More

    ಹೋಬಳಿ ಮಟ್ಟದಲ್ಲೂ ಆರೋಗ್ಯ ಮೇಳ

    ನಾಗಮಂಗಲ: ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯವನ್ನು ನೀಡುವುದಷ್ಟೇ ನನ್ನ ಮುಖ್ಯ ಧ್ಯೇಯವಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸುವುದಿಲ್ಲ ಎಂದು ಸಮಾಜ ಸೇವಕ ಪೈಟರ್ ರವಿ ಹೇಳಿದರು.


    ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಜನಪರವಾದ ಕೆಲಸ ಮಾಡುವುದರ ಮೂಲಕ ತಾಲೂಕಿನ ಮಗನಾಗಿ ಋಣ ತೀರಿಸುತ್ತಿದ್ದೇನೆ ಎಂದು ತಿಳಿಸಿದರು.


    ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಹೋಬಳಿ ಮಟ್ಟದ ಆರೋಗ್ಯ ಶಿಬಿರವನ್ನು ನಡೆಸಲಾಗುವುದು. ಸೆ.18ರಂದು ಹೊಣಕೆರೆ ಹೋಬಳಿಯಲ್ಲಿ ಉಚಿತ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ. ತಾಲೂಕಿನ ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದ್ದು, ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ಮಾತನಾಡಿದರು.


    1500 ಜನರು ಭಾಗಿ: ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 1500ಕ್ಕೂ ಹೆಚ್ಚಿನ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ದಂತ ವೈದ್ಯರು, ಕ್ಯಾನ್ಸರ್ ತಜ್ಞರು ಹಾಗೂ ಹೃದ್ರೋಗ ತಜ್ಞರು ಸೇರಿದಂತೆ ಆದಿಚುಂಚನಗಿರಿ ಆಸ್ಪತ್ರೆಯ 15 ವಿಭಾಗಗಳ ವೈದ್ಯರು, ಬೆಂಗಳೂರಿನ ಒಕ್ಕಲಿಗರ ಸಂಘದ ಸಂಚಾರ ದಂತ ಚಿಕಿತ್ಸಾಲಯ, ಪೂರ್ಣ ಸುಧಾ ಕ್ಯಾನ್ಸರ್ ಫೌಂಡೇಷನ್ ಸೇರಿದಂತೆ ಮತ್ತಿತರ ವಿಭಾಗಗಳ ವೈದ್ಯರು ಪಾಲ್ಗೊಂಡಿದ್ದರು.


    ಉಚಿತ ಔಷಧ ವಿತರಣೆ: ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಉಚಿತವಾಗಿ ಪೈಟರ್‌ರವಿ ಅವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದಾಗಿ ತಿಳಿಸಿದರು.


    ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಸತ್‌ಕೀರ್ತಿ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಪೈಟರ್‌ರವಿ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.


    ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದರ ಜತೆಗೆ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ, ಶಿವಕುಮಾರ್ ಹಾಗೂ ಡಾ.ಅಕ್ಷಯ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts