More

    ಹೈಸ್ಕೂಲ್ ಬಳಿಕ ಶಿಕ್ಷಣ ಮೊಟಕು, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 587 ಮಕ್ಕಳು, ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಹರಸಾಹಸ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಬರೋಬ್ಬರಿ 18 ತಿಂಗಳ ಬಳಿಕ 9 ರಿಂದ 12ನೇ ತರಗತಿವರೆಗೆ ಶಾಲಾ ಕಾಲೇಜುಗಳು ಆರಂಭವಾಗಿ ಜಿಲ್ಲಾದ್ಯಂತ ಉತ್ಸಾಹದಿಂದಲೇ ಮಕ್ಕಳು ಶಾಲೆಗಳತ್ತ ಹೆಜ್ಜೆಹಾಕುತ್ತಿದ್ದರೆ, ಮತ್ತೊಂದೆಡೆ 587 ಮಕ್ಕಳು ಶಿಕ್ಷಣ ಮೊಟಕುಗೊಳಿಸಿ ಉದ್ಯೋಗಗಳತ್ತ ಮುಖಮಾಡಿದ್ದಾರೆ.
    ಜಿಲ್ಲೆಯಲ್ಲಿ 395 ಮಕ್ಕಳು ಶಾಲೆಗೆ ದಾಖಲಾಗಿದ್ದರೂ ಹಾಜರಾಗುತ್ತಿಲ್ಲ, (ಕೆಲವರು ವರ್ಗಾವಣೆ ಪತ್ರ ಪಡೆದಿದ್ದಾರೆ) ಮತ್ತೆ 192 ಮಕ್ಕಳು ಶಾಲೆಗೆ ದಾಖಲಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಪ್ರವೇಶ ದಾಖಲೆಯಲ್ಲಿ ಈ ಅಂಶ ತಿಳಿದು ಬಂದಿದ್ದು, ಪ್ರಸ್ತುತ 30 ಮಕ್ಕಳನ್ನು ಪತ್ತೆ ಮಾಡಿ ಶಾಲೆಯಿಂದ ಹೊರಗುಳಿಯಲು ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ, ಪಾಲಕರ ಮನವೊಲಿಸಿ ಮತ್ತೆ ಶಾಲೆಯತ್ತ ಕರೆತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

    ಶಾಲೆಗೆ ಕರೆತರಬೇಕು: ಬಡತನ, ಅನಕ್ಷರತೆ, ಪಾಲಕರ ನಕಾರ ಮತ್ತಿತರ ಅನೇಕ ಕಾರಣಗಳಿಂದ ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತಿರುವ ಮಕ್ಕಳ ಭವಿಷ್ಯ ಕತ್ತಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಥ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಬೇಕೆಂಬ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಬಿಟ್ಟ ಮಕ್ಕಳಿಗಾಗಿ ತಲಾಶ್ ಆರಂಭಿಸಿದೆ.

    ಕಾಲೇಜು ಮೆಟ್ಟಿಲು ಹತ್ತಲ್ಲ: 6ರಿಂದ 16 ವರ್ಷದ ಮಕ್ಕಳ ಸರಾಸರಿ ವರದಿಯಂತೆ ಎಸ್ಸೆಸ್ಸೆಲ್ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಿದೆ, ಎಸ್ಸೆಸ್ಸೆಲ್ಸಿ ತೇರ್ಗಡೆಯಾದರೂ ಮುಂದಿನ ಶಿಕ್ಷಣಕ್ಕೆ ಹೋಗಲು ಬಯಸದ ಕೆಲವು ವಿದ್ಯಾರ್ಥಿಗಳಿದ್ದಾರೆ. ಮತ್ತೆ ಕೆಲವು ವರದಿಯಂತೆ ಪಾಲಕರೇ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಬೇಲಿಯಾಗಿದ್ದಾರೆ. ಬಡತನ, ಅನಾರೋಗ್ಯ, ಮತ್ತಿತರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಸೇರಿ ಅನೇಕ ಕಾರಣಗಳಿಂದ ಮಕ್ಕಳು ಕಾಲೇಜು ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನಲಾಗಿದೆ.

    ಹೆಣ್ಣುಮಕ್ಕಳೇ ಹೆಚ್ಚು: ಎಸ್ಸೆಸ್ಸೆಲ್ಸಿ ಬಳಿಕ ಕಾಲೇಜು ಮೆಟ್ಟಿಲು ತುಳಿಯದವರಲ್ಲಿ ಬಹುಪಾಲು ಹೆಣ್ಣುಮಕ್ಕಳೇ ಇದ್ದಾರೆ, ಪ್ರೌಢಶಾಲೆ ಶಿಕ್ಷಣ ಮುಗಿಯುತ್ತಿದ್ದಂತೆ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ, ಇದೇ ಪ್ರಮುಖ ಕಾರಣಕ್ಕೆ ಬಹುತೇಕ ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲು ಹತ್ತುವ ಕನಸು ಕಮರಿ ಹೋಗುತ್ತಿದೆ ಎಂಬ ಅಂಶವೂ ಕಂಡುಬಂದಿದೆ.

    ಕರೊನಾವೂ ಕಾರಣ: ಕರೊನಾ ಕಾರಣದಿಂದ ಸುಮಾರು ಒಂದೂ ಮುಕ್ಕಾಲು ವರ್ಷ ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಕಾರ್ಮಿಕ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಕಳೆದೆರಡು ಸಾಲಿನಲ್ಲಿ 30ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಆದರೂ ಅನೇಕ ಮಕ್ಕಳು ಮಾಂಸದ ಅಂಗಡಿ, ಗ್ಯಾರೇಜ್ ಸೇರಿ ಅನೇಕ ಕಡೆಗಳಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದು, ಶಾಶ್ವತವಾಗಿ ಶಿಕ್ಷಣಕ್ಕೆ ತಿಲಾಂಜಲಿ ಇಡುವ ಸಾಧ್ಯತೆ ದಟ್ಟವಾಗಿದೆ.

    ಇದರಲ್ಲಿ ಎರಡು ವರ್ಗವಿದೆ, ಶಾಲೆಗೆ ದಾಖಲಾಗಿ ಶಾಲೆಗೆ ಹಾಜರಾಗದಿರುವುದು, ಮತ್ತೊಂದು ಶಾಲೆಗೆ ದಾಖಲಾಗದೇ ಇರುವುದು, ಈ ರೀತಿಯ ಮಕ್ಕಳ ಬಗ್ಗೆ ನಿಗಾವಹಿಸಿದ್ದು, ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 30 ಮಕ್ಕಳನ್ನು ಗುರುತಿಸಿದ್ದು ಎಲ್ಲರನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ. ಇದರಲ್ಲಿ ಹೈಸ್ಕೂಲು ಬಳಿಕ ಶಿಕ್ಷಣ ಮೊಟಕುಗೊಳಿಸುತ್ತಿರುವವರ ಸಂಖ್ಯೆ ಹೆಚ್ಚಿದೆ.
    ಗಂಗಮಾರೇಗೌಡ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts