More

    ಹೇಮಾವತಿ ನೀರು ನೆರೆಮನೆ ಪಾಲು

    ಹಾಸನ: ಅತಿವೃಷ್ಟಿಯಿಂದಾಗಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಭರ್ತಿಯಾದ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾದ ಬಹುಪಾಲು ನೀರು ನೆರೆ ರಾಜ್ಯ ತಮಿಳುನಾಡು, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಪಾಲಾಗಿದೆ.


    37 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಗೊರೂರಿನ ಹೇಮಾವತಿ ಜಲಾಶಯಕ್ಕೆ 2019ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ 109.120 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷದ ಮುಂಗಾರು ಆರಂಭದ ಅವಧಿಯಲ್ಲಿ ಉತ್ತಮ ಮಳೆಯಾಗದ ಕಾರಣ ಜಲಾಶಯ ತುಂಬುವುದೇ ಅನುಮಾನ ಎನ್ನುವ ಪರಿಸ್ಥಿತಿ ಇತ್ತು. ಆದರೆ ಆಗಸ್ಟ್ 6ರಿಂದ 11ರವರೆಗೆ ಸುರಿದ ಕುಂಭದ್ರೋಣ ಮಳೆ ಕೇವಲ ಐದು ದಿನಗಳಲ್ಲಿ ಅಣೆಕಟ್ಟು ಭರ್ತಿ ಮಾಡಿಸಿದ್ದಲ್ಲದೆ ದಾಖಲೆ ಪ್ರಮಾಣದಲ್ಲಿ ನೀರನ್ನು ಹೊರ ಹರಿಸಲು ಕಾರಣವಾಗಿತ್ತು.


    ಅತಿವೃಷ್ಟಿ ಹಾಗೂ ನಂತರದ ನೆರೆ ಸಮಸ್ಯೆಯಿಂದ ಜಿಲ್ಲೆ ನಲುಗಿ ಹೋಗಿತ್ತು. ಇಷ್ಟು ಕಷ್ಟಗಳಿಂದ ಚೇತರಿಸಿಕೊಂಡ ನಂತರ ಅಂಕಿ-ಅಂಶಗಳನ್ನು ಗಮನಿಸಿದರೆ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಬಹುಪಾಲು ಲಾಭ ಅನ್ಯ ರಾಜ್ಯ, ಜಿಲ್ಲೆಗಳಿಗೆ ದೊರಕಿರುವುದು ವೇದ್ಯವಾಗುತ್ತದೆ.


    ಗೊರೂರಿನ ಅಣೆಕಟ್ಟೆಯಿಂದ ಡಿಸೆಂಬರ್ ಅಂತ್ಯದವರೆಗೆ ನದಿಗೆ 44.86 ಟಿಎಂಸಿ ಅಡಿ ನೀರು ಹರಿಸಲಾಗಿದ್ದು, ಕೆಆರ್‌ಎಸ್ ಸೇರಿ ಅಲ್ಲಿಂದ ಮುಂದೆ ಅದು ತಮಿಳುನಾಡಿಗೆ ಹರಿದಿದೆ. ನಾಲೆಗಳಿಗೆ 47.75 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದ್ದು, ಬಹುಪಾಲು ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಹರಿದಿದೆ.


    ತುಮಕೂರಿಗೆ 24 ಟಿಎಂಸಿ ನೀರು: ಹೇಮಾವತಿ ಎಡದಂಡೆಯ ಎ ವಿಭಾಗ ಸಾಹುಕಾರ್ ಚನ್ನಯ್ಯ ನಾಲೆಗೆ 12.67 ಟಿಎಂಸಿ ನೀರು ಹಂಚಿಕೆಯಾಗಿದ್ದು, ಕಳೆದ ಡಿಸೆಂಬರ್ ಅಂತ್ಯದವರೆಗೆ 13.67 ಟಿಎಂಸಿ ನೀರು ಹರಿಸಲಾಗಿದೆ. ಬಿ.ವಿಭಾಗದ ನಾಲೆಯಲ್ಲಿ ತುಮಕೂರು ಕಡೆಗೆ 25.31 ಟಿಎಂಸಿ ಹಂಚಿಕೆಯಾಗಿದ್ದು, 24.30 ಟಿಎಂಸಿ ಹರಿಸಲಾಗಿದೆ. ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸಿರುವ ಬಲ ಮೇಲ್ದಂಡೆ ನಾಲೆಗೆ 3.76 ಟಿಎಂಸಿ ನೀರು ಹಂಚಿಕೆಯಾಗಿದ್ದು, ಪ್ರತಿ ವರ್ಷ ಅರ್ಧ ಪ್ರಮಾಣದ ನೀರೂ ಲಭ್ಯವಾಗದೆ ನಾಲೆ ಕಡೆ ಭಾಗದ ರೈತರು ಗೋಳು ತೋಡಿಕೊಳ್ಳುತ್ತಿದ್ದರು. ಅಪರೂಪಕ್ಕೆಂಬಂತೆ ಅಲ್ಲಿಗೆ ಕಳೆದ ಬಾರಿ 6.51 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

    ಸದ್ಯ 19.07 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ 14.70 ಟಿಎಂಸಿ ಬಳಕೆಗೆ ಲಭ್ಯವಿದೆ.
    ಕೆರೆಗಳು ಭರ್ತಿ: ಗೊರೂರಿನ ಹೇಮಾವತಿ ಅಣೆಕಟ್ಟು ವಿಭಾಗದ 97, ಹೇಮಾವತಿ ಬಲಮೇಲ್ದಂಡೆ ನಾಲೆ ವಿಭಾಗದ 226, ಹೊಳೆನರಸೀಪುರ ವಿಭಾಗದ 118, ಚನ್ನರಾಯಪಟ್ಟಣದ ಎಡದಂಡೆ ನಾಲಾ ವಿಭಾಗದ 21, ಯಗಚಿ ಯೋಜನಾ ವಿಭಾಗದ 39 ಸೇರಿ ಒಟ್ಟು 501 ಕೆರೆಗಳಿಗೆ ನೀರು ಹರಿಸಲಾಗಿದ್ದು, 489 ಕೆರೆಗಳ ಒಡಲು ಸಂಪೂರ್ಣ ಭರ್ತಿಯಾಗಿದೆ. 10 ಕೆರೆಗಳು ಶೇ.75ರಷ್ಟು ಹಾಗೂ 2 ಕೆರೆಗಳು ಶೇ. 2ರಷ್ಟು ಭರ್ತಿಯಾಗಿವೆ.


    ತುಮಕೂರು, ಮಂಡ್ಯದ ಕೆರೆಗಳಿಗೆ ಜೀವ ಕಳೆ: ಕಳೆದ ಡಿಸೆಂಬರ್‌ವರೆಗೆ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದಿದ್ದು, ಎಡದಂಡೆ ನಾಲಾ ವ್ಯಾಪ್ತಿಯ ತಿಪಟೂರು, ತುರುವೇಕೆರೆ, ಗುಬ್ಬಿ, ತುಮಕೂರು, ಕುಣಿಗಲ್, ನಾಗಮಂಗಲ ತಾಲೂಕುಗಳ ವ್ಯಾಪ್ತಿಯ ಒಟ್ಟು 276 ಕೆರೆಗಳು ಭರ್ತಿಯಾಗಿವೆ.


    ಜಲಾಶಯದಲ್ಲಿ ಸಂಗ್ರಹವಾದ ನೀರಿನ ಸಿಂಹಪಾಲು ತಮಿಳುನಾಡು ಹಾಗೂ ನೆರೆ ಜಿಲ್ಲೆಗಳ ಪಾಲಾಗಿದ್ದು, ಚನ್ನರಾಯಪಟ್ಟಣ ತಾಲೂಕಿನಲ್ಲಿ ಸತತ ಬರದಿಂದ ನಲುಗುತ್ತಿರುವ ಹಿರೀಸಾವೆ, ನುಗ್ಗೆಹಳ್ಳಿ ಹೋಬಳಿಗಳ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ತಮ್ಮದೇ ಜಿಲ್ಲೆಯಲ್ಲಿ ಸಂಗ್ರಹವಾಗುವ ನೀರನ್ನು ಇಲ್ಲಿನ ರೈತರು ಪಡೆಯಲು ಸಾಧ್ಯವಾಗುತ್ತಿಲ್ಲ.


    ಮಾಧುಸ್ವಾಮಿ ಪ್ರಭಾವ: ಪ್ರತಿ ವರ್ಷವೂ ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ ಎಂದು ಅಲ್ಲಿನ ರಾಜಕಾರಣಿಗಳು ಆರೋಪಿಸುವುದು ಮಾಮೂಲಿ ಸಂಗತಿ ಎಂಬಂತಾಗಿದೆ. ಕಾವೇರಿ ನೀರಾವರಿ ನಿಗಮದ ದಾಖಲೆಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಹೇಮಾವತಿ ಎಡದಂಡೆ ನಾಲೆಯಲ್ಲಿ 90 ಟಿಎಂಸಿಗೂ ಅಧಿಕ ಪ್ರಮಾಣದ ನೀರು ಹರಿದಿತ್ತು. ಆದರೆ ಅಷ್ಟು ಪ್ರಮಾಣದ ನೀರು ತಲುಪುತ್ತಿಲ್ಲ ಎಂದು ಆ ಭಾಗದ ಜನಪ್ರತಿನಿಧಿಗಳು ಆರೋಪಿಸುತ್ತಲೇ ಇದ್ದರು.


    ಹಾಸನ ಹಾಗೂ ತುಮಕೂರು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ನೇಮಕವಾದ ಜೆ.ಸಿ.ಮಾಧುಸ್ವಾಮಿ ಅವರ ಮೊದಲ ಆದ್ಯತೆಯೂ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವುದೇ ಆಗಿತ್ತು. ಅಧಿಕಾರಿಗಳೊಂದಿಗೆ ನಾಲೆ ರಸ್ತೆಯಲ್ಲಿ ಸುತ್ತಾಡಿ ಸಮಸ್ಯೆಗಳನ್ನು ಅರಿತ ಅವರು ಎಡದಂಡೆ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುವಂತೆ ನೋಡಿಕೊಂಡರು. ಅದನ್ನು ಬಳಕೆ ಮಾಡಿಕೊಂಡು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕೆರೆಗಳನ್ನು ಭರ್ತಿ ಮಾಡಿಸಿದರು. ಇದರಿಂದ ಮುಂದಿನ 2-3 ವರ್ಷ ಆ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗುವ ಆಶಾಭಾವ ಮೂಡಿದೆ.


    ಹೇಮಾವತಿ ಜಲಾಶಯ ಕಾವೇರಿ ನದಿ ಪಾತ್ರದಲ್ಲಿರುವುದರಿಂದ ಇಲ್ಲಿನ ಹನಿ ನೀರನ್ನೂ ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ಕಾವೇರಿ ನ್ಯಾಯಾಧೀಕರಣದ ತೀರ್ಪಿನಲ್ಲಿ ಹಂಚಿಕೆಯಾಗಿರುವ ನೀರನ್ನು ಮಾತ್ರವೆ ನಾವು ಉಪಯೋಗಿಸಲು ಸಾಧ್ಯ. ತಮಿಳುನಾಡಿಗೆ ಮುಂಗಾರು ವೇಳೆ ಪ್ರತಿ ತಿಂಗಳು ಕೋಟಾ ಪ್ರಕಾರವಾಗಿ ನೀರು ಹರಿಸಿ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಮಾತ್ರವೇ ಈಗಾಗಲೇ ನಿಗದಿಯಾಗಿರುವ ಯೋಜನೆಗಳನ್ನು ಹೊರತುಪಡಿಸಿ ಉಳಿದ ಉದ್ದೇಶಕ್ಕೆ ಬಳಕೆ ಮಾಡಬಹುದು.
    ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ವಾರ್ಷಿಕ ಹೇಮಾವತಿ ಯೋಜನೆಯ ನೀರಿನ ಹಂಚಿಕೆ ಪ್ರಮಾಣ 43.67 ಟಿಎಂಸಿ ಅಡಿಯಾಗಿದ್ದು, ಹೇಮಾವತಿ ಯೋಜನಾ ವಲಯ ಗೊರೂರು ವಿಭಾಗಕ್ಕೆ 18.36 ಟಿಎಂಸಿ, ತುಮಕೂರು ವಲಯಕ್ಕೆ 25.31 ಟಿಎಂಸಿ ನೀರು ಹಂಚಿಕೆಯಾಗಿದೆ.
    ಹಾಸನ ಜಿಲ್ಲೆಯ 107480, ಮೈಸೂರು ಗಡಿಭಾಗಗಳನ್ನು ಸೇರಿದಂತೆ ಮಂಡ್ಯ ಜಿಲ್ಲೆಯ 163520, ತುಮಕೂರು ಜಿಲ್ಲೆಯ 384000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹೇಮಾವತಿ ಜಲಾಶಯ ಯೋಜನೆಯ ಉದ್ದೇಶವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts