More

    ಹೊಸಕೋಟೆ ಸಹವಾಸ ಬೇಡಪ್ಪ ಅಂದಿದ್ರು!, ಸಚಿವ ಎಂಟಿಬಿ ನಾಗರಾಜ್ ಹೇಳಿಕೆ, ಕಂಬಳಿಪುರದಲ್ಲಿ ಪಕ್ಷ ಸೇರ್ಪಡೆ

    ಸೂಲಿಬೆಲೆ: ಈ ಹಿಂದೆ ಹೊಸಕೋಟೆ ಪ್ರಭಾವಿಗಳ ದೌರ್ಜನ್ಯಕ್ಕೆ ಸಿಲುಕಿ ನಲುಗಿಹೋಗಿತ್ತು. 2004ರಲ್ಲಿ ಮೊದಲ ಬಾರಿಗೆ ಮತಯಾಚನೆಗೆ ಬಂದಾಗ ಸಾಕಷ್ಟು ಮಂದಿ ಹೊಸಕೋಟೆ ಸಹವಾಸ ನಿನಗೆ ಬೇಡಪ್ಪ ಅಂದಿದ್ರು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಕಂಬಳಿಪುರದಲ್ಲಿ ಭಾನುವಾರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. 2004ರ ಹಿಂದೆ ಕ್ಷೇತ್ರದಲ್ಲಿ ಮತದಾರರನ್ನು ಬೆದರಿಸಿ ಇಟ್ಟುಕೊಳ್ಳಲಾಗಿತ್ತು, ಯಾರು ಮರುಉತ್ತರ ನೀಡುವಂತಿರಲಿಲ್ಲ, ಪ್ರಭಾವ ಬಳಿಸಿ ಎಲ್ಲರನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದರು. ಜನರು ಆತಂಕ ಭಯದ ವಾತಾವರಣದಲ್ಲೇ ಬದುಕು ನಡೆಸುವಂತ ಪರಿಸ್ಥಿತಿ ಇತ್ತು ಎಂದರು.

    ಚುನಾವಣೆಯಲ್ಲಿ ಹರಸಿದರು: ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸಕೋಟೆಯಲ್ಲಿ ಚುನಾವಣೆ ಎದುರಿಸಿದಾಗ ಮತದಾರರು ಧೈರ್ಯವಾಗಿ ಹೊರಬಂದು ಮತದಾನ ಮಾಡಲೂ ಹೆದರುವಂತ ಪರಿಸ್ಥಿತಿ ಇತ್ತು. ಆಗ ಮೊದಲ ಬಾರಿಗೆ ಇದೇ ಕಂಬಳಿಪುರದ ದೇಗುಲದಲ್ಲಿ ಪೂಜೆ ಸಲ್ಲಿಸಿ ಮತಪ್ರಚಾರ ಆರಂಭಿಸಿದೆ. ದೇವರ ಕೃಪೆ ಹಾಗೂ ಸ್ಥಳೀಯರ ಆಶೀರ್ವಾದಿಂದ ಗೆಲುವು ಸಾಧ್ಯವಾಯಿತು. ಅಂದಿನಿಂದ ಮೂರು ಬಾರಿ ಗೆಲುವು ಕಂಡಿದ್ದೇನೆ ಎರಡು ಬಾರಿ ಸೋತಿದ್ದೇನೆ, ಕಂಬಳಿಪುರದೊಂದಿಗಿನ ನಂಟು ನಿರಂತರವಾಗಿದೆ ಎಂದು ಎಂಟಿಬಿ ಹೇಳಿದರು.

    ತತ್ವ ಸಿದ್ಧಾಂತಕ್ಕೆ ಒಪ್ಪಿದರೆ ಸ್ವಾಗತ: ಹೊಸಕೋಟೆಯಲ್ಲಿ ಹೊಸ ಮನ್ವಂತರ ಆರಂಭವಾಗಿದೆ, ವಿವಿಧ ಪಕ್ಷಗಳನ್ನು ತೊರೆದು ಸಾವಿರಾರು ಯುವಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಆಡಳಿತ ವೈಖರಿಯನ್ನು ಮೆಚ್ಚಿ ಯುವಕರು ಬಿಜೆಪಿ ಕಡೆಗೆ ಒಲವು ತೋರಿಸುತ್ತಿದ್ದಾರೆ. ಬಿಜೆಪಿಯ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುವವರಿಗೆ ಸದಾ ಸ್ವಾಗತವಿದೆ ಎಂದು ಹೇಳಿದರು.

    ಅಭಿವೃದ್ಧಿ ಮನದಲ್ಲಿ ಉಳಿಯುತ್ತದೆ: ಚುನಾವಣೆಯಲ್ಲಿ ಸೋಲುಗೆಲುವು ಸಾಮಾನ್ಯ ಆದರೆ ಅಧಿಕಾರವಿದ್ದಾಗ ಜನರ ಸೇವೆಯನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ತೆರಿಗೆ ಕಟ್ಟುವ ಜನರ ಮನಸ್ಸಿನಲ್ಲಿ ಉಳಿಯಬೇಕು ಅವರು ನೆನಪು ಮಾಡಿಕೊಳ್ಳಬೇಕು ಆಗಲೇ ಜನರಿಂದ ಆರಿಸಿ ಬಂದ ಜನಪ್ರತಿನಿಧಿ ಎಂಬ ಸ್ಥಾನಕ್ಕೆ ಅರ್ಥ ಸಿಗುತ್ತದೆ ಎಂದು ಎಂಟಿಬಿ ಹೇಳಿದರು.

    ಪಕ್ಷ ಸಂಘಟನೆಗೆ ಬಲ: ಹೊಸಕೋಟೆ ತಾಲೂಕಿನಲ್ಲಿ ಸಾವಿರಾರು ಯುವಕರು ಸಚಿವ ಎಂಟಿಬಿ ನಾಗರಾಜ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚು ಸ್ವಯಂಪ್ರೇರಿತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಭೂ ಮಂಜುರಾತಿ ಸದಸ್ಯ ರಘುವೀರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts