More

    ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳಿಂದ ಶೋಧ

    ಅಥಣಿ: ಪಟ್ಟಣದ ಹೆಸ್ಕಾಂ ಕಚೇರಿಯ ವಿವಿಧ ವಿಭಾಗಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿದೇರ್ಶಕರ ಆದೇಶದ ಮೇರೆಗೆ ಹೆಸ್ಕಾಂ ಇಲಾಖೆಯ 33 ಜನ ಆರ್ಥಿಕ ಸಲಹೆಗಾರರು ಮತ್ತು ತನಿಖಾಧಿಕಾರಿಗಳು ಸೂಕ್ತ ಭದ್ರತೆಯ ನಡುವೆ ಗುರುವಾರ ದಿನವಿಡೀ ದಾಖಲೆ ಪರಿಶೀಲಿಸಿದರು.

    ಭ್ರಷ್ಟಾಚಾರ ನಡೆದಿದೆ ಎನ್ನಲಾದ ಕಾಮಗಾರಿ ಸ್ಥಳಗಳಿಗೂ ತನಿಖಾಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದರು. ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ಅಧಿಕಾರಿಗಳು ಸೂಕ್ತ ಭದ್ರತೆ ನಡುವೆ ಏಕಕಾಲಕ್ಕೆ ತನಿಖೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಭ್ರಷ್ಟಾಚಾರದ ವಾಸನೆ ಸದ್ದು ಮಾಡಿದ್ದು, ಸುಮಾರು 10ರಿಂದ 20 ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಲ್ಯಾಂಡ್ ಡೆವಲಪರ್ಸ್‌ಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳ ತಲೆತಂಡ ಖಚಿತ ಎನ್ನಲಾಗುತ್ತಿದೆ.

    ಎರಡು ದಿನದ ಹಿಂದಷ್ಟೇ ಅಥಣಿ ಹೆಸ್ಕಾಂ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಮಾಹಿತಿ ಕಲೆ ಹಾಕಿದ್ದ ಆರು ತನಿಖಾಧಿಕಾರಿಗಳ ತಂಡ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುಳಿವು ದೊರೆತ ನಂತರ ಅಗತ್ಯ ದಾಖಲಾತಿ ತೆಗೆದುಕೊಂಡು ಹಿಂದಿರುಗಿದ್ದರು. ನಂತರ ಮೇಲಧಿಕಾರಿಗಳ ಪರಿಶೀಲನೆ ನಂತರ ತನಿಖಾತಂಡದ ಅಧಿಕಾರಿಗಳು ಸೂಕ್ತ ಭದ್ರತೆಯೊಂದಿಗೆ ಮತ್ತೆ ಗುರುವಾರ 33 ಜನರಿದ್ದ ಅಧಿಕಾರಿಗಳ ತಂಡ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.

    ಸಾರ್ವಜನಿಕರು ನೀಡಿದ ದೂರಿನ ಅನ್ವಯ ಮತ್ತು ರೈತ ಸಂಘಟನೆಗಳು ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಭ್ರಷ್ಟಾಚಾರ ಬಯಲಿಗೆ ಎಳೆದು ಇಲಾಖೆಗೆ ಆಗಿರುವ ನಷ್ಟ ತುಂಬಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಮೇಲೂ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹೆಸ್ಕಾಂ ಎಂಡಿ ಭಾರತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts