆ ಸೋಂಕು ತಗಲಿದ್ದರೆ 8 ಮಂದಿ ಸಾವನ್ನಪ್ಪಿದ್ದಾರೆ.
    ಐಎಲ್‌ಐ ಹೊಂದಿದ್ದ 81 ಮಂದಿ, ತೀವ್ರ ಉಸಿರಾಟ ತೊಂದರೆಯ 16, ಪ್ರಾಥಮಿಕ ಸಂಪರ್ಕದಿಂದ 15 ಮಂದಿಗೆ, ವಿದೇಶದಿಂದ ಹಿಂದಿರುಗಿದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ವರದಿಯಂತೆ 97 ಮಂದಿಗೆ ರೋಗ ಲಕ್ಷಣಗಳಿವೆ. 30 ಮಂದಿಯ ಸೋಂಕಿನ ಮೂಲ ತಿಳಿದಿಲ್ಲ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 7353 ತಲಪಿದ್ದು ಸಕ್ರಿಯ ಪ್ರಕರಣಗಳು 2910. ಡಿಸ್‌ಚಾರ್ಜ್ ಆದವರ ಸಂಖ್ಯೆ 4215. ಒಟ್ಟು ಸಾವಿನ ಸಂಖ್ಯೆ 228 ತಲಪಿದೆ. ಉಡುಪಿ ಜಿಲ್ಲೆಯಲ್ಲಿ 90 ಮಂದಿ ಸೋಂಕಿತರಾಗಿದ್ದು, ಹಲವು ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದ ಮೂವರು ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ.

    ಕಾಸರಗೋಡಿನ 146 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 146 ಮಂದಿ ಸೇರಿದಂತೆ ಕೇರಳದಲ್ಲಿ ಸೋಮವಾರ 1,184 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಕಾಸರಗೋಡು ನೀಲೇಶ್ವರ ನಿವಾಸಿ ಸೇರಿ ಏಳು ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರೋಗಬಾಧಿತರಲ್ಲಿ 106 ಮಂದಿ ವಿದೇಶದಿಂದ ಹಾಗೂ 73 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು.

    ದ.ಕ.ದಲ್ಲಿ 25 ಸಾವಿರ ರ‌್ಯಾಪಿಡ್ ಟೆಸ್ಟ್ ಕಿಟ್ ವಿತರಣೆ
    ಕೋವಿಡ್ ತ್ವರಿತ ಪರೀಕ್ಷೆಗಾಗಿ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ 25,800 ರ‌್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
    ವೆನ್ಲಾಕ್‌ನಲ್ಲಿ ಉಚಿತ ಕೋವಿಡ್-19 ಟೆಸ್ಟ್ ನಡೆಸಲಾಗುತ್ತದೆ. ಜಿಲ್ಲೆಯಲ್ಲಿನ 78 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, 6 ಸಮುದಾಯ ಆಸ್ಪತ್ರೆ ಸೇರಿದಂತೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಈಗಾಗಲೇ ರ‌್ಯಾಪಿಡ್ ಟೆಸ್ಟ್ ಕಿಟ್‌ನಿಂದ 8000ಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 600 ಜನರಿಗೆ ಪಾಸಿಟಿವ್ ಬಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜ್ ಸೇರಿ ಒಟ್ಟು 23 ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 9 ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಎಲ್ಲ ಆಸ್ಪತ್ರೆಗಳಿಗೆ ಪ್ರಸ್ತುತ ಚಿಕಿತ್ಸೆ ವೆಚ್ಚವನ್ನು ಜನರೇ ಭರಿಸಬೇಕು ಎಂದವರು ತಿಳಿಸಿದರು.

    ಇಂದು ವಿಟ್ಲ ಅರಮನೆ ಸೀಲ್‌ಡೌನ್
    ವಿಟ್ಲ: ವಿಟ್ಲ ಡೊಂಬ ಹೆಗಡೆ ಅರಸು ಮನೆತನಕ್ಕೆ ಸೇರಿದ ವಿಟ್ಲ ಅರಮನೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಆ.11ರಂದು ಅಧಿಕಾರಿಗಳು ಅರಮನೆಯನ್ನು ಸೀಲ್‌ಡೌನ್ ಮಾಡಲಿದ್ದಾರೆ. ಅರಮನೆಯಲ್ಲಿ 50ಕ್ಕೂ ಅಧಿಕ ಮಂದಿ ವಾಸವಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts