More

    ಹೆಚ್ಚು ಭಾಷೆ ತಿಳಿದಷ್ಟೂ ವ್ಯಕ್ತಿತ್ವ ಸಮೃದ್ಧ, ಬಹು ಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ ಯುನೈಟಿಂಗ್ ವಾಯ್ಸಸ್ ಉದ್ಘಾಟಿಸಿ ವಿವಿ ವಾಣಿಜ್ಯ ವಿಭಾಗದ ಡೀನ್ ಪ್ರೊ. ಈಶ್ವರ್

    ಮಂಗಳೂರು: ಭಾಷೆ ನಮ್ಮ ವ್ಯಕ್ತಿತ್ವದ ಪ್ರತೀಕ. ಹೆಚ್ಚು ಭಾಷೆ ತಿಳಿದಷ್ಟೂ ನಮ್ಮ ವ್ಯಕ್ತಿತ್ವ ಸಮೃದ್ಧವಾಗುತ್ತದೆ. ವ್ಯವಹಾರ ಸರಳ ಮತ್ತು ಸುಲಭವಾಗುತ್ತದೆ. ಕೊಂಕಣಿ ಅಧ್ಯಯನ ಪೀಠದ ಮೂಲಕ ಭಾಷಾ ವಿಚಾರವಾಗಿ ಅನೇಕ ಜನಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಪ್ರೊ. ಈಶ್ವರ್ ಹೇಳಿದರು.

    ಮಂಗಳೂರು ವಿಶ್ವವಿದ್ಯಾನಿಲಯ, ಕೊಂಕಣಿ ಅಧ್ಯಯನ ಪೀಠ, ಜಾನಪದ ಸಾಂಸ್ಕೃತಿಕ ಸಂಘ, ಬೆಸೆಂಟ್ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆದ ಒಂದು ದಿನದ ಬಹುಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ- ಯುನೈಟಿಂಗ್ ವಾಯ್ಸಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಭಾಷೆಯ ಉಳಿವಿಗೆ ಸಮಗ್ರ ಭಾಷಾ ಜ್ಞಾನದ ಅಗತ್ಯತೆ ಇದೆ. ಸರ್ಕಾರವು ಪ್ರಾದೇಶಿಕ ಭಾಷೆಗಳ ಉಳಿವಿಗೆ ಹೆಚ್ಚಿನ ಪ್ರಯತ್ನ, ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಪ್ರದೇಶಿಕ ಭಾಷೆಗಳ ಸಾಹಿತ್ಯ ಬೆಳವಣಿಗೆ ಹೆಚ್ಚಿನ ಕೊಡುಗೆ ನೀಡಬೇಕು. ಕೊಂಕಣಿಗೆ ಅದರದ್ದೇ ಆದ ಲಿಪಿ ಇಲ್ಲದಿದ್ದರೂ ಅದರಲ್ಲಿ ವಿಶ್ವ ದರ್ಜೆಯ ಸಾಹಿತ್ಯ ಬರಹಗಳು ಸೃಷ್ಟಿಯಾಗುತ್ತಿರುವುದು ವಿಶೇಷ. ಕೊಂಕಣಿ ತಿಳಿಯದ ಮಂದಿಯೂ ಕೊಂಕಣಿ ಭಾಷೆಯನ್ನು ಕಲಿಯಲು, ಮಾತನಾಡಲು ಉತ್ಸಾಹ ತೋರಬೇಕು. ಇದೇ ರೀತಿ ಇತರ ಪ್ರದೇಶಿಕ ಭಾಷೆಗಳ ಬಗ್ಗೆ ವಿಶಾಲ ಜ್ಞಾನ, ಸಹಿತಿಕ ಜ್ಞಾನ ಅಗತ್ಯವಾಗಿ ಪಡೆಯಬೇಕು ಎಂದರು.

    ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ ನಂದಗೋಪಾಲ ಶೆಣೈ ಮಾತನಾಡಿ, ಪ್ರಾದೇಶಿಕ ಭಾಷೆಗಳ ಉಳಿವಿಗೂ ಮುನ್ನ ಭಾಷಿಕ ಪ್ರವೀಣರು ಒಟ್ಟಾಗಿ ಸೇರಿ ಅದರ ಬೆಳವಣಿಗೆಯ ಬಗ್ಗೆ ಆಲೋಚಿಸುವ ಅನಿವಾರ‌್ಯತೆ ಇದೆ. ಈ ಮೂಲಕ ಭಾಷೆಯ ಅಭಿವೃದ್ದಿ, ಬೆಳವಣಿಗೆಗೆ ಸಮಗ್ರ ಯೋಜನೆ, ರೂಪುರೇಶ್ಯೆ ಅಗತ್ಯ ಎಂದರು.

    ಡಬ್ಲ್ಯೂಎನ್‌ಇಎಸ್‌ನ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಉಪಾಧ್ಯಕ್ಷರಾದ ಡಾ. ಮಂಜುಳಾ ಕೆ.ಟಿ., ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ರಾಜಶೇಖರ್ ಹೆಬ್ಬಾರ್, ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ., ಪ್ರೊ. ಅನುಪಾ ಬಾಳಿಗೆ, ಪ್ರೊ. ಮಾಯಾ ಕುಡ್ವ ಉಪಸ್ಥಿತರಿದ್ದರು.

    ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ್ ನಾಯಕ್ ಸ್ವಾಗತಿಸಿದರು. ಪ್ರಣಮ್ಯ ನಿರೂಪಿಸಿದರು. ಜಾನಪದ ಸಾಂಸ್ಕೃತಿಕ ಸಂಘದ ಸಂಚಾಲಕಿ ಪ್ರೊ. ಜ್ಞಾನೇಶ್ವರಿ ಮತ್ತು ಸಹಸಂಚಾಲಕ ಡಾ. ಪರಶುರಾಮ ಗಮಾಳಗೆ ವಂದಿಸಿದರು.

    ಬಹುಭಾಷಾ ವಾದ- ಸಂವಾದ

    ಬಹು ಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ ಯುನೈಟಿಂಗ್ ವಾಯ್ಸಸ್ ಸಭಾ ಕಾರ್ಯಕ್ರಮದ ಬಳಿಕ ಬಹುಭಾಷಾವಾದ ವಿಚಾರದಲ್ಲಿ ಸಂವಾದ ನಡೆಯಿತು. ಮಲೆಯಾಳಿ ಭಾಷೆಯ ಬಗ್ಗೆ ಪಯ್ಯನ್ನೂರು ರಮೇಶ್ ಪೈ, ಕೊಂಕಣಿ ಭಾಷೆಯ ಬಗ್ಗೆ ಗೋಕುಲ್‌ದಾಸ್ ಪ್ರಭು, ಬ್ಯಾರಿ ಮತ್ತು ತುಳು ಭಾಷೆಯ ಅನನ್ಯತೆಯ ಬಗ್ಗೆ ಡಾ. ಅಬೂಬಕ್ಕರ್ ಸಿದ್ದಿಕ್, ತುಳು ಭಾಷೆಯ ಬಗ್ಗೆ ಡಾ. ಮಾಧವ ಎಂ.ಕೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಡಾ. ದೇವದಾಸ್ ಪೈ ಬಿ. ಬಹುಭಾಷಾ ವಾದ- ಸಂವಾದವನ್ನು ನಡೆಸಿಕೊಟ್ಟರು. ಕೊಂಕಣಿ ಅಧ್ಯಯನ ಪೀಠದ ಪದಾಧಿಕಾರಿಗಳು, ಸದಸ್ಯರು, ವಿವಿಧ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts