More

    12 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

    ಕುಮಟಾ: ತಾಲೂಕಿನ ಸಂತೇಗುಳಿ ಪಂಚಾಯಿತಿಯ ಬಂಗಣೆ, ಮೊರ್ಸೆ ಗ್ರಾಮಗಳ ಮೂಲಕ 14 ಕೀ.ಮೀ. ಉದ್ದದ ಸಂತೇಗುಳಿ- ನೀಲ್ಕುಂದ ರಸ್ತೆಯನ್ನು ಅಂದಾಜು 12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ಕುಮಟಾದಿಂದ ನಿಲ್ಕುಂದ ಮೂಲಕ ಶಿರಸಿ ಹಾಗೂ ಸಿದ್ದಾಪುರಕ್ಕೆ ಹೋಗುವ ಬ್ರಿಟಿಷರ ಕಾಲದ ಅರಣ್ಯ ಮಾರ್ಗದ ರಸ್ತೆ ಅಭಿವೃದ್ಧಿಯ ಪೂರಕ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

    ಸಂತೆಗುಳಿಯಿಂದ ಬಂಗಣೆ, ಮೊರ್ಸೆ ಬಳಿಕ 15 ಕೀ.ಮೀ. ದಟ್ಟ ಕಾಡಿನಲ್ಲಿ ಸಾಗಿದರೆ ಸಿದ್ದಾಪುರ ತಾಲೂಕಿನ ನಿಲ್ಕುಂದ ಗ್ರಾಮ ಪಂಚಾಯಿತಿ ಇದೆ. 15.5 ಕಿ.ಮೀ. ರಸ್ತೆ ನಮ್ಮ ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯಿತಿಗೆ ಸೇರಿದ್ದರೆ 4.5 ಕಿ.ಮೀ. ರಸ್ತೆ ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯಿತಿಗೆ ಸೇರಿದ್ದು ಒಟ್ಟು 21 ಕೀ.ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಬೇಕಿದೆ. ನಿಲ್ಕುಂದದಿಂದ ಶಿರಸಿ ಮತ್ತು ಸಿದ್ದಾಪುರ ನಿಕಟವಿದ್ದು ಎರಡೂ ತಾಲೂಕಿಗೆ ಹೋಗಲು ಉತ್ತಮ ರಸ್ತೆ ಇದೆ. ಈಗ ನಾವು 14 ಕೀ.ಮೀ. ಗಳಷ್ಟು ದಟ್ಟ ಅರಣ್ಯದೊಳಗಿನ ಹಳೆಯ ಪಾಳುಬಿದ್ದ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ರಸ್ತೆ ಕುಮಟಾದಿಂದ ಸಿದ್ದಾಪುರ ಹಾಗೂ ಶಿರಸಿಗೆ ಇರುವ ರಾಜ್ಯ ಹೆದ್ದಾರಿಗಳಿಗೆ ಪರ್ಯಾಯ ಮತ್ತು ನಿಕಟ ರಸ್ತೆಯೂ ಆಗಲಿದೆ. ಪಿಡಬ್ಲು್ಯಡಿ ಇಲಾಖೆ ಇಲ್ಲಿ ರಸ್ತೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಆರಂಭಿಸಿದೆ ಎಂದರು.

    ಬಂಗಣೆಯ ಕೇಶವ ನಾಯ್ಕ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಅವರು 2018ರಲ್ಲಿ ರಸ್ತೆಯನ್ನು ವೀಕ್ಷಿಸಿ ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಶಾಸಕರು ಮತ್ತು ನಮ್ಮ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಗಜಾನನ ಪೈ ಅವರ ಸಹಯೋಗ ಹಾಗೂ ಕಾಳಜಿಗೆ ಕೃತಜ್ಞರಾಗಿದ್ದೇವೆ ಎಂದರು. ಪಿಡಬ್ಲ್ಯುಡಿ ಇಂಜಿನಿಯರ್ ಸೋಮನಾಥ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಜಾನನ ಪೈ, ಉದ್ಯಮಿ ಮದನ ನಾಯಕ, ಖಾದರಸಾಬ್, ಈಶ್ವರ ಮರಾಠಿ, ಮಹಾದೇವ ನಾಯ್ಕ, ವಿನಾಯಕ ಭಟ್ಟ ಇತರರು ಇದ್ದರು.

    ಭರವಸೆ ನೀಡಿದ್ದ ಶಾಸಕ
    ವಿಜಯವಾಣಿಯಲ್ಲಿ ‘ಐತಿಹಾಸಿಕ ರಸ್ತೆಗೆ ಬೇಕು ಕಾಯಕಲ್ಪ’ ಶೀರ್ಷಿಕೆಯಡಿ 2020ರ ಡಿಸೆಂಬರ್ 4 ರಂದು ಸಂತೇಗುಳಿ- ನೀಲ್ಕುಂದ ರಸ್ತೆ ಅಭಿವೃದ್ಧಿಯ ಅಗತ್ಯತೆ ಕುರಿತು ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ರಸ್ತೆಯ ಹಿನ್ನೆಲೆ, ಮಹತ್ವ ಹಾಗೂ ಸಾರ್ವಜನಿಕರ ಹೋರಾಟದ ಸಮಗ್ರ ವಿವರ ನೀಡಲಾಗಿತ್ತು. ಅಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ ಐತಿಹಾಸಿಕ ರಸ್ತೆಯ ಕಾಯಕಲ್ಪಕ್ಕೆ ಗಟ್ಟಿ ಹೆಜ್ಜೆಯಿಡುವ ಮಾಹಿತಿ ನೀಡಿದ್ದರು. ಅದರಂತೆ ರಸ್ತೆ ಅಭಿವೃದ್ಧಿ ಹಾಗೂ ಬೆಣ್ಣೆ ಹೊಳೆಗೆ ಹೊಸ ಸೇತುವೆ ನಿರ್ವಣದ ಕ್ರಿಯಾ ಯೋಜನೆಯೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಸದ್ಯ ಯಂತ್ರ ಬಳಸಿ ಸಂತೇಗುಳಿ ನಿಲ್ಕುಂದ ಹಳೆಯ ರಸ್ತೆಯನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡುವ ಕಾರ್ಯ ಪ್ರಗತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts