More

    ಉಡುಪಿಯಲ್ಲಿ 13 ಪಾಸಿಟಿವ್, 45 ಮಂದಿ ಗುಣಮುಖ

    ಉಡುಪಿ: ಜಿಲ್ಲೆಯಲ್ಲಿ ಶನಿವಾರ 13 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿದ್ದ 12, ತೆಲಂಗಾಣದಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಕೋವಿಡ್-19 ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪ್ರಾಥಮಿಕ ಸಂಪರ್ಕ ವಿವರ ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    9 ಪುರುಷರು, 2 ಮಹಿಳೆಯರು, 2 ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಸದ್ಯ ಉಡುಪಿ 53, ಕುಂದಾಪುರ 60, ಕಾರ್ಕಳದ 81 ಮಂದಿ ಸೇರಿದಂತೆ ಒಟ್ಟು 194 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. 177ರಲ್ಲಿ 50 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 127 ಪ್ರಕರಣ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ ಶನಿವಾರ 118 ಮಂದಿಯ ವರದಿ ನೆಗೆಟಿವ್ ಬಂದಿದೆ. ಹಾಟ್‌ಸ್ಪಾಟ್‌ನಿಂದ 32 ಮಂದಿಯದು ಮಾತ್ರ ವರದಿ ಸಂಗ್ರಹಿಸಲಾಗಿದೆ. ಇನ್ನೂ 5920 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    45 ಮಂದಿ ಮನೆಗೆ: ದಿನೇದಿನೆ ಕರೊನಾ ಪ್ರಕರಣ ಏರಿಕೆ ನಡುವೆಯೇ, ಶನಿವಾರ ಬಂದ ಶುಭಸುದ್ದಿ ಜಿಲ್ಲೆಯ ಜನರ ಆತಂಕವನ್ನು ಕೊಂಚ ದೂರ ಮಾಡಿದೆ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಆಗಿದ್ದ 18 ಮಕ್ಕಳು ಸಹಿತ 45 ಮಂದಿ ಗುಣಮುಖರಾಗಿ ಶನಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಮಹಾರಾಷ್ಟ್ರ, ದುಬೈ, ತೆಲಂಗಾಣದಿಂದ ಬಂದಿದ್ದ ಇವರೆಲ್ಲ ಸರ್ಕಾರಿ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿತ್ತು. ಸೋಂಕಿತರಿಗೆ ಡಾ.ಟಿಎಂಎಪೈ ಕೋವಿಡ್-19 ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದು ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

    ಪುಣೆಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದೆವು. ನನ್ನ ಆರು ವರ್ಷದ ಮಗುವಿಗೆ ಪಾಸಿಟಿವ್ ಬಂದಿದ್ದು, ನನಗೆ ನೆಗೆಟಿವ್ ಬಂದಿತ್ತು. ಇದೀಗ ಗುಣಮುಖನಾಗಿದ್ದಾನೆ. ತುಂಬ ಆತಂಕಪಟ್ಟಿದ್ದೆ, ಇದೀಗ ಖುಷಿಯಿಂದ ಮನೆಗೆ ತೆರಳುತ್ತಿದ್ದೇವೆ ಎಂದು ವ್ಯಕ್ತಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಮುಂಬೈನಿಂದ ಬಂದಿದ್ದ ತಾಯಿ ಮತ್ತು ಮಗು ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಚಿಕಿತ್ಸೆ ನೀಡಿದರು. ಕ್ವಾರಂಟೈನ್‌ನಲ್ಲಿಯೂ ವ್ಯವಸ್ಥೆ ಚೆನ್ನಾಗಿತ್ತು. ಇದೀಗ ಇಬ್ಬರ ವರದಿಯೂ ನೆಗೆಟಿವ್ ಬಂದಿದ್ದು, ಸಂತಸದಿಂದ ಮನೆಗೆ ತೆರಳುತ್ತಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

    45 ಮಂದಿಯಲ್ಲಿ ಒಂದು ವರ್ಷದ ಮಗುವಿನಿಂದ 12 ವರ್ಷದವರೆಗೆ ವಿವಿಧ ವಯಸ್ಸಿನ 18 ಮಕ್ಕಳು ಇದ್ದರು. ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಉಡುಗೊರೆ, ಚಾಕೊಲೇಟ್ಸ್ ನೀಡಿದರು. ಉಡುಗೊರೆಯಲ್ಲಿ ಪೈಂಟಿಂಗ್ ಕಿಟ್, ಆಟಿಕೆ ಸಾಮಗ್ರಿಗಳು ಇದ್ದವು. ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಆಸ್ಪತ್ರೆಯಲ್ಲಿ 56 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 18 ಮಕ್ಕಳು ಸಹಿತ 45 ಮಂದಿ ಬಿಡುಗಡೆಯಾಗಿರುವುದು ಖುಷಿ ತಂದಿದೆ ಎಂದರು.

    ಪೊಲೀಸರು ಗುಣಮುಖ: ಕರೊನಾ ಸೋಂಕಿತ ನಾಲ್ವರು ಪೊಲೀಸರು ಗುಣಮುಖರಾಗಿದ್ದಾರೆ. ಶನಿವಾರ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಿಂದ ಅವರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಮೇ 24ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅಜೆಕಾರು ಪಿಎಸ್‌ಐ, ಕಾರ್ಕಳ ಗ್ರಾಮಾಂತರ ಠಾಣೆ, ಬ್ರಹ್ಮಾವರ ಪೊಲೀಸ್ ಠಾಣೆ ಹಾಗೂ ಮೀಸಲು ಪಡೆ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಇಲಾಖೆ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರೊನಾ ಅಂಟಿಕೊಂಡಿದೆ. ಕರೊನಾ ಪಾಸಿಟಿವ್ ಬಂದವರಿಗೆ ಉತ್ತಮ ಚಿಕಿತ್ಸೆ ನೀಡಿದ್ದರಿಂದ ಶೀಘ್ರ ಗುಣಮುಖರಾಗಿದ್ದಾರೆ ಎಂದರು. ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಕುಮಾರಚಂದ್ರ, ನಿಗದಿತ ಆಸ್ಪತ್ರೆ ನೋಡಲ್ ವೈದ್ಯಾಧಿಕಾರಿ ಡಾ. ಶಶಿಕಿರಣ್ ಉಪಸ್ಥಿತರಿದ್ದರು.

    ಗುಜ್ಜಾಡಿ ಏಳು ಮನೆ ಸೀಲ್‌ಡೌನ್: ಕ್ವಾರಂಟೈನ್ ಮುಗಿಸಿದ ಬಳಿಕ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮನೆಗೆ ಬಂದ ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಗುಜ್ಜಾಡಿ ಗ್ರಾಮದ ಎರಡು ಪ್ರದೇಶಗಳನ್ನು ಶನಿವಾರ ಸೀಲ್‌ಡೌನ್ ಮಾಡಲಾಗಿದೆ. ಬೆಣ್ಗೆರೆ ಮತ್ತು ಮೇಲಟ್ಟಿ ಎಂಬಲ್ಲಿಗೆ ಮುಂಬೈನಿಂದ ಆಗಮಿಸಿದ ಇಬ್ಬರು ಪುರುಷರ ವರದಿ ಪಾಸಿಟಿವ್ ಬಂದಿದ್ದು, ಈಗ ಬೆಣ್ಗೆರೆಯ 100 ಮೀಟರ್‌ನಲ್ಲಿ ನಾಲ್ಕು ಮನೆ ಮತ್ತು ಮೇಲಟ್ಟಿ ಪರಿಸರದ 100 ಮೀಟರ್ ವ್ಯಾಪ್ತಿಯ ಮೂರು ಮನೆಗಳನ್ನು ಸೀಲ್ ಡೌನ್ ಮಾಡಿ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಇವರಿಬ್ಬರು ಹಟ್ಟಿಯಂಗಡಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು ವರದಿ ಲಭ್ಯವಾಗುವ ಮುನ್ನವೇ ಮನೆಗೆ ಬಂದಿದ್ದು, ಮೇ 29ರಂದು ಇವರಿಬ್ಬರಿಗೆ ಕರೊನಾ ದೃಢಪಟ್ಟಿದೆ.

    ಕೋಡಿಯಲ್ಲಿ ಸೀಲ್‌ಡೌನ್: ಕುಂದಾಪುರ ಕೋಡಿಯಲ್ಲಿ ಸೋಂಕು ದೃಢ ಪಟ್ಟ ವ್ಯಕ್ತಿಯ ಮನೆಯ ಸುತ್ತ ಮುತ್ತ ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಸ್ರೂರು, ನೇರಳಕಟ್ಟೆ, ಹಳ್ನಾಡು ಭಾಗದಲ್ಲಿನ ವ್ಯಕ್ತಿಗಳಲ್ಲಿ ಸೋಂಕು ದೃಢ ಪಟ್ಟಿರುವುದರಿಂದ ಅವರ ಮನೆಯ 200 ಮೀಟರ್ ಪರಿಸರ ಸೀಲ್‌ಡೌನ್ ಮಾಡಲಾಗಿದೆ. ಅಮಾಸೆಬೈಲು ಠಾಣೆ ವ್ಯಾಪ್ತಿಯ ವಂಡಾರು ಗ್ರಾಮದ ಮಾರ್ವಿ, ಕೋಟ ಠಾಣೆ ವ್ಯಾಪ್ತಿಯ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100 ಮೀಟರ್ ವ್ಯಾಪ್ತಿಯ 12 ಮನೆಯ ಸುತ್ತ ಮುತ್ತಲು ಸೀಲ್‌ಡೌನ್ ಮಾಡಲಾಗಿದೆ.

    ಕೋಟ ಬಾರಿಕೆರೆ 10 ಮನೆ ಸೀಲ್‌ಡೌನ್: ಕೋಟ: ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಬಾರಿಕೆರೆಯ ಓರ್ವ ಮಹಿಳೆಗೆ ಕರೊನಾ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಮಹಿಳೆ 15 ದಿನ ಹಿಂದೆ ಮುಂಬೈಯಿಂದ ಆಗಮಿಸಿದ್ದು, ಹಟ್ಟಿಯಂಗಡಿಯಲ್ಲಿ ಸರ್ಕಾರಿ ಕ್ವಾರಂಟೈನ್ ಮುಗಿಸಿ ಗುರುವಾರ ಸ್ವಗೃಹ ಬಾರಿಕೆರೆಗೆ ಆಗಮಿಸಿದ್ದರು. ಶುಕ್ರವಾರ ಗಂಟಲ ದ್ರವ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೂಲಕ ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಆರ್‌ಐ ರಾಜು ಮೊದಲಾದವರು ಭೇಟಿ ನೀಡಿ ಸ್ಥಳ ಪರೀಕ್ಷೆ ನಡೆಸಿ ಸುತ್ತಮುತ್ತಲಿನ 10 ಮನೆಗಳನ್ನು ಸೀಲ್‌ಡೌನ್ ಮಾಡಿದರು. ಮನೆಗಳಿಗೆ ಆಹಾರ ಸಾಮಗ್ರಿ ಒದಗಿಸಲು ತಹಸೀಲ್ದಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts