More

    120 ಕೆ.ಜಿ. ಗಾಂಜಾ ವಶ, ಓರ್ವನ ಬಂಧನ

    ಬೆಳಗಾವಿ: ಬೆಳಗಾವಿ ಜಿಲ್ಲಾ ಅಪರಾಧ ತನಿಖಾ ತಂಡ (ಡಿಸಿಐಬಿ)ವು ಶನಿವಾರ ದಾಳಿ ನಡೆಸಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಓರ್ವನನ್ನು ಬಂಧಿಸಿದ್ದು, 24 ಲಕ್ಷ ರೂ.ಮೌಲ್ಯದ 120 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಮಹಾರಾಷ್ಟ್ರದ ಮಿರಜ್ ಮಾಳಿಗಲ್ಲಿಯ ಅಶ್ಫಾಕ್ ಮೈನುದ್ದೀನ್ ಮುಲ್ಲಾ (38) ಎಂಬಾತನನ್ನು ಬಂಧಿಸಿದ್ದಾರೆ. ಈತನ ಬಳಿಯಿದ್ದ ತಲಾ 2 ಕೆ.ಜಿ. ತೂಕದ 60 ಗಾಂಜಾ ಪ್ಯಾಕೆಟ್, ಒಂದು ಕಾರ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

    ಸೆ. 22ರಂದು ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ಮಿರಜ್‌ನ ವಾಸಿಂ ಶೇಖ್ ಎಂಬಾತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾಗ ಅಶ್ಫಾಕ್‌ನ ಗಾಂಜಾ ದಂಧೆಯ ಕುರಿತು ಮಾಹಿತಿ ನೀಡಿದ್ದನು. ಆತನ ಮಾಹಿತಿ ಮೇರೆಗೆ ಪ್ರಮುಖ ಆರೋಪಿಯ ಬಂಧನಕ್ಕೆ ಖೆಡ್ಡಾ ತೋಡಿದ್ದ ಜಿಲ್ಲಾ ಪೊಲೀಸರು, ಮಿರಜ್ ತಾಲೂಕಿನ ಮೈಶಾಲ್ ಗ್ರಾಮದ ಪಂಪ್‌ಹೌಸ್ ಹತ್ತಿರ ಅಶ್ಫಾಕ್‌ನನ್ನು ಬಂಧಿಸಿದ್ದಾರೆ. ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್‌ನಿಂದ ಗಾಂಜಾ ಖರೀದಿಸಿ ಮಹಾರಾಷ್ಟ್ರದ ಸಾಂಗ್ಲಿ, ಮಿರಜ್, ಬೆಳಗಾವಿ ಮತ್ತು ಧಾರವಾಡಕ್ಕೆ ಪೂರೈಸುತ್ತಿದ್ದೆ ಎಂದು ವಿಚಾರಣೆ ವೇಳೆ ಅಶ್ಫಾಕ್ ತಿಳಿಸಿದ್ದಾಗಿ ತಿಳಿದು ಬಂದಿದೆ. ಈತನಿಗೆ ಗಾಂಜಾ ಪೂರೈಸುತ್ತಿದ್ದ ತೆಲಂಗಾಣದ ಇಬ್ಬರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಡಿಸಿಐಬಿ ಪಿಐ ನಿಂಗನಗೌಡ ಪಾಟೀಲ, ಎಎಸ್‌ಐ ಡಿ.ಕೆ. ಪಾಟೀಲ, ಸಿಬ್ಬಂದಿ ವಿ.ವಿ. ಗಾಯಕವಾಡ, ಟಿ.ಕೆ. ಕೊಳಚಿ, ಅರ್ಜುನ ಮಸರಗುಪ್ಪಿ, ಎಲ್.ಟಿ. ಪಠಾಣ, ಜಯರಾಮ ಹಮ್ಮಣ್ಣವರ, ಎಸ್.ಎಂ. ಮಂಗಣ್ಣವರ, ಎಂ.ಐ. ಪಠಾಣ ದಾಳಿ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts