More

    100 ಕೋಟಿ ರೂ. ಬಿಡುಗಡೆಗೊಳಿಸಿ

    ಬೈಲಹೊಂಗಲ, ಬೆಳಗಾವಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳದಲ್ಲಿ ರಾಯಣ್ಣನ ಹೆಸರಿನ ಅಂತಾರಾಷ್ಟ್ರೀಯ ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಗೆ ಒಳಪಡಿಸಿ, ಇನ್ನುಳಿದ ಸುಮಾರು 100 ಕೋಟಿ ರೂ. ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.

    ತಾಲೂಕಿನ ಸಂಗೊಳ್ಳಿ ರಾಯಣ್ಣ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದಿಂದ ನಿರ್ಮಾಣ ಹಂತದಲ್ಲಿರುವ ಸೈನಿಕ ಶಾಲೆಯ ಅಭಿವೃದ್ಧಿ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ ಮಾತನಾಡಿದ ಅವರು, ಸೈನಿಕ ಶಾಲೆಯ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಬಾಕಿ ಅನುದಾನ ಕೂಡಲೇ ಬಿಡುಗಡೆ ಮಾಡಿ ಸೈನಿಕ ಶಾಲೆಯನ್ನು ಉದ್ಘಾಟನೆ ಮಾಡಬೇಕೆಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೈನಿಕ ಶಾಲೆ ನಾವು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅದು ನಮ್ಮ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡು ಚಾಲನೆ ಪಡೆದಿದ್ದು, ನಾಡಿನ ಜನತೆಗೆ ತಿಳಿದ ವಿಷಯವಾಗಿದೆ ಎಂದರು.

    ಸೈನಿಕ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ದೊರಕಲು ಅದನ್ನು ಕೇಂದ್ರ ರಕ್ಷಣಾ ಇಲಾಖೆಯ ಅಧೀನಕ್ಕೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಕ್ಷಣಾ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಯಣ್ಣನ ಹೆಸರಿನ ಬೃಹತ್ ಸೈನಿಕ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಜೀವನ ಚರಿತ್ರೆ, ಹೋರಾಟ, ಅಡಳಿತ ಬಿಂಬಿಸುವ ರಾಕ್ ಗಾರ್ಡನ್ ನಿರ್ಮಿಸಲಾಗಿದ್ದು ಹೆಮ್ಮೆ ಎನಿಸಿದೆ ಎಂದರು.

    ಈ ಸ್ಥಳ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದೆ. ಸರ್ಕಾರ ಇನ್ನೂ ಅವಶ್ಯಕ ಕಾಮಗಾರಿ ನಡೆಸಬೇಕು. ರಾಯಣ್ಣನ ಗಲ್ಲಿಗೇರಿಸಿದ ನಂದಗಡ, ಸಂಗೊಳ್ಳಿ ಹಾಗೂ ಕಿತ್ತೂರು ಅಭಿವೃದ್ಧಿಪಡಿಸಬೇಕೆಂದರು.

    ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಂ.ಬಿ. ಪಾಟೀಲ, ಡಿ.ಬಿ. ಇನಾಂದಾರ, ಶಾಸಕ ಮಹಾಂತೇಶ ಕೌಜಲಗಿ, ಮುಖಂಡ ಬಾಬಾಸಾಹೇಬ ಪಾಟೀಲ, ಬಸವರಾಜ
    ಕೌಜಲಗಿ, ಕಿರಣ ಸಾಧುನವರ, ಮಾಜಿ ಶಾಸಕ ಅಶೋಕ ಪಟ್ಟಣ, ರಾಯಣ್ಣ ಪ್ರಾಧಿಕಾರ ಆಯುಕ್ತ ಮಲ್ಲೇಶಪ್ಪ ಹೋರಪೇಟ ಇತರರು ಇದ್ದರು. ಇತಿಹಾಸ ಸಂಶೋಧಕ ಬಸವರಾಜ ಕಮತ ರಾಕ್ ಗಾರ್ಡನ್ ಕುರಿತು ಸಿದ್ದರಾಮಯ್ಯ ಅವರಿಗೆ ವಿವರಿಸಿದರು.

    ರಾಯಣ್ಣ ಸೈನಿಕ ಶಾಲೆಯನ್ನು ರಕ್ಷಣಾ ಇಲಾಖೆಗೆ ಸಂಪೂರ್ಣವಾಗಿ ಒಪ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುವಂತೆ ಸಂಗೊಳ್ಳಿ ಗ್ರಾಪಂ ವತಿಯಿಂದ ಗ್ರಾಪಂ ಅಧ್ಯಕ್ಷ ಇಮಾಮಹುಸೇನ್ ಖುದ್ದನವರ ಹಾಗೂ ಸದಸ್ಯರು ಮನವಿ ಸಲ್ಲಿಸಿದರು.

    ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಬೈಲಹೊಂಗಲ ನಾಡಿನ ಜನತೆಯ ಒತ್ತಾಸೆಯಾಗಿದ್ದು, ಈಡೇರುತ್ತಿಲ್ಲ ಎಂದು ಪತ್ರಕರ್ತರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಚನ್ನಮ್ಮಾಜಿ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ದು, ಈ ನಾಡಿನ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಲು ಪ್ರಾಶಸ್ತ್ಯ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts