More

    11ರಿಂದ 1ಕ್ಕೆ ಇಳಿದ ಸೋಂಕಿತರ ಸಂಖ್ಯೆ

    ಸುಭಾಸ ಧೂಪದಹೊಂಡ ಕಾರವಾರ

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೊನಾ ಏರಿಕೆ ಕ್ರಮದಲ್ಲಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11 ರಿಂದ 1 ಕ್ಕೆ ಇಳಿದಿದೆ.

    ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿ ಗುಣಮುಖರಾಗಿದ್ದು, ಕರೊನಾ ಮುಕ್ತರಾದ ಬಗ್ಗೆ ವರದಿ ಬಂದಿದೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಭಟ್ಕಳದ ಕ್ವಾರಂಟೈನ್ ಕೇಂದ್ರ ತಲುಪಲಿದ್ದಾರೆ.

    ದುಬೈನಿಂದ ಆಗಮಿಸಿದ ಗರ್ಭಿಣಿಯ ಪತಿ ಕೂಡ ಕರೊನಾ ರೋಗಿಯಾಗಿದ್ದು, ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಅವರೂ ಗುಣಮುಖರಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಈಗಾಗಲೇ ಇರುವ ರೋಗಿಗಳ ಸಂಪರ್ಕಕ್ಕೆ ಬಂದ ಎಲ್ಲರ ಮಾದರಿಗಳನ್ನು ಕಳಿಸಿ ಪರಿಶೀಲಿಸಿದ್ದು, ಎಲ್ಲರದ್ದೂ ನೆಗೆಟಿವ್ ಬಂದಿದೆ. ಇದರಿಂದ ಹೊರಗಿನಿಂದ ಯಾವುದೇ ಪ್ರಕರಣಗಳು ಬಾರದೇ ಇದ್ದಲ್ಲಿ ಉತ್ತರ ಕನ್ನಡ ಕರೊನಾ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆರೋಗ್ಯ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

    ಹೇಗೆ ಸಾಧ್ಯವಾಯಿತು…?

    ರಾಜ್ಯದ ಇತರ ಕೆಲ ಜಿಲ್ಲೆಗಳಿಗಿಂತ ಮುಂಚೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಕಾಣಿಸಿಕೊಂಡಿದ್ದರು. ಮೊದಲ ಎರಡೇ ವಾರದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿತ್ತು. ಭಟ್ಕಳ ಎಂಬ ಸಣ್ಣ ಪಟ್ಟಣದಲ್ಲಿ ಹೊರ ದೇಶದಿಂದ 400ಕ್ಕೂ ಅಧಿಕ ಜನರು ಒಟ್ಟಾರೆ ಹೊರ ಊರಿನಿಂದ ಬಂದ 2171 ಜನರಿದ್ದರು. ಇದರಿಂದ ಇಡೀ ಜಿಲ್ಲೆ ಕರೊನಾ ಭಯದಿಂದ ತತ್ತರಿಸುವಂತಾಗಿತ್ತು.

    ಕೋಮು ಸೂಕ್ಷ್ಮ ಪ್ರದೇಶವೂ ಆಗಿದ್ದರಿಂದ ಅಲ್ಲಿ ಕರೊನಾ ನಿಯಂತ್ರಣ ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಆದರೆ, ಹಿಂದೆ ಭಟ್ಕಳದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಅತ್ಯಂತ ಚಾಣಾಕ್ಷತನದಿಂದ ಕೈಗೊಂಡ ಕಾರ್ಯಗಳು ಫಲ ನೀಡಿದವು. ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ಶಿವ ಪ್ರಕಾಶ ದೇವರಾಜು ಸಾಥ್ ನೀಡಿ ಕರೊನಾ ಸರಪಣಿಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಕೈಗೊಂಡ ಕಾರ್ಯಗಳು

    ದೇಶದಲ್ಲಿಯೇ ಮೊದಲ ಬಾರಿಗೆ ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೊಷಣೆ.

    ದೇಶದಲ್ಲಿಯೇ ಮೊದಲ ಬಾರಿಗೆ ಸೋಂಕಿತ ಕರೊನಾ ರೋಗಿಗಳಿಗೆ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಮನೆಗೆ ದಿನಸಿ, ತರಕಾರಿ ವಿತರಣೆ ವ್ಯವಸ್ಥೆ.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಜನರ ಆರೋಗ್ಯ ಸಮೀಕ್ಷೆ .

    ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಹೋಂ ಕ್ವಾರಂಟೈನ್ ಬದಲು ಸರ್ಕಾರಿ ಕ್ವಾರಂಟೈನ್​ಗೆ ಒಳಪಡಿಸಿದ್ದು.

    ನಾವು ಕರೊನಾ ಗೆದ್ದಿದ್ದೇವೆ ಎಂದು ಮೈ ಮರೆಯುವ ಪ್ರಶ್ನೆಯೇ ಇಲ್ಲ. ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಆಗಮಿಸುವ ಪ್ರತಿಯೊಬ್ಬರ ಮಾಹಿತಿ ನಮಗೆ ಇರುವಂತೆ ಮಾಡಲಾಗಿದೆ. ಲಾಕ್​ಡೌನ್ ನಿಯಮಾವಳಿ ಸಡಿಲವಾದರೂ ಸಾಮಾಜಿಕ ಅಂತರ, ಮನೆ, ಮನೆ ಆರೋಗ್ಯ ಸಮೀಕ್ಷೆ ಮುಂತಾದ ಕ್ರಮಗಳು ಮುಂದುವರಿಯಲಿವೆ.

    ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ

    ಕರೊನಾ ಗೆದ್ದ ಗರ್ಭಿಣಿ : ಕರೊನಾ ಗೆದ್ದ ಭಟ್ಕಳ ಮೂಲದ ಗರ್ಭಿಣಿಗೆ ಹೂವು, ಫಲ, ಸಿಹಿ, ತಾಂಬೂಲ ನೀಡಿ ಉಡುಪಿ ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

    ಮಾತನಾಡಿದ ಆಕೆ ಇಲ್ಲಿಗೆ ಬರುವ ಮೊದಲ ಭಯವಾಗಿತ್ತು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗಿದೆ. ಮನೆಯಂತೆಯೇ ಭಾಸವಾಗುತ್ತಿತ್ತು ಎಂದರು.

    ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಶ್ರಮಿಸಿದೆ. ತಾಯಿ-ಮಗು ಗುಣಮುಖರಾಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದರು. ಎಸ್​ಪಿ ವಿಷ್ಣುವರ್ಧನ, ಜಿಪಂ ಸಿಇಒ ಪ್ರೀತಿ ಗೆಹ್ಲೊಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts