More

    11ತಿಂಗಳ ಮೇಲೆ ಥೇಟರ್​ಗಳಿಗೆ ಕಾಲಿಟ್ಟ ಖುಷಿ

    ಹುಬ್ಬಳ್ಳಿ: ಚಿತ್ರ ಮಂದಿರಗಳಲ್ಲಿ ಶೇ. 100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಮೊದಲ ದಿನವಾದ ಶುಕ್ರವಾರ ನಗರದ ಸುಧಾ ಹಾಗೂ ಅಪ್ಸರಾ ಥೇಟರ್​ಗಳಲ್ಲಿ ಪ್ರೇಕ್ಷಕರ ದಂಡು ಕಂಡುಬಂದಿತು.

    ಸುಮಾರು 11 ತಿಂಗಳ ನಂತರ ಚಿತ್ರ ಮಂದಿರಗಳಿಗೆ ಕಾಲಿಟ್ಟ ಖುಷಿಯಲ್ಲಿ ಅನೇಕ ಪ್ರೇಕ್ಷಕರು ಪರಸ್ಪರ ಸಿಹಿ ತಿನ್ನಿಸಿ, ಸಂತಸಪಟ್ಟರು. ಚಿತ್ರ ಮಂದಿರದ ನೌಕರರಿಗೂ ಸಿಹಿ ತಿನ್ನಿಸಿದರು. ಕೆಲ ಪ್ರೇಕ್ಷಕರು ಚಿತ್ರ ಮಂದಿರದ ಎದುರು ಕೇಕ್ ಕತ್ತರಿಸಿದರು.

    ಸುಧಾದಲ್ಲಿ ಇನ್ಸ್ಪೆಕ್ಟರ್ ವಿಕ್ರಂ ಹಾಗೂ ಅಪ್ಸರಾದಲ್ಲಿ ಶ್ಯಾಡೊ ಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಮುಗಿಬಿದ್ದಿದ್ದರು. ಮಧ್ಯಾಹ್ನ 12 ಗಂಟೆಯ ಮೊದಲ ಪ್ರದರ್ಶನದಲ್ಲಿ ಎರಡೂ ಚಿತ್ರ ಮಂದಿರಗಳ ಆಸನಗಳು ಪ್ರೇಕ್ಷಕರಿಂದ ಭರ್ತಿ ಆಗಿದ್ದವು. ಮೊದಲ ಪ್ರದರ್ಶನಕ್ಕೆ ಟಿಕೆಟ್ ಪಡೆಯುವುದಕ್ಕಾಗಿ ಬೆಳಗ್ಗೆ 10.30 ರಿಂದಲೇ ಪ್ರೇಕ್ಷಕರು ಚಿತ್ರ ಮಂದಿರಗಳ ಎದುರು ನಿಂತುಕೊಂಡಿದ್ದರು.

    ಥೇಟರ್ ಒಳಗೆ ಪ್ರವೇಶಿಸುವ ಪ್ರತಿಯೊಬ್ಬ ಪ್ರೇಕ್ಷಕರ ದೇಹದ ತಾಪಮಾನ ಪರೀಕ್ಷಿಸಿದ ಚಿತ್ರ ಮಂದಿರದ ಉದ್ಯೋಗಿಗಳು, ಪ್ರೇಕ್ಷಕರ ಕೈಗೆ ಸ್ಯಾನಿಟೈಸರ್ ಹಾಕಿದರು. ಮಾಸ್ಕ್ ಅಳವಡಿಸಿಕೊಂಡವರಿಗೆ ಮಾತ್ರ ಚಿತ್ರ ಮಂದಿರದ ಒಳಗೆ ಪ್ರವೇಶ ನೀಡಲಾಗುತ್ತಿತ್ತು.

    ಥೇಟರ್​ಗಳಲ್ಲಿ ಶೇ. 100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ ಮೊದಲ ದಿನವೇ ಎರಡೂ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳು ಬಿಡುಗಡೆಗೊಂಡಿರುವುದು ಕನ್ನಡ ಚಿತ್ರಗಳ ಪ್ರೇಮಿಗಳಿಗೆ ಮತ್ತಷ್ಟು ಸಂತಸ ಮೂಡಿಸಿತ್ತು.

    ನಗರದ ಇನ್ನುಳಿದ ಬಹುತೇಕ ಚಿತ್ರ ಮಂದಿರಗಳು ಶುಕ್ರವಾರವೂ ಯಾವುದೇ ಚಲನಚಿತ್ರ ಪ್ರದರ್ಶಿಸಲಿಲ್ಲ.

    ಒಂದರಲ್ಲಿ ಮಾತ್ರ ಪ್ರದರ್ಶನ

    ಧಾರವಾಡ: ನಗರದ 4 ಚಿತ್ರಮಂದಿರಗಳ ಪೈಕಿ ಒಂದರಲ್ಲಿ್ಲ ಮಾತ್ರ ಚಿತ್ರ ಪ್ರದರ್ಶನ ಕಂಡಿತು. ನಗರದ ಸಂಗಮ ಚಿತ್ರಮಂದಿರದಲ್ಲಿ ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್​ಸ್ಪೆಕ್ಟರ್ ವಿಕ್ರಂ ಚಿತ್ರ ಶುಕ್ರವಾರ ತೆರೆಕಂಡಿತು. ಚಿತ್ರ ವೀಕ್ಷಣೆಗೆ ಕಾತರದಿಂದ ಕಾದು ಕುಳಿತಿದ್ದ ನಟ ಪ್ರಜ್ವಲ್​ರ ಅಭಿಮಾನಿಗಳು ಚಿತ್ರದ ಪೋಸ್ಟರ್​ಗೆ ಕ್ಷೀರಾಭಿಷೇಕ ಮಾಡಿದರು.

    ಮತ್ತೊಂದೆಡೆ ನಗರದ ವಿಜಯಾ, ಪದ್ಮಾ, ಶ್ರೀನಿವಾಸ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿಲ್ಲ. ಆರ್.ಕೆ. ಓದುಗೌಡರ ಅಧ್ಯಕ್ಷತೆಯ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳವು ಚಲನಚಿತ್ರ ಪ್ರದರ್ಶನಕ್ಕೆ ಶೇಕಡಾವಾರು (ಪರ್ಸೆಂಟೇಜ್) ವ್ಯವಸ್ಥೆ ಜಾರಿ ಮಾಡಬೇಕು. ಬಾಡಿಗೆ ಆಧಾರದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂಬ ಬೇಡಿಕೆ ಇಟ್ಟಿದೆ. ಆದರೆ, ಈ ಬೇಡಿಕೆಯನ್ನು ನಿರ್ವಪಕರು ಒಪ್ಪದ ಕಾರಣ ಚಿತ್ರಪ್ರದರ್ಶನ ಮಾಡುತ್ತಿಲ್ಲ. ಇದರಿಂದಾಗಿ ಚಲನಚಿತ್ರ ಪ್ರೇಕ್ಷಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts