More

    ಹೋರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ, ದಯಾಸಾಗರ ಪಾಟೀಲ ಬಣ್ಣನೆ, ಜಲದ ನಾಡಾಗಲಿದೆ ಇಂಡಿ !

    ವಿಜಯಪುರ: ಇಂಡಿ ತಾಲೂಕಿಗೆ ಅಂಟಿರುವ ಬರ ಪೀಡಿತ ಪ್ರದೇಶ, ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆಯನ್ನಿರಿಸಿದ್ದು, ಈ ಭಾಗದ ಮಹಾತ್ವಾಕಾಂಕ್ಷಿ ಹೋರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವಿದು ರೈತಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಬಣ್ಣಿಸಿದ್ದಾರೆ.

    ನೀರಾವರಿಯಿಂದ ವಂಚಿತಗೊಂಡಿರುವ ಇಂಡಿ, ಬಬಲೇಶ್ವರ, ಚಡಚಣ ಹಾಗೂ ವಿಜಯಪುರ ತಾಲೂಕಿನ ಸುಮಾರು 56 ಹಳ್ಳಿಗಳು ಈ ಯೋಜನೆಯಿಂದ ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ. ಇದರಿಂದ ಈ ಭಾಗದ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಾರರಿಗೆ ಸಾಕಷ್ಟು ಸಹಾಯವಾಗಲಿದೆ. ಲಿಂಬೆ, ದಾಳಿಂಬೆ, ದ್ರಾಕ್ಷಿ ಮುಂತಾದ ತೋಟಗಾರಿಕೆ ಬೆಳೆಯಿಂದಾಗಿ ಈ ಭಾಗ ಸಮೃದ್ಧಗೊಳ್ಳಲಿದೆ. ಹೀಗಾಗಿ ಇಂಥ ಯೋಜನೆ ಸಾಕಾರಗೊಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದು ತಿಳಿಸಿದ್ದಾರೆ.

    ಅದರಲ್ಲೂ ಜಿಲ್ಲೆಯವರೇ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಎಷ್ಟು ಕೃತಜ್ಞತೆ ತಿಳಿಸಿದರೂ ಸಾಲದು. ಕಳೆದ 40 ವರ್ಷಗಳಿಂದ ಈ ಭಾಗದ ರೈತರು ಹೋರಾಟ ಮಾಡಿಕೊಂಡು ಬಂದಿದ್ದರೂ ಯೋಜನೆ ಸಾಕಾರಗೊಂಡಿರಲಿಲ್ಲ. ಹೀಗಾಗಿ ನಾಲ್ಕು ತಾಲೂಕುಗಳ ಸುಮಾರು 1,22,885 ಎಕರೆ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿತ್ತು. ಈ ಹಿಂದಿನ ಸರ್ಕಾರಗಳು ಕೇವಲ ಆಶ್ವಾಸನೆ, ಭರವಸೆ, ಚರ್ಚೆಯಲ್ಲಿಯೇ ಕಾಲಹರಣ ಮಾಡಿದ್ದವು. ಇದೀಗ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಇವರ ಇಚ್ಛಾಶಕ್ತಿಯ ಫಲವಾಗಿ ಯೋಜನೆಗೆ ಅನುಮೋದನೆ ಸಿಕ್ಕಿದೆ.

    ಮಾತ್ರವಲ್ಲ, ಇಂಡಿ ತಾಲೂಕಿನ ಇಂಚಗೇರಿ ಹಾಗೂ ಇತರೆ 41 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇಂಡಿ ಭೀಮಾ ನದಿ ಭಾಗದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಅಲ್ಲದೇ ಈ ಬಾರಿ ಮಳೆಗಾಲದಲ್ಲೂ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ಸೌಲಭ್ಯ ಕಲ್ಪಿಸಬೇಕಾಯಿತು. ಆದರೆ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಸಂಪೂರ್ಣ ನೀಗಲಿದೆ. ಅಲ್ಲದೇ, ಈಗಾಗಲೇ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು ಈ ಎಲ್ಲ ಯೋಜನೆಗಳಿಂದ ಇಂಡಿ ಭಾಗ ಜಲದ ನಾಡಾಗಲಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts