More

    ಹೈಕೋರ್ಟ್ ತಡೆ ನೀಡಿದ್ದರೂ ಮುಂದುವರಿದ ಮೀನುಗಾರರ ಪ್ರತಿಭಟನೆ

    ಕಾರವಾರ: ಬಂದರು ಅಲೆ ತಡೆಗೋಡೆ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದ್ದರೂ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಮುಂದುವರಿಸಲಿದ್ದೇವೆ ಎಂದು ಮೀನುಗಾರರು ತಿಳಿಸಿದ್ದಾರೆ.

    ಇಡೀ ಬಂದರು ವಿಸ್ತರಣೆ ಯೋಜನೆಯನ್ನು ಬಂದ್ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದು, ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಸಿರುವ ಧರಣಿ 10 ದಿನ ಪೂರೈಸಿದೆ.

    ಬುಧವಾರ ಧರಣಿಗೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ರಾಘು ನಾಯ್ಕ ನೇತೃತ್ವದಲ್ಲಿ ಬೆಂಬಲ ಸೂಚಿಸಿದರು. ಹಿರಿಯ ವಕೀಲ, ಕೆನರಾ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ ಬೆಂಬಲ ಸೂಚಿಸಿ ಮಾತನಾಡಿ, ರವೀಂದ್ರನಾಥ ಟ್ಯಾಗೋರರು ಇಷ್ಟಪಟ್ಟು ಹಾಡಿದ ತೀರವಿದು. ಇದು ಇಡೀ ಕಾರವಾರದ ಆಸ್ತಿ ಇದನ್ನು ಉಳಿಸಿಕೊಳ್ಳಲು ಎಲ್ಲರೂ ಸಂಘಟಿತ ಹೋರಾಟ ಮಾಡಬೇಕು ಎಂದರು.

    ರೂಪಾಲಿ ಆಯ್ಕೆ ಮಾಡಿದ್ದು ನಮ್ಮ ದುರಂತ: ನಮ್ಮ ಸಮಸ್ಯೆ ಇದ್ದಾಗ ಎದುರಿಗೆ ಬಂದು ಸ್ಪಂದಿಸದ ಶಾಸಕಿ ರೂಪಾಲಿ ನಾಯ್ಕ ಅವರನ್ನು ಆಯ್ಕೆ ಮಾಡಿದ್ದು ನಮ್ಮ ದುರಂತ ಎಂದು ಮುಖಂಡ ರಾಜು ತಾಂಡೇಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಿ ರೂಪಾಲಿ ನಾಯ್ಕ ತಾಲೂಕಿನಲ್ಲಿ ಹಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ, ನಾವು 10 ದಿನದಿಂದ ಧರಣಿ ನಡೆಸಿದ್ದರೂ ಇತ್ತ ಸುಳಿದಿಲ್ಲ. ಬೆಂಗಳೂರಿನಲ್ಲಿ, ತಮ್ಮ ಕಚೇರಿಯಲ್ಲಿ ಕುಳಿತು ಕಡಲ ತೀರಕ್ಕೆ ಹಾನಿಯಾಗುವುದಿಲ್ಲ ಎಂದು ಮಾತ್ರ ರೂಪಾಲಿ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುಧಾಕರ ಚಾರಾ ಹರಿಕಂತ್ರ ಇತರರು ಇದ್ದರು.

    ಕಾರವಾರ ಬಂದರು ತಾಯಿ ಇದ್ದಂತೆ: ಕಾರವಾರ ಮೀನುಗಾರಿಕೆ ಬಂದರು ಇಡೀ ದೇಶದ ಮೀನುಗಾರರಿಗೆ ತಾಯಿ ಇದ್ದಂತೆ ಎಂದು ಮಲ್ಪೆ ಮೀನುಗಾರರ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗರಾಜ್ ಹೇಳಿದರು. ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರೋಧಿಸಿ ಡಿಸಿ ಕಚೇರಿಯ ಎದುರು ನಡೆದ ಪ್ರತಿಭಟನೆಗೆ ಬೆಂಬಲ ನೀಡಿದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಮನವಿ ಸಲ್ಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅರಬ್ಬಿ ಸಮುದ್ರದಲ್ಲಿ ಎಲ್ಲೇ ತೂಫಾನ್ ಸಂಭವಿಸಿದರೂ ಕೇರಳದಿಂದ ಗುಜರಾತ್​ವರೆಗೆ ಪಶ್ಚಿಮ ಕರಾವಳಿಯ ಎಲ್ಲ ದೋಣಿಗಳು ಕಾರವಾರಕ್ಕೆ ಬಂದು ಆಶ್ರಯ ಪಡೆಯುತ್ತವೆ. ಮಗು ತಾಯಿಯ ಮಡಿಲು ಸೇರಿದಂತೆ ಕಾರವಾರ ಬಂದರು ಮೀನುಗಾರರಿಗೆ ಸುರಕ್ಷಿತ ತಾಣ. ವಾಣಿಜ್ಯ ಬಂದರು ಅಭಿವೃದ್ಧಿಯಾದರೆ, ಇಲ್ಲಿ ಮೀನುಗಾರಿಕೆ ದೋಣಿಗಳಿಗೆ ಅವಕಾಶ ನೀಡುವುದಿಲ್ಲ. ಅದನ್ನು ನಾವು ಪಣಂಬೂರಿನಲ್ಲಿ ನೋಡಿದ್ದೇವೆ. ಮೀನುಗಾರರಿಗೆ ತುರ್ತು ಸಂದರ್ಭದಲ್ಲಿ ಕಾರವಾರ ಮೀನುಗಾರಿಕೆ ಬಂದರಿನಲ್ಲಿ ಆಶ್ರಯ ನಿಷೇಧಿಸಿದರೆ, ದೊಡ್ಡ ಅನಾಹುತಗಳು ಸಂಭವಿಸಲಿವೆ ಎಂದರು. ಗಣೇಶ ಸುವರ್ಣ, ಸುಧಾಕರ ಗುನಗಾ ಇದ್ದರು.

    ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣೆ ಕಾಮಗಾರಿಗೆ ಹೈ ತಡೆ: ಕಾರವಾರ: ಇಲ್ಲಿನ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಕಳೆದ 10 ದಿನಗಳಿಂದ ನಿರಂತರ ಹೋರಾಟ ನಡೆಸಿದ್ದ ಮೀನುಗಾರರಿಗೆ ಕೊಂಚ ಸಮಾಧಾನ ಸಿಕ್ಕಿದೆ.

    ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ, ನ್ಯಾ. ಹೇಮಂತ ಚಂದನ ಗೌಡರ್ ಅವರಿದ್ದ ದ್ವಿಸದಸ್ಯ ಪೀಠ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿದೆ. ಕಡಲ ತೀರದಲ್ಲಿ ಹಾಕಿದ ಕಲ್ಲುಗಳನ್ನು ತೆಗೆದು ಯಥಾ ಸ್ಥಿತಿ ಕಾಪಾಡಬೇಕು ಎಂದು ಸೂಚಿಸಿದೆ. ಅಲ್ಲದೆ, ಎದುರುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದಾವೆದಾರರ ಪರ ವಕೀಲ ಮೂರ್ತಿ ಡಿ.ನಾಯ್ಕ ತಿಳಿಸಿದ್ದಾರೆ.

    ಯಾವ ಕಾರಣಕ್ಕೆ ತಡೆ?: ಮೆರಿಟೈಮ್ ಬೋರ್ಡ್​ನ ಸಿಇಒ, ಬಂದರು ಇಲಾಖೆ ನಿರ್ದೇಶಕರು, ರಾಜ್ಯಮಟ್ಟದ ಪರಿಸರ ಹಾನಿ ಅಂದಾಜೀಕರಣ ಸಮಿತಿ, ಜಿಲ್ಲಾಧಿಕಾರಿ ಉತ್ತರ ಕನ್ನಡ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರದ ಪರಿಸರ ಅಧಿಕಾರಿ, ಹಾಗೂ ಕಾಮಗಾರಿ ಕೈಗೊಂಡ ಡಿವಿಪಿ ಇನ್​ಫ್ರಾ ಪ್ರೊಜೆಕ್ಟರ್ ಲಿಮಿಟೆಡ್ ಎಂಬ ಗುತ್ತಿಗೆ ಕಂಪನಿಯನ್ನು ಎದುರುದಾರರು ಎಂದು ಪರಿಗಣಿಸಲಾಗಿತ್ತು.

    ಬಂದರು ಇಲಾಖೆ ಬೈತಖೋಲ್​ನಲ್ಲಿ 17 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗೆ ಕರ್ನಾಟಕ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯ ಸಂಬಂಧ ಪರವಾನಗಿ ಪಡೆಯಬೇಕಿದೆ. ಆದರೆ, ಅಂಥಹ ಯಾವುದೇ ಪರವಾನಗಿಯನ್ನು ಪಡೆಯದೇ ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಸಂಬಂಧ ಮಂಡಳಿ ಬಂದರು ಇಲಾಖೆಗೆ ನೋಟಿಸ್ ನೀಡಿದ್ದರೂ ಪರವಾನಗಿ ಪಡೆಯದೇ ಕಾಮಗಾರಿ ಆರಂಭಿಸಲಾಗಿದೆ ಎಂದು ಕಾರವಾರ ಮೂಲದ ಹೈಕೋರ್ಟ್ ವಕೀಲ ಮೂರ್ತಿ ಡಿ.ನಾಯ್ಕ ಅವರು ಮೀನುಗಾರರ ಪರವಾಗಿ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದರು.

    ಕಾರವಾರ ಕಡಲ ತೀರ ಇಡೀ ಊರಿನ ಜನರ ವಿಹಾರದ ಸ್ಥಳವಾಗಿದೆ. ಅಲ್ಲಿ ಕಲ್ಲು ಹಾಕುವ ಮೂಲಕ ಅಲೆ ತಡೆ ಗೋಡೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಿಸಿದ್ದರು. ಈ ಕಾಮಗಾರಿಯಿಂದ ಭಾರತ ಸಂವಿಧಾನದಲ್ಲಿ ನೀಡಿದ ದೇಶದ ಪರೀಧಿಯಲ್ಲಿ ಓಡಾಡುವ ಹಕ್ಕು, ವೃತ್ತಿ ಮಾಡುವ ಹಕ್ಕು, ಜೀವಿಸುವ ಹಾಗೂ ವೈಯಕ್ತಿಕ ಜೀವನ ನಡೆಸುವ ಹಕ್ಕುನ್ನು ಕಾರವಾರಿಗರು ಕಳೆದುಕೊಳ್ಳುತ್ತಾರೆ. ಪರಿಸರಕ್ಕೆ ಹಾನಿಯಾಗುತ್ತದೆ ಎಂದು ವಾದ ಮಂಡಿಸಿದ್ದರು.

    ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಪರಿಸರ ಪರವಾನಗಿಯನ್ನು ವಾಪಸ್ ಪಡೆಯಬೇಕು. ಪರಿಸರ ಪರವಾನಗಿ ಪಡೆಯದೇ ಕಾಮಗಾರಿ ಪ್ರಾರಂಭಿಸಿದ ಬಂದರು ಅಧಿಕಾರಿಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಾನೂನು ಕ್ರಮ ಜರುಗಿಸಲು ಸೂಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts