More

    13.228ರೈತರ ಬಡ್ಡಿ ಮನ್ನಾ

    ಶಿವಮೊಗ್ಗ: ರಾಜ್ಯ ಸರ್ಕಾರ ಘೊಷಣೆ ಮಾಡಿರುವ ಬಡ್ಡಿ ಮನ್ನಾ ಯೋಜನೆಯಲ್ಲಿ ಜಿಲ್ಲೆಯ ಪಿಕಾರ್ಡ್, ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲ ಪಡೆದಿರುವ 13,228 ರೈತರಿಗೆ ಪ್ರಯೋಜನವಾಗಲಿದೆ. ಮನ್ನಾ ಆಗಲಿರುವ ಬಡ್ಡಿಯ ಮೊತ್ತ 31.60 ಕೋಟಿ ರೂ.ಗಳಷ್ಟಿದೆ. ದೀರ್ಘಾವಧಿ ಹಾಗೂ ಮಧ್ಯಮಾವಧಿ ಸುಸ್ತಿ ಸಾಲದ ಮೇಲಿನ 2010 ಜ.31ರವರೆಗಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

    ಜ.31ಕ್ಕೆ ಸುಸ್ತಿಯಾಗಿರುವ ಕೃಷಿ ಸಾಲಗಳ ಅಸಲು ಪಾವತಿಸಿದರೆ ಬಡ್ಡಿ ಸಂಪೂರ್ಣ ಮನ್ನಾ ಮಾಡುವುದಾಗಿ ಸರ್ಕಾರ ಘೊಷಿಸಿದೆ. ಸುಸ್ತಿದಾರ ರೈತರು ಸರ್ಕಾರದ ಬಡ್ಡಿ ಮನ್ನಾ ಪ್ರಯೋಜನೆ ಪಡೆಯಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಜಿಲ್ಲೆಯಲ್ಲಿ 165 ಪ್ರಾಥಮಿಕ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್​ನ 8 ಶಾಖೆಗಳಿವೆ. ಇವುಗಳಲ್ಲಿ 728 ಸದಸ್ಯರು ಸುಸ್ತಿದಾರರಾಗಿದ್ದಾರೆ. ಪಿಕಾರ್ಡ್ ಬ್ಯಾಂಕ್​ನಲ್ಲಿ 12,500 ಸದಸ್ಯರು ದೀರ್ಘಾವಧಿ ಸಾಲ ಪಡೆದಿದ್ದು ಸುಸ್ತಿದಾರರಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಜನವರಿ ಅಂತ್ಯಕ್ಕೆ 63,008 ರೈತರಿಗೆ 330 ಕೋಟಿ ರೂ. ಹೊಸ ಸಾಲ ನೀಡಿದ್ದೇವೆ. ಹೊಸ ರೈತರಿಗೆ ಸಾಲ ನೀಡಲು ಹೆಚ್ಚು ಆದ್ಯತೆ ನೀಡಲಾಗುವುದು. ಮಾರ್ಚ್ ನಂತರ ಸಾಲದ ಬೇಡಿಕೆ ಹೆಚ್ಚುತ್ತದೆ ಎಂದು ತಿಳಿಸಿದರು.

    ಎಂಡಿ ನೇಮಕದಲ್ಲಿ ಕಾಯ್ದೆ ಉಲ್ಲಂಘಿಸಿಲ್ಲ: ನಿವೃತ್ತರಾದ ಬಳಿಕವೂ ರಾಜಣ್ಣ ರೆಡ್ಡಿ ಅವರನ್ನು ಮತ್ತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಮರು ನೇಮಕ ಮಾಡಿರುವುದರಲ್ಲಿ ಸಹಕಾರ ಕಾಯ್ದೆ ಉಲ್ಲಂಘನೆಯಾಗಿಲ್ಲ. ನಬಾರ್ಡ್ ನಿಯಮದ ಪ್ರಕಾರವೇ ಈ ಆಯ್ಕೆ ನಡೆದಿದೆ ಎಂದು ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು. ಜಿಪಂ ಸಭೆಯಲ್ಲಿ ನಿವೃತ್ತ ಅಧಿಕಾರಿ ಮರು ನೇಮಕದ ಬಗ್ಗೆ ಏಕೆ ಚರ್ಚೆಯಾಯಿತು ಎಂಬುದು ನನಗೆ ಗೊತ್ತಿಲ್ಲ. ಬಹುಶಃ ಮಾಹಿತಿ ಕೊರತೆಯಿಂದ ಹೀಗಾಗಿರಬಹುದು. ಸಹಕಾರ ಇಲಾಖೆ ಅಧಿಕಾರಿಗಳು ಕೂಡ ತಪ್ಪು ಮಾಹಿತಿ ರವಾನಿಸಿರುವ ಸಾಧ್ಯತೆಯಿದೆ ಎಂದರು.

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ, ನಿರ್ದೇಶಕರಾದ ಕೆ.ಪಿ.ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಬಿ.ಡಿ.ಭೂಕಾಂತ್, ಎಸ್.ಪಿ.ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts