More

    ಹೊರಗಿನ ಉಸ್ತುವಾರಿಗೆ ಸೊರಗಿದ ಬೀದರ್​ ಜಿಲ್ಲೆ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಬೀದರ್ ಉಸ್ತುವಾರಿ ಹೊಣೆ ಹೊತ್ತ ಮೂರೂವರೆ ತಿಂಗಳಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದು ಕೇವಲ ನಾಲ್ಕು ಸಲ. ಎರಡು ಬಾರಿ ಸಭೆ ನಿಮಿತ್ತ ಬಂದರೆ, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಹಿನ್ನೆಲೆಯಲ್ಲಿ ಒಮ್ಮೆ ಮತ್ತು ಪಕ್ಷದ ಸಭೆಗಾಗಿ ಇನ್ನೊಮ್ಮೆ ಬಂದಿದ್ದಾರೆ. ಇದನ್ನು ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ನನೆಗುದಿಗೆ ಬಿದ್ದಿರುವ ಇತರ ಕೆಲಸಗಳತ್ತ ಚಿತ್ತ ಹರಿಸಿಲ್ಲ….

    ಹೌದು. ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ಹೊಣೆ ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಮುನೇನಕೊಪ್ಪ ಉಸ್ತುವಾರಿ ಸಚಿವರಾದ ನಂತರ ನನೆಗುದಿಗೆ ಬಿದ್ದ ಒಂದೂ ಕಾಮಗಾರಿ ಆರಂಭವಾಗಿಲ್ಲ. ಜಿಲ್ಲಾ ಸಂಕೀರ್ಣ ಜಾಗ ಅಂತಿಮ, ಕುಡಿಯುವ ನೀರಿನ ಸಮಸ್ಯೆ, ಕಬ್ಬಿನ ಬಾಕಿ ಹಣ ಮೊದಲಾದ ಕಾರ್ಯಗಳ ಮೇಲೆ ಬೆಳಕು ಚೆಲ್ಲುವ ಕೆಲಸ ನಡೆದಿಲ್ಲ. ಒಂದು ರೀತಿಯಲ್ಲಿ ಜಿಲ್ಲೆ ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಬಿದ್ದಂತಾಗಿದ್ದು, ಆಡಳಿತದ ಮೇಲೂ ನಿಯಂತ್ರಣ ತಪ್ಪಿದೆ.

    ಜ.24ರಂದು ಸಕರ್ಾರ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಅದಾದ ನಂತರ ಮುನೇನಕೊಪ್ಪ ಜಿಲ್ಲೆಗೆ ನಾಲ್ಕು ಬಾರಿ ಬಂದು ಹೋಗಿದ್ದಾರೆ. ಜ.29ರಂದು ಮೊದಲ ಸಲ ನಗರಕ್ಕೆ ಆಗಮಿಸಿ ಕರೊನಾ ಪೂರ್ವಭಾವಿ ಸಭೆ ನಡೆಸಿದ್ದ ಸಚಿವರು, ಏ.9ರಂದು ಕೆಡಿಪಿ ಸಭೆ ಮಾಡಿದ್ದರು. ಏ.9ರಂದು ಬಸವಕಲ್ಯಾಣಕ್ಕೆ ಸಿಎಂ ಜತೆ ಹಾಗೂ ಮೇ 2ರಂದು ಭಾಲ್ಕಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಗೆ ಬಂದಿದ್ದರು. ಕೇವಲ ಸಭೆ-ಸಮಾರಂಭಕ್ಕೆ ಸಚಿವರು ಸೀಮಿತ ಎನ್ನುವಂತಾಗಿದೆ.

    ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಪಾಟೀಲ್ ನೇತೃತ್ವದಲ್ಲಿ ಒಂದೂ ಸಭೆ ನಡೆದಿಲ್ಲ. ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಚರ್ಚೆ ಮಾಡುವ, ಸಭೆ ನಡೆಸುವ ಗೋಜಿಗೂ ಹೋಗಿಲ್ಲಿ. ಹೀಗಾದರೆ ಸಮಸ್ಯೆಗಳಿಗೆ ಮುಕ್ತಿ ಸಿಗುವುದು ಯಾವಾಗ ಎಂಬುದು ಜಿಲ್ಲೆಯ ಜನರ ಪ್ರಶ್ನೆ.

    ಅನ್ಯ ಜಿಲ್ಲೆ ಸಚಿವರಿಗೆ ಉಸ್ತುವಾರಿ ನೀಡಿದರೆ ಜನರ ಸಂಪರ್ಕಕ್ಕೆ ಸಿಗುವುದಿಲ್ಲ ಮತ್ತು ಕೆಲಸ ಮಾಡುವ ಕಾಳಜಿಯೂ ತೋರುವುದಿಲ್ಲ. ಇದು ಚುನಾವಣೆ ವರ್ಷ ಆಗಿದ್ದರಿಂದ ಸಚಿವರು ತಮ್ಮ ಸ್ವ ಕ್ಷೇತ್ರಗಳಲ್ಲೇ ಬೀಡು ಬಿಡುತ್ತಿರುವ ಕಾರಣ ಹೊರಗಿನ ಉಸ್ತುವಾರಿಯಿಂದಾಗಿ ಜಿಲ್ಲೆಗಳ ಅಭಿವೃದ್ಧಿ ಮರೀಚಿಕೆ ಆಗುತ್ತಿದೆ. ಹೀಗಾಗಿ ಆಯಾ ಜಿಲ್ಲೆಯ ಸಚಿವರಿಗೇ ಉಸ್ತುವಾರಿ ವಹಿಸುವುದು ಉತ್ತಮ ಎಂಬ ಮಾತು ಕೇಳಿಬರುತ್ತಿವೆ.

    ಸ್ವ ಕ್ಷೇತ್ರದ ಜತೆ ಎರಡು ಜಿಲ್ಲೆ ಹೊಣೆ: ಶಂಕರ ಪಾಟೀಲ್ ಮುನೇನಕೊಪ್ಪಗೆ ಬೀದರ್ ಜತೆಗೆ ರಾಯಚೂರು ಜಿಲ್ಲೆ ಉಸ್ತುವಾರಿಯೂ ವಹಿಸಲಾಗಿದೆ. ಚುನಾವಣೆ ವರ್ಷ ಆಗಿರುವುದರಿಂದ ಸಚಿವರು ಸ್ವ ಕ್ಷೇತ್ರದ ಜತೆಗೆ ಎರಡು ಜಿಲ್ಲೆ ಜವಾಬ್ದಾರಿ ನೋಡಿಕೊಳ್ಳಬೇಕಾಗಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಈಗಿನಿಂದಲೇ ಪ್ರಚಾರ ಶುರುವಾಗಿದೆ. ಹೀಗಾಗಿ ಸಚಿವರು ತಮ್ಮ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಕೆಡಿಪಿ ಸಭೆ ಹಾಗೂ ಸಿಎಂ ಪ್ರವಾಸ ಇದ್ದರೆ ಮಾತ್ರ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡುವುದು ವಾಡಿಕೆಯಾಗಿದೆ.

    ಚವ್ಹಾಣ್​ಗೆ ಉಸ್ತುವಾರಿ ಹೆಚ್ಚಿದ ಒತ್ತಡ: ಜಿಲ್ಲೆಯವರೇ ಆದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರಿಗೆ ಬೀದರ್ ಉಸ್ತುವಾರಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಹಿಂದೆ ಜಿಲ್ಲೆಯ ಉಸ್ತುವಾರಿಯಾಗಿದ್ದ ಚವ್ಹಾಣ್, ಕರೊನಾ ವೇಳೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬದಲಾದ ರಾಜಕೀಯದಲ್ಲಿ ಚವ್ಹಾಣ್ಗೆ ಕೊಕ್ ನೀಡಿ ಮುನೇನಕೊಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಮುನೇನಕೊಪ್ಪ ಅವರನ್ನು ತೆಗೆದು ಚವ್ಹಾಣ್ಗೆ ಉಸ್ತುವಾರಿ ವಹಿಸಬೇಕು ಎಂದು ಸಿಎಂ ಮೇಲೆ ಜಿಲ್ಲೆಯ ಪಕ್ಷದ ಮುಖಂಡರು ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

    ಅನ್ಯ ಜಿಲ್ಲೆ ಸಚಿವರಿಗೆ ಉಸ್ತುವಾರಿ ಹೊಣೆ ನೀಡಿದರೆ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ಜಿಲ್ಲೆಯವರು ಸಚಿವ ಸಂಪುಟದಲ್ಲಿ ಇದ್ದರೂ ಬೇರೆ ಜಿಲ್ಲೆಯವರಿಗೆ ಜವಾಬ್ದಾರಿ ವಹಿಸುವುದು ಸರಿಯಲ್ಲ. ಮುನೇನಕೊಪ್ಪ ಉಸ್ತುವಾರಿ ಮಂತ್ರಿಯಾದ ನಂತರ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ.
    | ವಿರೂಪಾಕ್ಷ ಗಾದಗಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts