More

    ರಾಷ್ಟ್ರಧ್ವಜದ ಕರಡು ವಿನ್ಯಾಸಕ್ಕೆ 100 ವರ್ಷ

    ಹೈದರಾಬಾದ್: ಭಾರತದ ರಾಷ್ಟ್ರಧ್ವಜದ ಮೊದಲ ಕರಡು ವಿನ್ಯಾಸಕ್ಕೆ 100 ವರ್ಷ. 1921ರ ಮಾರ್ಚ್ 31ರಂದು ಆಂಧ್ರಪ್ರದೇಶದ ಬೆಜವಾಡ (ವಿಜಯವಾಡ)ದಲ್ಲಿ ನಡೆದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಎಐಸಿಸಿ) ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಈ ಕರಡು ವಿನ್ಯಾಸವನ್ನು ಗಾಂಧೀಜಿ ಯವರಿಗೆ ಹಸ್ತಾಂತರಿಸಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ತಿರುವು ಕೊಟ್ಟ ಅಧಿವೇಶನ ಇದು. ಈ ಕರಡು ರಾಷ್ಟ್ರಧ್ವಜವನ್ನೇ ಕೆಲವೊಂದು ತಿದ್ದುಪಡಿಯೊಂದಿಗೆ 1947ರಲ್ಲಿ ಸ್ವಾತಂತ್ರ್ಯ ಪಡೆಯುವುದಕ್ಕೆ ಕೆಲ ಸಮಯ ಮೊದಲು ಅಂಗೀಕರಿಸಲಾಗಿತ್ತು.

    ಪರಿಷ್ಕೃತ ವಿನ್ಯಾಸ: ಪಿಂಗಳಿ ವೆಂಕಯ್ಯ ಸಲ್ಲಿಸಿದ್ದ ಕರಡು ಧ್ವಜದಲ್ಲಿ ಕೆಂಪುಬಣ್ಣ ತೆಗೆದು ಕೇಸರಿ ಮತ್ತು ಬಿಳಿಬಣ್ಣ ಸೇರಿಸಿ ಪರಿಷ್ಕೃತ ಹೊಸ ಧ್ವಜವನ್ನು ಕಾಂಗ್ರೆಸ್ ರೂಪಿಸಿತು. ಬಳಿಕ ಚರಕದ ಜಾಗದಲ್ಲಿ ಅಶೋಕಚಕ್ರ ಸ್ಥಾನ ಪಡೆದಕೊಂಡಿತು. ಹೀಗೆ ರಾಷ್ಟ್ರಧ್ವಜ ತಿರಂಗಾ ರೂಪು ಪಡೆದುಕೊಂಡಿತು.

    ಗಾಂಧೀಜಿ ಹೇಳಿಕೊಂಡಿರುವುದು ಹೀಗೆ

    1921ರ ಏಪ್ರಿಲ್ 13ರಂದು ‘ಯಂಗ್ ಇಂಡಿಯಾ’ ಸಂಪಾದಕೀಯದಲ್ಲಿ ಗಾಂಧೀಜಿ ಈ ಧ್ವಜದ ಕರಡು ವಿನ್ಯಾಸದ ಬಗ್ಗೆ ವಿವರಿಸಿದ್ದಾರೆ- ‘1921 ಮಾರ್ಚ್ 31ರಂದು ಪಿಂಗಳಿ ವೆಂಕಯ್ಯ ನನ್ನನ್ನು ಭೇಟಿಯಾಗಿದ್ದ ವೇಳೆ ರಾಷ್ಟ್ರಧ್ವಜದ ಕರಡು ವಿನ್ಯಾಸ ರಚಿಸುವಂತೆ ಸೂಚಿಸಿದ್ದೆ. ಅವರೆಷ್ಟು ಉತ್ಸಾಹದಿಂದ ಇದ್ದರು ಎಂದರೆ ಕೇವಲ ಮೂರೇ ಗಂಟೆ ಅವಧಿಯಲ್ಲಿ ಕರಡು ವಿನ್ಯಾಸ ರಚಿಸಿ ನನಗೆ ಒಪ್ಪಿಸಿದರು. ಅದನ್ನು ಕಾಂಗ್ರೆಸ್ ರ್ವಂಗ್ ಕಮಿಟಿ ಎದುರು ಪ್ರಸ್ತುತ ಪಡಿಸುವಲ್ಲಿ ನಾನೇ ವಿಳಂಬ ಮಾಡಿದೆ’.

    ರಾಷ್ಟ್ರಧ್ವಜ ರೂಪುಗೊಳ್ಳುವ ಮುಂಚೆ

    ಇದಕ್ಕೂ ಮೊದಲು 1906 ಆಗಸ್ಟ್ 7ರಂದು ಕೋಲ್ಕತದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಿದ ಧ್ವಜವೇ ಭಾರತದ ಚೊಚ್ಚಲ ರಾಷ್ಟ್ರಧ್ವಜ ಎಂಬ ವಾದವೂ ಇದೆ. ಈ ಧ್ವಜ ಕೆಂಪು, ಹಳದಿ ಮತ್ತು ಹಸಿರುಗೆರೆಗಳನ್ನು ಒಳಗೊಂಡಿದ್ದು, ಮಧ್ಯದಲ್ಲಿ ವಂದೇ ಮಾತರಂ ಎಂಬ ಬರಹ ಹೊಂದಿತ್ತು. ಸೂರ್ಯ ಮತ್ತು ಅರ್ಧಚಂದ್ರ, ನಕ್ಷತ್ರಗಳನ್ನು ಧ್ವಜ ಹೊಂದಿತ್ತು. ಇದನ್ನು ಸಚ್ಚೀಂದ್ರ ಪ್ರಸಾದ್ ಬೋಸ್, ಹೇಮಚಂದ್ರ ಕನುಂಗೋ ವಿನ್ಯಾಸಗೊಳಿಸಿದರೆಂಬ ಮಾಹಿತಿ ಇದೆ. 1907ರಲ್ಲಿ ಮೇಡಂ ಕಾಮಾ ಮತ್ತು ಅವರ ಕ್ರಾಂತಿಕಾರಿಗಳ ಗುಂಪು ಜರ್ಮನಿಯಲ್ಲಿ ಮತ್ತೊಂದು ಧ್ವಜವನ್ನು ಹಾರಿಸಿದ್ದರು. ವಿದೇಶಿ ನೆಲದಲ್ಲಿ ಹಾರಾಡಿದ ಮೊದಲ ಭಾರತದ ಧ್ವಜ ಅದು ಎಂಬ ಉಲ್ಲೇಖವಿದೆ. 1917ರಲ್ಲಿ ಅನ್ನಿಬೆಸೆಂಟ್ ಮತ್ತು ಲೋಕಮಾನ್ಯ ತಿಲಕರು ಹೋಮ್ ರೂಲ್ ಚಳವಳಿ ನಿಮಿತ್ತ ಅಂಗೀಕರಿಸಿದ ಹೊಸ ಧ್ವಜವೂ ರಾಷ್ಟ್ರಧ್ವಜಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts