More

    ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

    ನಿಪ್ಪಾಣಿ: ಉತ್ತರಪ್ರದೇಶದ ಫಿರೋಜಾಬಾದ್ ಸಮೀಪದ ತೊಂಡಲಿ ರೃಲ್ವೆ ನಿಲ್ದಾಣದ ಬಳಿ ಗುರುವಾರ ಆಕಸ್ಮಿಕವಾಗಿ ಸಾವಿಗೀಡಾಗಿದ್ದ ನಿಪ್ಪಾಣಿಯ ಸಾಖರವಾಡಿ ನಗರದ ಯೋಧ ಕಮಾಂಡರ್ ರಾಜೇಂದ್ರ ಪಾಂಡುರಂಗ ಕುಂಬಾರ (45) ಅಂತ್ಯಕ್ರಿಯೆ ಶನಿವಾರ ರಾತ್ರಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

    ರಾಜೇಂದ್ರ ಅವರ ಪಾರ್ಥಿವ ಶರೀರವನ್ನು ಪುಣೆ ಮೂಲಕ ಶನಿವಾರ ತಡರಾತ್ರಿ ನಿಪ್ಪಾಣಿಗೆ ತರಲಾಯಿತು. ಬಳಿಕ ಬಸವಾನ ನಗರದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

    ರಾಜೇಂದ್ರ ಕುಂಬಾರ ಅವರು ಸುಮಾರು 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸುಬೇದಾರ ಆಗಿ ಪ್ರಯಾಗರಾಜ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ವಾಯು ವಿಹಾರಕ್ಕೆಂದು ತೆರಳಿದಾಗ ಉತ್ತರ ಪ್ರದೇಶದ ಫಿರೋಜಾಬಾದ್ ಸಮೀಪದ ತೊಂಡಲಿ ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ಮೃತಪಟ್ಟರು.

    ಫಿರೋಜಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಲ್ಲಿಂದ ಪುಣೆ ಮೂಲಕ ನಗರಕ್ಕೆ ತರಲಾಗಿತ್ತು. ಅವರ ಪಾರ್ಥಿವ ಶರೀರ ನಗರ ಪ್ರವೇಶಿಸುತ್ತಿದ್ದಂತೆಯೇ ರಾಜೇಂದ್ರ ಅಮರ ರಹೇ, ಭಾರತ ಮಾತಾ ಕಿ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಮೃತರಿಗೆ ಪತ್ನಿ, ಇಬ್ಬರು ಸಹೋದರರು ಇದ್ದರು.

    ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ತಹಸೀಲ್ದಾರ್ ಪ್ರವೀಣ ಕಾರಂಡೆ, ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ನಿಪ್ಪಾಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ ಕದಂ, ಕಮಾಂಡರ್ ಪ್ರತಾಪಸಿಂಹ, ಪ್ರಕಾಶ ಕೋಪಾರ್ಡೆ, ಸುನೀಲ ರಾವುತ, ರೋಟರಿ ಕ್ಲಬ್ ಸ್ಥಳೀಯ ಘಟಕದ ಅಧ್ಯಕ್ಷ ದಿಲೀಪ ಪಠಾಡೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts