More

    ಹೊಸ ಸಂಶೋಧನೆಗೆ ಮಾರ್ಗದರ್ಶಕರ ಕೊರತೆ !

    ವಿಜಯಪುರ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ ಮತ್ತೆ ಮತ್ತೆ ಕಾಡುತ್ತಿದೆ. ಈ ಸಮಸ್ಯೆಯಿಂದ ಯಾವುದೇ ಹೊಸ ಸಂಶೋಧನೆಗಳು ನಡೆಯದೆ ಹೆಸರಿಗೆ ಮಾತ್ರ ವಿಶ್ವವಿದ್ಯಾಲಯ ಇದೆ ಎನ್ನುವಂತಾಗಿದೆ.

    ಸದ್ಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸೇರಿ 400 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಾಜು 150 ಸಿಬ್ಬಂದಿ ಕೊರತೆ ಇದೆ. ಮಹಿಳಾ ವಿಶ್ವವಿದ್ಯಾಲಯ ಆರಂಭದಿಂದಲೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈಗಿರುವ 400 ಸಿಬ್ಬಂದಿ ಪೈಕಿ 67 ಸಿಬ್ಬಂದಿ ಮಾತ್ರ ಕಾಯಂ ಇದ್ದು, ಉಳಿದವರು ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರಿದ್ದಾರೆ. ರಾಜ್ಯದ ಏಕೈಕ ಮಹಿಳಾ ವಿವಿಯ ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿನಿಯರು ಹೊಸ ಸಂಶೋಧನೆ ಮಾಡಲು ಮುಂದಾಗುತ್ತಿದ್ದರೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಉಪನ್ಯಾಸಕರು ಸಹ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಪ್ರಸ್ತಾವನೆ ಕಳುಹಿಸಿದರೂ ಏನೂ ಪ್ರಯೋಜನವಾಗಿಲ್ಲ.

    ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಕೂಡ ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ನಾವು ಪ್ರತಿವರ್ಷ ವಿವಿ ಅಭಿವೃದ್ಧಿಗೆ 25 ಕೋಟಿ ರೂ. ಬೇಡಿಕೆಯ ಪ್ರಸ್ತಾವನೆ ಸಲ್ಲಿಸುತ್ತೇವೆ. ಇಲ್ಲಿಯವರೆಗೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಹೀಗಾಗಿ ನಮ್ಮ ವಿವಿ ಆಂತರಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿದೆ ಎಂದು ಮಹಿಳಾ ವಿವಿ ಕುಲಪತಿ ಪ್ರೊ. ತುಳಸಿಮಾಲಾ ಹೇಳುತ್ತಾರೆ.

    ಮಹಿಳಾ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದೆ. ಕಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದನ್ನು ಸರ್ಕಾರ ಕಳೆದ ಐದು ವರ್ಷದಿಂದ ನಿಲ್ಲಿಸಿದ ಕಾರಣ ವಿವಿಯಲ್ಲಿ ಹೊಸ ವಿಷಯಗಳ ಅಧ್ಯಯನ ಕೇಂದ್ರ ತೆರೆಯಲು ಹಿಂದೇಟು ಹಾಕಲಾಗುತ್ತಿದೆ. ಇದ್ದ ವಿಷಯಗಳ ಅಧ್ಯಯನ ಸರಿಯಾಗಿ ನಡೆದರೆ ಸಾಕು ಎನ್ನುವ ಮಟ್ಟಕ್ಕೆ ವಿವಿ ಬಂದಿದೆ. ಈಗಿರುವ ವಿಷಯಗಳ ಕಲಿಕೆಗೂ ಹೆಚ್ಚಾಗಿ ಅತಿಥಿ ಉಪನ್ಯಾಸಕರ ಮೇಲೆಯೇ ವಿವಿ ಅವಲಂಬಿತವಾಗಿದೆ. ಹೀಗಾಗಿ ಹೊಸ ಕೋರ್ಸ್ ಆರಂಭಿಸುವ ಬಗ್ಗೆ ಮಹಿಳಾ ವಿವಿ ಕುಲಪತಿಗಳು ಆಸಕ್ತಿ ತೋರುತ್ತಿಲ್ಲ.

    ರಾಜ್ಯ ಸರ್ಕಾರ ಇರುವ ಸಿಬ್ಬಂದಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿರುವ ಕಾರಣ ಏನೂ ತೊಂದರೆಯಾಗಿಲ್ಲ. 3 ವರ್ಷದ ಹಿಂದೆ ಕಾಯಂ ಸಿಬ್ಬಂದಿ, ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ಬಿಡುಗಡೆ ಮಾಡುತ್ತಿರಲಿಲ್ಲ. ಈಗ ಕನಿಷ್ಠ ಸಂಬಳವನ್ನಾದರೂ ಸರಿಯಾಗಿ ಸಮಯದಲ್ಲಿ ನೀಡುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂ. ನೀಡುತ್ತಿರುವಾಗ ಉನ್ನತ ಶಿಕ್ಷಣಕ್ಕೆ ಮೀಸಲಾಗಿರುವ ಮಹಿಳಾ ವಿವಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತಿಲ್ಲ ಎನ್ನುವುದು ಶಿಕ್ಷಣ ಪ್ರೇಮಿಗಳ ನೋವಾಗಿದೆ.

    ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಇದೆ. ಪ್ರತಿ ವರ್ಷ ಅಭಿವೃದ್ಧಿ ಅನುದಾನ ನೀಡುತ್ತಿರುವ ಸರ್ಕಾರ ಕಳೆದ ಮೂರು ವರ್ಷಗಳಿಂದ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಆಂತರಿಕ ಸಂಪನ್ಮೂಲಗಳಿಂದ ದೊರೆಯುವ ಅನುದಾನವನ್ನು ವಿವಿ ಕಾರ್ಯಗಳಿಗೆ ಬಳಸಲಾಗುತ್ತದೆ. ಪ್ರಸಕ್ತ ಬಜೆಟ್‌ನಲ್ಲಿ ಮಹಿಳಾ ವಿವಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಆಶಾಭಾವ ಹೊಂದಿದ್ದೇವು. ಈಗ ಅದು ಕೂಡ ಈಡೇರಿಲ್ಲ. ಅನುದಾನ ಬಿಡುಗಡೆ ಮಾಡುವಂತೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರೊ. ತುಳಸಿಮಾಲಾ, ಕುಲಪತಿ, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts