More

    ಸರ್ಕಾರಿ ನೌಕರರಿಗೆ ಜೋಗದಲ್ಲಿ 100 ಮನೆ: ಸಚಿವ ಜಾರ್ಜ್

    ಕಾರ್ಗಲ್: ಈಗಾಗಲೇ 185 ಕೋಟಿ ರೂ. ವೆಚ್ಚದಲ್ಲಿ ಜೋಗ ಜಲಪಾತದ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಜಗದ್ವಿಖ್ಯಾತಿಯನ್ನು ಪಡೆದಿರುವ ಪ್ರವಾಸಿ ತಾಣದ ಅಭಿವೃದ್ಧಿಗೆ ಯಾವುದೇ ಕೊರತೆ ಉಂಟಾಗದಂತೆ ಆದಷ್ಟು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

    ಜೋಗ ಜಲಪಾತಕ್ಕೆ ಭಾನುವಾರ ಬೆಳಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
    ಗೋಪಾಲಕೃಷ್ಣ ಬೇಳೂರು ಅತ್ಯಂತ ಕಾಳಜಿ ವಹಿಸಿರುವ ಹಿನ್ನೆಲೆಯಲ್ಲಿ ಶರಾವತಿ ಕಣಿವೆಯ ಜೋಗ-ಕಾರ್ಗಲ್ ಪ್ರದೇಶದಲ್ಲಿರುವ ಕೆಪಿಸಿ ಒಡೆತನಕ್ಕೆ ಸೇರಿದ, ನಿಗಮಕ್ಕೆ ಬಳಕೆಯಿಲ್ಲದ 100 ಮನೆಗಳನ್ನು ದುರಸ್ತಿಗೊಳಿಸಿ ಸ್ಥಳೀಯ ವಿವಿಧ ಇಲಾಖೆಗಳ ಅಡಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸರ್ಕಾರಿ ಉದ್ಯೋಗಿಗಳಿಗೆ ವಸತಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಮಾಸಿಕ 1 ಸಾವಿರ ರೂ.ನಂತೆ ನಿಗದಿ ಮಾಡಿ ಅತ್ಯಂತ ಕಡಿಮೆ ಬಾಡಿಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
    1886ರಲ್ಲಿ ನಿರ್ಮಾಣವಾದ ಜಲಪಾತದ ಕೇಂದ್ರ ಪ್ರದೇಶದಲ್ಲಿರುವ ಇಲ್ಲಿನ ಕೆಪಿಸಿಯ ಮೈಸೂರು ಬಂಗಲೆಯು ಪುರಾತತ್ವ ಕಟ್ಟಡವಾಗಿದೆ. ಇದನ್ನು ಜೋಗದ ಪ್ರಸಕ್ತ ಅಭಿವೃದ್ಧಿ ಕಾರ್ಯಗಳಿಗೆ ಅನುಗುಣವಾಗಿ ಅತ್ಯುತ್ತಮವಾಗಿ ನವೀಕರಿಸಿ ಪ್ರವಾಸಿಯ ಸ್ಥಳಕ್ಕೆ ಮೆರುಗು ತರುವ ನಿಟ್ಟಿನಲ್ಲಿ ಮ್ಯೂಸಿಯಂ ಮಾಡಲಾಗುವುದು ಎಂದು ವಿವರಿಸಿದರು.
    ಶರಾವತಿ ಭೂಗರ್ಭ ಪಂಪ್ಡ್ ಸ್ಟೋರೇಜ್ ಯೋಜನೆಯು 8,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಟೆಂಡರ್ ಆಗಿದ್ದು ಮುಂದಿನ ಹಂತದ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ ಎಂದರು.
    ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾರ್ಗಲ್ ಪ್ಯಾಡಿ ಪೀಲ್ಡ್‌ನಲ್ಲಿರುವ ಕೆಪಿಸಿ ನಿಗಮಕ್ಕೆ ನಿರುಪಯುಕ್ತವಾದ ಸುಮಾರು ಐದು ಎಕರೆ ಪ್ರದೇಶವನ್ನು ಸ್ಥಳೀಯ ಪಪಂಗೆ ವಹಿಸುವಂತೆ ಸಚಿವರನ್ನು ಕೇಳಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯೋಜನೆ ರೂಪಿಸಿ ಇಲ್ಲಿ ಒಂದೇ ಸೂರಿನಡಿಯಲ್ಲಿ ಪಪಂ ಸ್ವಂತ ಕಟ್ಟಡ, ನೂತನ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ, ಪೌರ ಕಾರ್ಮಿಕರು ಹಾಗೂ ನೌಕರರಿಗೆ ವಸತಿಗೃಹ, ಟ್ಯಾಕ್ಸಿ ಮತ್ತು ಆಟೋ ನಿಲ್ದಾಣ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
    ಕೆಪಿಟಿಸಿಎಲ್ ಎಂಡಿ ಪಂಕಜ್‌ಕುಮಾರ್ ಪಾಂಡೆ, ಕೆಪಿಸಿ ಟೆಕ್ನಿಕಲ್ ಡೈರೆಕ್ಟರ್ ಸಿ.ಎಂ.ದಿವಾಕರ್, ಮುಖ್ಯ ಅಭಿಯಂತ ಮೋಹನ್, ಅಧೀಕ್ಷಕ ಅಭಿಯಂತ ಅಬ್ದುಲ್ ಮಜೀದ್, ಮೆಸ್ಕಾಂ ಮುಖ್ಯ ಅಭಿಯಂತ ಬಸಪ್ಪ, ಅಧೀಕ್ಷಕ ಅಭಿಯಂತ ಜಿ.ಶಶಿಧರ, ಎಇಇ ಪ್ರವೀಣ್, ಕೆಪಿಟಿಸಿಎಲ್ ಇಂಜಿನಿಯರ್ ಜಫ್ರುಲ್ಲಾ ಬೇಗ್, ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್‌ಕುಮಾರ್, ಎಸ್‌ಎನ್‌ಸಿ ಮ್ಯಾನೇಜರ್ ಸಂದೀಪ್, ಜೆಎಂಎ ವ್ಯವಸ್ಥಾಪಕ ಶ್ರೀನಿವಾಸ್, ಪ್ರಮುಖರಾದ ಎಸ್.ಎಲ್.ರಾಜ್‌ಕುಮಾರ್, ಎಚ್.ಎಸ್.ಸಾದಿಕ್, ಪ್ರಕಾಶ್ ಲ್ಯಾವಿಗೆರೆ, ತಾರಾಮೂರ್ತಿ, ಗಣಪತಿ ಮಂಡಗಳಲೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts