More

    ಪೆನ್ಶನ್ ಫಂಡ್ ರಿಲೀಸ್‌ಗೆ ಕಂಡೀಷನ್!, ವಿವಿ ಹೆಚ್ಚುವರಿ ಸಿಬ್ಬಂದಿ ಆಯ್ಕೆ ರದ್ದು ನಂತರವೇ 20 ಕೋಟಿ ರೂ. ಬಿಡುಗಡೆ

    ಶ್ರವಣ್ ಕುಮಾರ್ ನಾಳ, ಮಂಗಳೂರು

    ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪೆನ್ಶನ್ ಫಂಡ್ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಪ್ರಮುಖ ಷರತ್ತು ವಿಧಿಸಿದೆ.

    ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರವಾಗಿರುವ ಮಂಗಳೂರು ವಿವಿ ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿ ಖಾಲಿಯಾಗಿ ದಿವಾಳಿಯಾಗಿದೆ. ಆಂತರಿಕ ನಿಧಿಯಲ್ಲಿದ್ದ ಹಣವನ್ನು ಆಂತರಿಕ ಖರ್ಚು, ಸಿಬ್ಬಂದಿ ವೇತನಕ್ಕೆ ಬಳಸಿದ್ದು ದಿವಾಳಿಗೆ ಕಾರಣ. ಇತ್ತೀ ಚೆಗೆ ಉನ್ನತ ಶಿಕ್ಷಣ ಇಲಾಖೆಯ ಆಂತರಿಕ ಪರಿಶೋಧನೆ ವರದಿಯಂತೆ ವಿವಿ ತನ್ನ ಅನುದಾನವನ್ನು ತಾತ್ಕಾಲಿಕ ಹಾಗೂ ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿನಿಯೋಗಿಸಿರುವುದು ಬೆಳಕಿಗೆ ಬಂದಿರುವುದರಿಂದ ಸರ್ಕಾರದಿಂದ ನೀಡುವ ಪೆನ್ಶನ್ ಫಂಡ್ ಸಹಿತ ಇನ್ನಿತರ ಅನುದಾನವನ್ನು ತಡೆಹಿಡಿಯಲಾಗಿದೆ. ವಿವಿಯಲ್ಲಿರುವ ಹೆಚ್ಚುವರಿ ಸಿಬ್ಬಂದಿಯನ್ನು ಹೊರಹಾಕಿದ ನಂತರವೇ ಸರ್ಕಾರದಿಂದ ವಿವಿಧ ಅನುದಾನ ಬಿಡುಗಡೆಗೊಳಿಸುವ ಷರತ್ತು ವಿಧಿಸಿರುವುದು ವಿವಿಗೆ ತಲೆನೋವಾಗಿದೆ.

    ಲೆಕ್ಕಕ್ಕಿಂತ ಜಾಸ್ತಿ ನೌಕರರು: ಹಂಪನಕಟ್ಟೆ ವಿವಿ ಕಾಲೇಜು, ಕೊಣಾಜೆ ವಿವಿ ಪ್ರಥಮದರ್ಜೆ ಕಾಲೇಜು, ನೆಲ್ಯಾಡಿ ವಿವಿ ಘಟಕ ಕಾಲೇಜು, ಉಡುಪಿ ಬನ್ನಡ್ಕ ವಿವಿ ಘಟಕ ಕಾಲೇಜು, ಮಡಿಕೇರಿ ಎಫ್‌ಎಂಕೆ ಕಾಲೇಜು, ಚಿಕ್ಕ ಅಳುವಾರ ಪಿಜಿ ಸೆಂಟರ್, ವಿವಿ ಆಡಳಿತ ಕಚೇರಿಯನ್ನು ಒಳಗೊಂಡ ಮಂಗಳೂರು ವಿವಿ ವ್ಯಾಪ್ತಿಯಲ್ಲಿ 1980ರಿಂದ ಈವರೆಗೆ ಮಂಜೂರಾದ 273 ಕಾಯಂ ಹುದ್ದೆಗಳ ಪೈಕಿ 144 ಹುದ್ದೆ ಭರ್ತಿಯಾಗಿ, 129 ಹುದ್ದೆ ಖಾಲಿ ಇವೆ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆ ಪೈಕಿ 189 ಹುದ್ದೆ ಭರ್ತಿಯಾಗಿ, 358 ಖಾಲಿ ಇವೆ. ಹಿಂದಿನ ಉಪಕುಲಪತಿ ಪ್ರೊ.ಯಡಪಡಿತ್ತಾಯರ ಅವಧಿಯಲ್ಲಿ ಈ ಭರ್ತಿಯಾಗದ ಹುದ್ದೆಗಳ ಬದಲಾಗಿ ಲೆಕ್ಕಕ್ಕಿಂತ ಜಾಸ್ತಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿರುವುದು ವಿವಿ ಅರ್ಥವ್ಯವಸ್ಥೆಗೆ ಬಹುದೊಡ್ಡ ಹೊಡೆತ ನೀಡಿದೆ. ಲಭ್ಯ ಮಾಹಿತಿ ಪ್ರಕಾರ, ಖಾಲಿಯಿರುವ ಬೋಧಕ ಹಾಗೂ ಬೋಧಕೇತರ ಹುದ್ದೆ 349, ಆದರೆ ಹೆಚ್ಚುವರಿ 425 ತಾತ್ಕಾಲಿಕ ಹಾಗೂ 350 ಹೊರಗುತ್ತಿಗೆ ಸಿಬ್ಬಂದಿ ನಿಯೋಜಿಸಲಾಗಿದೆ.

    ಕ್ಲರ್ಕ್‌ಗಳಿಗೂ ಅಸಿಸ್ಟೆಂಟ್

    ಹಿಂದಿನ ಉಪಕುಲಪತಿ ಪ್ರೊ.ಯಡಪಡಿತ್ತಾಯ ಅವಧಿಯಲ್ಲಿ ವಿವಿಯಲ್ಲಿ ಖಾಲಿಯಿರುವ ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಹೆಚ್ಚುವರಿಯಾಗಿ 775 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರಿಗೆ ವೇತನ ನೀಡಲು ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿಯನ್ನು ಬಳಸಲಾಗಿತ್ತು. ಇದರ ಪರಿಣಾಮ ಖಜಾನೆ ಬರಿದಾಗಿತ್ತು. ಈ ಹೆಚ್ಚುವರಿ ಸಿಬ್ಬಂದಿ ವೇತನ ಸರ್ಕಾರಿ ವೇತನಕ್ಕಿಂತಲೂ ಅಧಿಕ!. ವಿವಿಯ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಿಬ್ಬಂದಿಗೆ ಈ ಹೆಚ್ಚುವರಿ ಸಿಬ್ಬಂದಿ ಅಸಿಸ್ಟೆಂಟ್‌ಗಳು. ಬಹುತೇಕರಿಗೆ 25 ಸಾವಿರದಿಂದ 39 ಸಾವಿರ ರೂ.ವರೆಗೆ ವೇತನವಿದೆ. ಸ್ಥಳೀಯ ಶಾಸಕರು, ಸಚಿವರ ಶಿಫಾರಸಿನಿಂದ ಬಂದ ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಆಯ್ಕೆ ರದ್ದು ಅಸಾಧ್ಯ

    ವಿವಿಯಲ್ಲಿ ಕೋರ್ಸ್‌ಗಳ ಕಾರ್ಯಭಾರ ಜಾಸ್ತಿ. ಅದಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕ ಅನಿವಾರ್ಯ. ಹಾಗಾಗಿ ಇದು ವಿವಿಗೆ ಹೊರೆ. ಯುಜಿಸಿ ಅನುದಾನವೂ ಕೆಲವು ವರ್ಷಗಳಿಂದ ಬರುತ್ತಿಲ್ಲ. ಹೀಗಾಗಿ ಅನುದಾನ ಬಿಡುಗಡೆ ಮಾಡುವಂಯೆ ವಿವಿಯು ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಉತ್ತರಿಸಿದ ಸರ್ಕಾರ, ಮೊದಲು ಹೆಚ್ಚುವರಿ ಸಿಬ್ಬಂದಿ ಆಯ್ಕೆಯನ್ನು ರದ್ದು ಮಾಡಿ, ನಂತರ ಅನುದಾನ ಕೇಳಿ ಎಂಬ ತಿಳಿಸಿತ್ತು.

    —————————

    ಹಿಂದಿನ ಕುಲಪತಿಗಳ ಕಾಲಾವಧಿಯಲ್ಲಿ ಹೆಚುವರಿ ಸಿಬ್ಬಂದಿ ಆಯ್ಕೆ ಮಾಡಲಾಗಿತ್ತು. ಇದನ್ನು ನನ್ನಿಂದ ರದ್ದು ಮಾಡಲು ಸಾಧ್ಯವಿಲ್ಲ. ಮುಂದೆ ಬರುವ ಕಾಯಂ ಕುಲಪತಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಪ್ರಸ್ತುತ ವಿವಿಯಿಂದಲೇ ಆರ್ಥಿಕ ಕ್ರೋಢೀಕರಣ ಮೂಲಕ ಸಿಬ್ಬಂದಿಗೆ ವೇತನ ನೀಡಲಾಗುವುದು.

    ಪ್ರೊ.ಜಯರಾಜ ಅಮೀನ್, ವಿವಿ ಕುಲಪತಿ (ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts