More

    1.20 ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳ

    ಬ್ಯಾಡಗಿ: ದೇಶದಲ್ಲಿ ಒಟ್ಟು 2.42 ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದನೆಯಿತ್ತು. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಬಳಿಕ 1.20 ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು. ಪಟ್ಟಣದ ಕೈಲಾಸ ಕೋಲ್ಡ್ ಸ್ಟೋರೇಜ್ ಮಹಡಿಯ ಮೇಲೆ ಅಳವಡಿಸಿದ 94 ಯೂನಿಟ್ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದಲ್ಲಿ 2022ರ ವೇಳೆಗೆ 3.7 ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. 2030ರ ವೇಳೆಗೆ 4.50 ಲಕ್ಷ ಮೆಗಾವಾಟ್ ಉತ್ಪಾದನೆ ಗುರಿಯಿದೆ. ವಿದ್ಯುತ್ ಚಾಲಿತ ವಾಹನಗಳು ದೇಶಾದ್ಯಂತ ಶೇ. 50 ರಷ್ಟು ಹೆಚ್ಚಲಿದ್ದು, ಮಂಬರುವ ದಿನಗಳಲ್ಲಿ ಮುಗಿದುಹೋಗುವ ಇಂಧನ ಬಳಕೆ ಕೈಬಿಡಬೇಕಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮುಗಿದು ಹೋಗುವ ಇಂಧನಗಳ ಬಳಕೆ ಕಡಿತಗೊಳಿಸಿ, ಸೋಲಾರ್ ಹಾಗೂ ಇತರ ಘಟಕಗಳಿಂದ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದರು.

    ವಿವಿಧ ರಾಜ್ಯಗಳ 25 ಜಿಲ್ಲೆಗಳಲ್ಲಿ ರೈತರ ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್​ಅಳವಡಿಸುವ ಪ್ರಕ್ರಿಯೆ ಜಾರಿಯಿದ್ದು, ಮೊದಲ ಹಂತದಲ್ಲಿ 15 ಲಕ್ಷ ಹಾಗೂ ಬಳಿಕ 10 ಲಕ್ಷ ರೈತರಿಗೆ ಪ್ರಯೋಜನ ಸಿಗಲಿದೆ. ಬ್ಯಾಡಗಿಯ ಪ್ರಸಿದ್ಧ ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಒಟ್ಟು 33 ಸ್ಟೋರೇಜ್​ಗಳಿದ್ದು, ಹಂತಹಂತವಾಗಿ ಸೋಲಾರ್ ಅಳವಡಿಸಿಕೊಳ್ಳಬೇಕಿದೆ ಎಂದರು.

    ಕೋಲ್ಡ್ ಸ್ಟೋರೇಜ್ ಮಾಲೀಕನಾಗುತ್ತಿದ್ದೆ: 10 ವರ್ಷಗಳ ಹಿಂದೆ ನಾನು ಬ್ಯಾಡಗಿಯಲ್ಲಿ ಮೆಣಸಿನಕಾಯಿ ವ್ಯಾಪಾರ ಹಾಗೂ ಕೋಲ್ಡ್ ಸ್ಟೋರೇಜ್ ನಿರ್ವಿುಸಲು ಮುಂದಾಗಿದ್ದೆ. ಆದರೆ, ಸ್ಥಳೀಯ ವರ್ತಕರ ಸಲಹೆಯಂತೆ ನಿರ್ಧಾರದಿಂದ ಹಿಂದೆ ಸರಿದೆ. ಆಗ ನಾನು ವ್ಯಾಪಾರಕ್ಕೆ ಇಳಿದಿದ್ದಲ್ಲಿ ದಿಲ್ಲಿಗೆ ಸಂಸದನಾಗಿ ಹೋಗುತ್ತಿರಲಿಲ್ಲ ಎಂದು ಮೆಲುಕು ಹಾಕಿದರು.

    ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಬ್ಯಾಡಗಿಯಲ್ಲಿ 3 ಕೋಲ್ಡ್ ಸ್ಟೋರೇಜ್ ಘಟಕಗಳು ಸೋಲಾರ ಅಳವಡಿಸಿಕೊಂಡಿದ್ದು, ಆರ್ಥಿಕ ಉಳಿತಾಯ ಹಾಗೂ ಪರಿಸರ ದೃಷ್ಟಿಯಿಂದ ಉತ್ತಮ ಯೋಜನೆ ಎಂದರು.

    ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಜಿ.ಪಂ. ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ಟಾಟಾ ಉದ್ಯಮ ವ್ಯವಸ್ಥಾಪಕ ಪ್ರಶಾಂತ ಬೈಂದೂರು, ವೀರಮಾಹೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಆಲದಗೇರಿ, ಮುರಿಗೆಪ್ಪ ಶೆಟ್ಟರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ, ಜಯಣ್ಣ ಚಿಲ್ಲೂರು ಇದ್ದರು. ವಕೀಲ ಚಿದಾನಂದ ಮಠದ ಕಾರ್ಯಕ್ರಮ ನಿರ್ವಹಿಸಿದರು.

    ಕೋಲ್ಡ್ ಸ್ಟೋರೇಜ್ ಮಹಡಿಯ ಮೇಲೆ ನಿರ್ವಿುಸಿದ ಸೋಲಾರ್ ಪ್ಯಾನಲ್​ಗಳಿಂದ ಪ್ರತಿದಿನ 94 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸುಮಾರು 50 ಲಕ್ಷ ರೂ. ವೆಚ್ಚವಾಗಿದೆ. ಕೋಲ್ಡ್ ಸ್ಟೋರೇಜ್​ಗೆ ಪ್ರತಿ ತಿಂಗಳಿಗೆ 1.25 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಖರ್ಚು ಮಾಡಿದ ಹಣ ನಾಲ್ಕು ವರ್ಷದಲ್ಲಿ ಮರುಪಾವತಿಯಾಗಲಿದೆ. ಘಟಕಕ್ಕೆ 25 ವರ್ಷಗಳ ವಾರಂಟಿಯೂ ಇದೆ.
    | ಗಣೇಶ ಹೆಗಡೆ, ಟಾಟಾ ಕಂಪನಿ ಸೋಲಾರ್ ವಿತರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts