More

    10.4 ಲಕ್ಷ ಮಂದಿ ಬೂಸ್ಟರ್ ಡೋಸ್‌ಗೆ ಅರ್ಹರು

     

    10.4 ಲಕ್ಷ ಮಂದಿ ಬೂಸ್ಟರ್ ಡೋಸ್‌ಗೆ ಅರ್ಹರುಚಿತ್ರದುರ್ಗ: ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚಾಗದಂತೆ ತಡೆಯುವ ಕುರಿತು ಮುಂಜಾಗ್ರತೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸಂಶಯಾಸ್ಪದ ಪ್ರಕರಣ ಕಂಡು ಬಂದಲ್ಲಿ ಕೂಡಲೇ ಮಾದರಿ ಸಂಗ್ರಹಿಸಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಬೇಕು. ಚಿಕಿತ್ಸೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಲಸಿಕೆ ನೀಡುವ ಪ್ರಕ್ರಿಯೆಗೆ ಹೆಚ್ಚು ಆದ್ಯತೆ ನೀಡಬೇಕು.

    ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ಮೂಲಕ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಸೂಚನೆ ನೀಡಿದ ಪರಿ ಇದು.

    ಚೀನಾ ಸೇರಿ ವಿದೇಶಗಳಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿವೆ. ಆದರೆ, ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಆದರೂ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಎಚ್ಚರಿಕೆ ವಹಿಸಬೇಕಾದ್ದು, ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಯಾರನ್ನೂ ಆತಂಕಕ್ಕೆ ಒಳಪಡಿಸದೆಯೇ ತಜ್ಞರ ಸಮಿತಿ ಸಲಹೆಯಂತೆ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.

    ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು, ಜನಸಂದಣಿ ಸ್ಥಳಗಳಿಂದ ದೂರವಿರಬೇಕು, ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ಬಳಕೆಗೆ ಮುಂದಾಗಬೇಕು. ಇದನ್ನು ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿಯೂ ಪಾಲಿಸಬೇಕು ಎಂದು ಸಲಹೆ ನೀಡಿದರು.

    ಲಸಿಕೆ ಪಡೆದಿದ್ದರಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಅಪಾಯ ಸಂಭವಿಸಿಲ್ಲ. ಆದ್ದರಿಂದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಎರಡನೆ ಡೋಸ್ ಪಡೆದು 6 ತಿಂಗಳು ಪೂರ್ಣಗೊಂಡವರು ಬೂಸ್ಟರ್ ಡೋಸ್ ಅನ್ನು ಮುನ್ನೆಚ್ಚರಿಕೆಯಾಗಿ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ 10.4 ಲಕ್ಷ ಮಂದಿ ಇದಕ್ಕೆ ಅರ್ಹರಾಗಿದ್ದು, ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಕೋರಿದರು.

    2023ರ ಜನವರಿ ಅಂತ್ಯದೊಳಗೆ ಜಿಲ್ಲೆಯ ಕನಿಷ್ಠ 5ಲಕ್ಷ ಜನರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಮೂಲಕ ಶೇ. 50ರಷ್ಟು ಪ್ರಗತಿ ಸಾಧಿಸಲು ಗುರಿ ನಿಗದಿಪಡಿಸಲಾಗಿದ್ದು, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿ, ಸಿಎಚ್‌ಸಿ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಷರತ್ತುಗಳು: ಹೊಸ ವರ್ಷಾಚರಣೆಗೆ ಷರತ್ತು ವಿಧಿಸಲಾಗಿದ್ದು, ಈ ವೇಳೆ ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಅಂತರ ಕಡ್ಡಾಯ. ಡಿ. 31 ಹಾಗೂ ಜ. 1ರ ಮಧ್ಯರಾತ್ರಿ 1ರೊಳಗೆ ಸಂಭ್ರಮ ಮುಕ್ತಾಯವಾಗಬೇಕು. ಎಲ್ಲಾ ಹೋಟೆಲ್, ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕಬ್ಲ್‌ಗಳು ನಿಗದಿತ ಸಮಯದೊಳಗೆ ಮುಚ್ಚಬೇಕು. ದೊಡ್ಡ ಪ್ರಮಾಣದ ಗುಂಪು ಸೇರುವ ಸಭೆಯನ್ನು ಮಧ್ಯಾಹ್ನ, ಹೊರಾಂಗಣ ಪ್ರದೇಶದಲ್ಲಿ ಹಮ್ಮಿಕೊಳ್ಳಬೇಕು. ಅವಕಾಶಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಸಿನಿಮಾ ಮಂದಿರಗಳಿಗೂ ಇದು ಅನ್ವಯವಾಗಲಿದೆ. ನಿಯಮ ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಪರೀಕ್ಷೆ ಹೆಚ್ಚಿಸಲು ಸೂಚನೆ:

    ಪಾಸಿಟಿವ್ ಕಂಡುಬಂದ ಎಲ್ಲಾ ಪ್ರಕರಣಗಳನ್ನು ಜಿನೋಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿಕೊಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸುವಂತಿಲ್ಲ. ಖಾಸಗಿ ಆಸ್ಪತ್ರೆಯವರೂ ಕೂಡ ಜ್ವರ, ಶೀತ ಹಾಗೂ ಕೆಮ್ಮು ರೋಗಗಳ ಪ್ರಕರಣಗಳನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ವರದಿಗಳನ್ನು 24 ಗಂಟೆಯೊಳಗೆ ನೀಡಬೇಕು ಎಂದರು.

    ಜಿಲ್ಲೆಯಲ್ಲಿ ಕರೊನಾ ಸಂಬಂಧ ಮೂರು ಅಲೆ ಎದುರಿಸಿದ ಅನುಭವ ಹೊಂದಿರುವ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಇದ್ದಾರೆ. ಹೀಗಾಗಿ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಂಡು ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಹಾಸಿಗೆ, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಘಟಕ, ಚಿಕಿತ್ಸೆಗೆ ಅಗತ್ಯವಿರುವ ಉಪಕರಣ, ಅಗತ್ಯ ಔಷಧಿಗಳ ದಾಸ್ತಾನು ಸೇರಿ ಎಲ್ಲವೂ ಇರುವಂತೆ ನೋಡಿಕೊಳ್ಳಿ. ಯಾವುದೇ ಪ್ರಕರಣಗಳಿಲ್ಲ ಎಂಬ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್, ಡಿಎಚ್‌ಒ ಡಾ.ಆರ್.ರಂಗನಾಥ್, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಾಶಿ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಬಸವರಾಜ್, ತಹಶೀಲ್ದಾರ್ ಸತ್ಯನಾರಾಯಣ ಇತರರಿದ್ದರು.

    ಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts